Advertisement

ಕಷ್ಟದಲ್ಲಿರುವ ಮಕ್ಕಳ ನೆರವಿಗೆ ಸಹಾಯವಾಣಿ

03:07 PM Feb 05, 2020 | Suhan S |

ಹಾವೇರಿ: ಸಂಕಷ್ಟ ಹಾಗೂ ಅಪಾಯದಲ್ಲಿರುವ ಮಕ್ಕಳಿಗಾಗಿ ದಿನದ 24 ತಾಸು ನೆರವು ಹಾಗೂ ಆಶ್ರಯ ಒದಗಿಸಲು ಮಕ್ಕಳ ಸಹಾಯವಾಣಿ ಕೇಂದ್ರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಐದು ವರ್ಷದಲ್ಲಿ 2244 ಕರೆ ಸ್ವೀಕರಿಸಿ ಮಕ್ಕಳ ಸಮಸ್ಯೆಗೆ ಸ್ಪಂದಿಸಿದೆ.

Advertisement

ವೈದ್ಯಕೀಯ ನೆರವು ಕೋರಿ 171 ಕರೆಗಳು, ವಸತಿ ಸೌಲಭ್ಯ ಕೋರಿ 101 ಕರೆಗಳು, ಆಪ್ತ ಸಮಾಲೋಚನೆಗಾಗಿ 30 ಕರೆಗಳು, ಮಕ್ಕಳ ಪತ್ತೆ ಹಾಗೂ ಕಾಣೆಯಾದ ಮಕ್ಕಳ ಕುರಿತಂತೆ 71 ಕರೆಗಳು, ತೊರೆದ ಮಕ್ಕಳಿಗೆ ಸಂಬಂಧಿಸಿದ 2 ಕರೆಗಳು, ಶಾಲೆಗಳಿಗೆ ಸಂಬಂಧಿಸಿದ 123 ಕರೆಗಳು, ಶಾಲೆ ತೊರೆದ ಮಕ್ಕಳಿಗೆ ಸಂಬಂಧಿಸಿದ 116 ಕರೆಗಳು,

ಭಿಕ್ಷಾಟನೆ ಮಾಡುತ್ತಿರುವ ಮಕ್ಕಳಿಗೆ ಸಂಬಂಧಿಸಿದ 45 ಕರೆಗಳು, ಬಾಲ್ಯ ವಿವಾಹಕ್ಕೆ ಸಂಬಂಧಿ ಸಿದ 91 ಕರೆಗಳು, ಬಾಲ ಕಾರ್ಮಿಕರಿಗೆ ಸಂಬಂಧಿ ಸಿದ 32 ಕರೆಗಳು, ದೈಹಿಕ ದೌರ್ಜನ್ಯ ಕುರಿತಂತೆ 101 ಕರೆಗಳು, ಮಾನಸಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 44 ಕರೆಗಳು, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ 23 ಕರೆಗಳು, ಮರಣ ಸಂಬಂಧಿಯ 2 ಕರೆಗಳು, ಪ್ರಾಯೋಜಕತ್ವದ 46 ಕರೆಗಳು, ಪತ್ತೆಯಾಗದಿರುವ 101 ಕರೆಗಳು, ಇತರ ಮಕ್ಕಳ ಸಮಸ್ಯೆ ಕುರಿತಂತೆ 101 ಕರೆ ಸ್ವೀಕರಿಸಿ ಸಕಾಲಕ್ಕೆ ಸ್ಪಂದಿಸಲಾಗಿದೆ.

ಕಾರ್ಯನಿರ್ವಹಣೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೆರವಿನೊಂದಿಗೆ ಜಿಲ್ಲೆಯಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಸಹಾಯಕಸಂಸ್ಥೆಯಾಗಿ ಹಾನಗಲ್ಲ ರೋಶನಿ ಸಮಾಜ ಸೇವಾ ಸಂಸ್ಥೆ ಕೆಲಸ ಮಾಡುತ್ತಿವೆ. ಬೀದಿ ಮೇಲೆ ಬದುಕುವ ಮಕ್ಕಳು, ಹಿಂಸೆ ಮತ್ತು ದುರುಪಯೋಗಕ್ಕೆ ಈಡಾದ ಮಕ್ಕಳು, ಮಾನಸಿಕ ಹಾಗೂ ಶಾರೀರಿಕ ಅಂಗವಿಕಲ, ಬಾಲ್ಯ ವಿವಾಹಕ್ಕೀಡಾದ ಹಾಗೂ ಕಾಣೆಯಾದ ಮಕ್ಕಳು, ಮಾದಕ ವಸ್ತುಗಳ ವ್ಯಸನಿಗಳು, ಬಾಲ ಕಾರ್ಮಿಕರು, ತಿರಸ್ಕೃತ ಹಾಗೂ ನಿರ್ಗತಿಕ ಮಕ್ಕಳು, ಆಶ್ರಯ ಕೋರಿ ಬರುವ ಮಕ್ಕಳ ನೆರವಿಗಾಗಿ ಚೈಲ್ಡ್ ಲೈನ್‌ ಕಾರ್ಯನಿರ್ವಹಿಸುತ್ತಿದೆ.

1098ಕ್ಕೆ ಕರೆ ಮಾಡಿ: ಮಕ್ಕಳು ಅಥವಾ ಮಕ್ಕಳ ಬಗ್ಗೆ ಕಾಳಜಿಯುಳ್ಳ ವಯಸ್ಕರರು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿದಾಗ ತಕ್ಷಣ ಸಂಬಂಧಿ ಸಿದ ಚೈಲ್ಡ್‌ಲೈನ್‌ ಕೇಂದ್ರಗಳಿಗೆ ಕರೆ ರವಾನೆಯಾಗುತ್ತದೆ. ಕರೆ ಸ್ವೀಕರಿಸಿದ 60 ನಿಮಿಷದೊಳಗೆ ಚೈಲ್ಡ್‌ಲೈನ್‌ ತಂಡವು ನೆರವಿನ ಅವಶ್ಯವಿರುವ ಮಕ್ಕಳಿರುವ ಸ್ಥಳಕ್ಕೆ ಧಾವಿಸಿ ಅಗತ್ಯ ನೆರವು ಒದಗಿಸುತ್ತದೆ. ಮಕ್ಕಳ ರಕ್ಷಣೆ ಹಾಗೂ ನೆರವು ಕೋರಿ ಸಹಾಯವಾಣಿಗೆ ಬರುವ ಕರೆಗಳನ್ನು ಆಯಾ ವಿಭಾಗದ ಚೈಲ್ಡ್‌ಲೈನ್‌ ಕಾರ್ಯಕರ್ತರಿಗೆ ವರ್ಗಾವಣೆ ಮಾಡಲಾಗುತ್ತದೆ.

Advertisement

ಕರೆ ಸ್ವೀಕರಿಸಿದ ತಕ್ಷಣ ರಕ್ಷಣೆ ಅಥವಾ ನೆರವು ಅಗತ್ಯವಿರುವ ಮಕ್ಕಳ ಸ್ಥಳಕ್ಕೆ ಕಾರ್ಯಕರ್ತರು ಸಂಪರ್ಕಿಸಿ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ದಿನದ 24 ಗಂಟೆಗಳ ಉಚಿತ ಕರೆಗಳನ್ನು ಸ್ವೀಕರಿಸಲಾಗುತ್ತದೆ, ಪ್ರತಿ ಕರೆಯನ್ನು ಗಂಭೀರವಾಗಿ ಪರಿಗಣಿಸಿ ಅನುಸರಣಾ ಸೇವೆ ಒದಗಿಸಲಾಗುತ್ತದೆ. ಕರೆ ಸ್ವೀಕರಿಸಿ ಮಗುವಿರುವ ಸ್ಥಳಕ್ಕೆ ತಲುಪುವುದು ಹಾಗೂ ಮಗುವನ್ನು ಸುರಕ್ಷತಾ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ. ಪ್ರತಿ ಮಗುವಿಗೂ ಆಪ್ತ ಸಮಾಲೋಚನೆ ಮತ್ತು ಅವಶ್ಯಕತೆಗೆ ತಕ್ಕಂತೆ ಪುನರ್ವಸತಿ, ಅನುಸರಣೆ ಮಾಡುವ ಕಾರ್ಯವಾಗಿ ನಿರ್ವಹಿಸುತ್ತದೆ.

ಕರೆ ಮಾಡಿ ನೆರವು ನೀಡಿ :  ಮಕ್ಕಳ ನೆರವಿಗೆ ಧಾವಿಸುವ ಸಾರ್ವಜನಿಕರು, ಪೋಷಕರು, ಮಕ್ಕಳು ಅಗತ್ಯ ಸಂದರ್ಭದಲ್ಲಿ ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆದುಕೊಳ್ಳಬಹುದು. ಕಷ್ಟದಲ್ಲಿರುವ ಮಕ್ಕಳಿಗಾಗಿ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ನೆರವು ಒದಗಿಸಿ ಎಂದು ಚೈಲ್ಡ್‌ಲೈನ್‌ ಸಂಸ್ಥೆ ಮನವಿ ಮಾಡಿದೆ.

ಜಾಗೃತಿ ಕಾರ್ಯ :  ಮಕ್ಕಳ ಸಹಾಯವಾಣಿ ಕೇಂದ್ರದಿಂದ ಪಾಲುದಾರ ಇಲಾಖೆಗಳೊಂದಿಗೆ ಮಕ್ಕಳ ಹಕ್ಕುಗಳ ಕುರಿತಂತೆ ನಿರಂತರ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿವಿಧ ಅಧಿ ಕಾರಿಗಳು ಹಾಗೂ ಮಕ್ಕಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞರನ್ನೊಳಗೊಂಡ ಸಲಹಾ ಸಮಿತಿಯಿಂದ ಕಾಲಕಾಲಕ್ಕೆ ಸಭೆ ನಡೆಸಿ ಮಕ್ಕಳ ರಕ್ಷಣೆ, ಪೋಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ನಿರಂತರ ಸಮನ್ವಯತೆ-ಸಹಾಯ ಪಡೆಯುತ್ತದೆ. ಮಕ್ಕಳ ಸಮಸ್ಯೆಗಳ ಕುರಿತಂತೆ ಅಧ್ಯಯನ ಕೈಗೊಳ್ಳುವುದು ಹಾಗೂ ಸರ್ಕಾರದ ಗಮನಕ್ಕೆ ತರುವ ಕೆಲಸ ನಿರ್ವಹಿಸುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸಹ ನಿರ್ವಹಿಸುತ್ತದೆ. ಮಕ್ಕಳ ಸಹಾಯವಾಣಿ ನೆರವು ಹಾಗೂ ಜಾಗೃತಿಗಾಗಿ ಹಲವು ಯೋಜನೆ ರೂಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next