ವಿಜಯಪುರ: ದೇಶಕ್ಕೆ ಯಾವುದಾದರೂ ಸಂಕಷ್ಟದ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ದೇಶದ ಬೆನ್ನುಲಬಾಗಿ ನಿಲ್ಲುವ ಯುವಶಕ್ತಿಯ ಬಲಿಷ್ಠ ಸಂಘಟನೆಯೇ ನಮ್ಮದು ಎಂದು ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮಿಸೆ ಹೇಳಿದರು.
ನಗರದ ಪಿಡಿಜೆ ಕಾಲೇಜಿನಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ ಮಹಾನಗರ ಅಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 73 ವರ್ಷಗಳಿಂದ ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಧ್ವನಿಯಾಗಿ ನಿಲ್ಲುವ ಸಂಘಟನೆ ಎಬಿವಿಪಿ. ಸಾಮಾನ್ಯವಾಗಿ ಕಾಲೇಜಿಗೆ ಬಂದಿರುವ ವಿದ್ಯಾರ್ಥಿಗಳಲ್ಲಿ ಈ ದೇಶದ ಮಹಾನ್ ಪುರುಷರ ವಿಚಾರಗಳನ್ನು ತುಂಬಿ ಈ ದೇಶದ ಶಕ್ತಿಯನ್ನಾಗಿ ಪರಿವರ್ತನೆ ಮಾಡುವ ಕಾರ್ಯವನ್ನು ಎಬಿವಿಪಿ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಿ.ಕೆ. ಕುಲಕರ್ಣಿ ಮಾತನಾಡಿ, ಯುವಶಕ್ತಿ ದೇಶದ ಪರ ಚಿಂತನೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳ ಬೇಕು. ಯುವಕರ ಪ್ರೇರಣಾ ವ್ಯಕ್ತಿಗಳು ಚಲನಚಿತ್ರ ನಟ-ನಟಿಯರನ್ನು ಮಾಡಿ ಕೊಳ್ಳದೆ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ವ್ಯಕ್ತಿಗಳು ಪ್ರೇರಣೆಯನ್ನಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಎಬಿವಿಪಿಯ ಕಾರ್ಯಕರ್ತರು ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವಾ ಚಟುವಟಿಕೆಗಳ ಕಾರ್ಯವೂ ನಿಜಕ್ಕೂ ಎಲ್ಲರಿಗೂ ಪ್ರೇರಣೆ ದಾಯಕವಾಗಿದೆ. ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರಿಗೆ 31 ದಿನಗಳ ಕಾಲ ಉಚಿತ ಫುಡ್‌ಕಿಟ್ ವಿತರಣೆ, ಸರ್ಕಾರಿ ಕಚೇರಿಗಳ ಸ್ಯಾನಿಟೈಸ್, ಉಚಿತ ಮಾಸ್ಕ್ ವಿತರಣೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮಾಡಿದ ಕಾರ್ಯಕರ್ತರ ಸೇವೆ ಸ್ಮರಿಸಿದರು.ನಗರ ಸಂಘಟನಾ ಕಾರ್ಯದರ್ಶಿ ನಾರಗಾಜ ಬಟಗೇರಾ ಸಮಾರೋಪ ಭಾಷಣ ಮಾಡಿದರು.
ಇದೇ ವೇಳೆ ಎಬಿವಿಪಿ ನಗರ ಘಟಕದ ಅಧ್ಯಕ್ಷರಾಗಿ ಅಮಿತಕುಮಾರ ಬಿರಾದಾರ, ಕಾರ್ಯದರ್ಶಿಯಾಗಿ ಸಿದ್ದು ಪತ್ತಾರ ಮರು ಆಯ್ಕೆಯಾದರು. ನಗರ ಉಪಾಧ್ಯಕ್ಷರಾಗಿ ಓಂಕಾರ ನಾವಿ, ಸೀಮಾ ಹೋನವಾಡ, ಐ.ಬಿ. ಜಾಬಾ, ತಾಲೂಕು ಸಹ ಸಂಚಾಲಕರಾಗಿ ಮಹಂತೇಶ ಕಂಬಾರ, ತಾಲೂಕು ಹಾಸ್ಟೆಲ್ ಪ್ರಮುಖರಾಗಿ ಸಂತೋಷ ದೊಡಮನಿ, ನಗರ ಸಹ ಕಾರ್ಯದರ್ಶಿಗಳಾಗಿ ಮಂಜುನಾಥ ಹಳ್ಳಿ, ವರ್ಷಾ ನಂದಿ, ಐಶ್ವರ್ಯ ಪಾಟೀಲ, ಸಿದ್ದು ಉಪ್ಪಾರ, ಅಧ್ಯಯನ ಕೇಂದ್ರ ಪ್ರಮುಖರಾಗಿ ನಾನಾಗೌಡ ಪಾಟೀಲ, ಹಾಸ್ಟೆಲ್ ಪ್ರಮುಖರಾಗಿ ಮಹೇಶ, ಸಹ ಪ್ರಮುಖರಾಗಿ ಕಿರಣ ದೊಡಮನಿ, ಸಂಪರ್ಕ ಪ್ರಮುಖರಾಗಿ ಮಾಲೂ ಪೂಜಾರಿ, ಕಾರ್ಯಾಲಯ ಕಾರ್ಯದರ್ಶಿಯಾಗಿ ಆಕಾಶ ರಂಜನಗಿ, ಕಾರ್ಯಕಾರಣಿ ಸದಸ್ಯರಾಗಿ ರೇಖಾ ಅರಕೇರಿ, ಅಮೋಘಸಿದ್ದ ಮರನೂರ, ಬಸವರಾಜ ಓಕಾರ, ಅರವಿಂದ, ಅಮೂಲ್ಯ ಮೋರೆ, ಕಾವೇರಿ ಕಂದಗೊಳ, ಭಾಗ್ಯಾ ಆಯ್ಕೆಯಾದರು.