ಹೊಸದಿಲ್ಲಿ: ಜಾರ್ಖಂಡ್‌ನಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ರಾಂಚಿ ಮತ್ತು ರಾಜಸ್ಥಾನದ 10 ಸ್ಥಳಗಳಲ್ಲಿ ಬೆಳ್ಳಂಬೆಳಗ್ಗೆ ಶೋಧ ಕಾರ್ಯ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇಡಿ ದಾಳಿಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ರಿಕಾ ಸಲಹೆಗಾರ ಅಭಿಷೇಕ್ ಪ್ರಸಾದ್ ಅವರ ನಿವಾಸಕ್ಕೂ ಅಧಿಕಾರಿಗಳ ತಂಡ ಧಾವಿಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಲಾಗಿದೆ.
ಹಜಾರಿಬಾಗ್ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ದುಬೆ ಮತ್ತು ಸಾಹಿಬ್ ಗಂಜ್ ಜಿಲ್ಲಾಧಿಕಾರಿ ರಾಮ್ ನಿವಾಸ್ ಅವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಾನೂನುಬಾಹಿರ ವ್ಯವಹಾರಗಳನ್ನು ಸುಗಮಗೊಳಿಸುವಲ್ಲಿ ಮಹತ್ವದ ಪಾತ್ರಗಳನ್ನು ವಹಿಸುತಿದ್ದ ಹಲವಾರು ಮಧ್ಯವರ್ತಿಗಳ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ದಾಖಲೆಗಳನ್ನು ಶೋಧಿಸುತ್ತಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಜಾರಿ ನಿರ್ದೇಶನಾಲಯ (ಇಡಿ) ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ಬಳಿಕ ತನಿಖಾ ಸಂಸ್ಥೆ ಬುಧವಾರ ರಾಂಚಿ ಮತ್ತು ರಾಜಸ್ಥಾನದಾದ್ಯಂತ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ.