Advertisement

ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಹಕರಿಸಿ

05:36 PM Mar 23, 2018 | Team Udayavani |

ಯಾದಗಿರಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವ ವೀರೇಂದ್ರಕುಮಾರ ಅವರು, ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಗುರುವಾರ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿದರು.

Advertisement

ಮಕ್ಕಳ ಪೌಷ್ಟಿಕಾಂಶ ನಿವಾರಣೆಗೆ ಏನೆಲ್ಲ ಆಹಾರ ತಿನಿಸುಗಳನ್ನು ನೀಡಲಾಗುತ್ತಿದೆ ಎಂಬ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದರು. ಶೇಂಗಾ, ಎಳ್ಳು, ಕೊಬ್ಬರಿ ಮಿಶ್ರಣದ ಚಿಕ್ಕಿ ಸೇವಿಸಿದ ಅವರು, ಉಂಡೆಯನ್ನು ಇನ್ನೂ ಹೆಚ್ಚಿನ ಪ್ರಮಾಣ(ದಪ್ಪ)ದಲ್ಲಿ ನೀಡಬೇಕು ಎಂದು ಸೂಚಿಸಿದರು. ಮಗುವೊಂದಕ್ಕೆ ಸ್ವತಃ ತಾವೇ ಒಂದು ಲೋಟ ಹಾಲು ಕುಡಿಸಿದರು. ಅಲ್ಲದೇ ಮೊಟ್ಟೆ ಹಾಗೂ ಉಂಡೆಗಳನ್ನು ಎಲ್ಲ ಮಕ್ಕಳಿಗೆ ವಿತರಿಸಿದರು. ಬಳಿಕ ಮಕ್ಕಳ ಕಲಿಕಾ ಗುಣಮಟ್ಟ ಪರೀಕ್ಷಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು, ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬಿದರು.
 
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ನೀತಿ ಆಯೋಗದ ನಿರ್ದೇಶನದಂತೆ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದೇವೆ. ಜಿಲ್ಲೆಯಲ್ಲಿ ಕಡಿಮೆ ತೂಕದ ಮಕ್ಕಳು ಅನೀಮಿಯಾದಿಂದ ಬಳಲುತ್ತಿದ್ದಾರೆ.  ಅಪೌಷ್ಟಿಕತೆಗೆ ಒಳಗಾಗುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇದರ ನಿವಾರಣೆಗೆ ಮಾತ್ರೆಗಳ ವಿತರಣೆ ಜತೆಗೆ, ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ದೇಶದ ಇತರೆ ಜಿಲ್ಲೆಗಳಂತೆ ಯಾದಗಿರಿ ಜಿಲ್ಲೆಯನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಈ ಭಾಗದಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದು ಹೆಚ್ಚಿನ ಪ್ರಮಾಣದಲ್ಲಿದೆ. ಇದು ಮಗು ಮತ್ತು
ತಾಯಂದಿರಲ್ಲಿ ಅಪೌಷ್ಟಿಕತೆ ಹೆಚ್ಚಾಗಲು ಕಾರಣವಾಗಿದೆ. ಅಪೌಷ್ಟಿಕತೆ ನಿವಾರಣೆಗೆ ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಆಶನಾಳ ತಾಂಡಾಕ್ಕೆ ಭೇಟಿ ನೀಡಿದ ಸಚಿವರು, ತಾಂಡದಲ್ಲಿರುವ ಅಂಗನವಾಡಿ ಕೇಂದ್ರ ಪರಿಶೀಲಿಸಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. 

ಶಾಸಕ ಡಾ| ಎ.ಬಿ. ಮಾಲಕರೆಡ್ಡಿ, ಜಿಪಂ ಸದಸ್ಯ ಅಮರದೀಪ ನಾಯಕ, ಜಂಟಿ ಕಾರ್ಯದರ್ಶಿಗಳಾದ ಡಾ| ರಾಜೇಶಕುಮಾರ, ಕೆ. ಮೋಸಸ್‌ ಚಲಾಯಿ, ನಿರ್ದೇಶಕರಾದ ಮನೋಜಕುಮಾರ ಸಿಂಗ್‌, ಜಿಲ್ಲಾಧಿಕಾರಿ ಜೆ. ಮಂಜುನಾಥ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಅವಿನಾಶ ಮೆನನ್‌ ರಾಜೇಂದ್ರನ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಕಾಂತ, ಸಿಡಿಪಿಒ ರೆಹಮಾನ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next