Advertisement

ಮದುವೆ ಅನಂತರವೂ ಹೆತ್ತವರಿಗೆ ಸಹಾಯಹಸ್ತ…

11:06 PM Oct 06, 2019 | Sriram |

ಒಂದು ಸಣ್ಣ ಕುಟಂಬ. ಅಪ್ಪ, ಅಮ್ಮ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿರುವ ಸುಂದರ ಕುಟುಂಬ. ಅಕ್ಕನಿಗೆ ಖಾಸಗಿ ಕಂಪೆನಿಯಲ್ಲಿ ಕೆಲಸ. ತಂಗಿ ಪದವಿ ವಿದ್ಯಾರ್ಥಿನಿ. ಅಕ್ಕನಿಗೆ ಮದುವೆ ವಯಸ್ಸು. ಸಹಜವಾಗಿಯೇ ಹೆತ್ತವರು ಸೂಕ್ತ ಗಂಡಿಗಾಗಿ ವರಾನ್ವೇಷಣೆಯಲ್ಲಿ ತೊಡಗುತ್ತಾರೆ. ಆದರೆ ಎಷ್ಟೇ ಉತ್ತಮ ಹುಡುಗನ ಪ್ರಸ್ತಾಪಗಳು ಬಂದರೂ ದೊಡ್ಡಮಗಳು ಮದುವೆ ಒಪ್ಪುತ್ತಿಲ್ಲ. ಒಂದಲ್ಲ ಒಂದು ಕಾರಣಗಳನ್ನು ಹೇಳಿ ಆಕೆ ಪ್ರಸ್ತಾವಗ‌ಳನ್ನು ಮುರಿಯುತ್ತಿದ್ದಳು. ತಂದೆ-ತಾಯಿಗೆ ಇದು ಗೊಂದಲದ ಗೂಡಾಗಿ ಹೋಗಿತ್ತು.

Advertisement

ಹೀಗೆ ಒಂದು ದಿನ ಸಂಬಂಧಿಕರೊಬ್ಬರು ಮನೆಗೆ ಬಂದಾಗ ಅವರಲ್ಲಿ ಹೆತ್ತವರು ಈ ವಿಷಯವನ್ನು ಹೇಳಿಕೊಳ್ಳುತ್ತಾರೆ. ಅನಂತರ ಅವರು ದೊಡ್ಡಮಗಳ ಬಳಿ ಬಂದು ಏನು ಸಮಸ್ಯೆ ಎಂದು ಕೇಳಿದಾಗ ಅದಕ್ಕೆ ಸಿಕ್ಕ ಉತ್ತರ “ತಂದೆ ತಾಯಿಗೆ ನಾವಿಬ್ಬರು ಹೆಣ್ಣು ಮಕ್ಕಳು. ತಂಗಿ ಇನ್ನು ಶಿಕ್ಷಣ ಮುಗಿಸಿಲ್ಲ. ತಂದೆಗೆ ವಯಸ್ಸಾಗಿದೆ. ದುಡಿಯುವ ಶಕ್ತಿ ಇಲ್ಲ. ನಾನು ಮದುವೆಯಾಗಿ ಹೋದರೆ ಮನೆಯ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ. ಹೆತ್ತವರನ್ನು ಯಾರು ನೋಡಿಕೊಳ್ಳುತ್ತಾರೆ. ಮದುವೆಯಾದ ಮೇಲೆ ಹೆತ್ತವರಿಗೆ ಸಹಾಯ ಮಾಡಲು ಗಂಡ ಒಪ್ಪಿಕೊಳ್ಳುತ್ತಾನೆಯೇ ಎಂಬ ಚಿಂತೆ’ ಎಂದು ಹೇಳುತ್ತಾಳೆ.

ಇದು ಹೆಣ್ಣು ಮಕ್ಕಳೇ ಇರುವ ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಥಿತಿ. ಇದರೊಂದಿಗೆ ಗಂಡು ಮಕ್ಕಳಿಗೂ ಮದುವೆಯಾದರೆ ಹಣಕಾಸಿನ ವಿಷಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಈ ಬದಲಾವಣೆಯನ್ನು ಸರಿದೂಗಿಸುವ ಚಿಂತೆ ಇದ್ದಲ್ಲಿ ಇಲ್ಲಿವೆ ಕೆಲವೊಂದು ಸಲಹೆಗಳು.

ಭಾರತದಲ್ಲಿ ಮಕ್ಕಳಿಗೆ ವೃದ್ಧಾಪ್ಯದಲ್ಲಿ ಹೆತ್ತವರಿಗೆ ನೆರವಾಗಬೇಕೆಂಬ ಷರತ್ತು ವಿಧಿಸಲಾಗಿದ್ದರೂ, ಆದರೆ ಕಾಲ ಬದಲಾಗುತ್ತಿದೆ. ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳು, ಹೆಚ್ಚಿನ ಜೀವನ ವೆಚ್ಚ ಮತ್ತು ಹೆತ್ತವರು ತಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿರುವುದು ಈ ಬದಲಾವಣೆಗೆ ಕಾರಣ ನಿಮ್ಮ ಸ್ವಂತ ಕುಟುಂಬವನ್ನು ಹೊಂದಿದ ಬಳಿಕ ಹೆತ್ತವರಿಗೆ ಹೇಗೆ ಸಹಾಯಹಸ್ತ ಚಾಚುವುದು ಹೇಗೆ ಎಂಬುದನ್ನು ತಿಳಿಯೋಣ.

ಸಂಗಾತಿಯೊಂದಿಗೆ ಮಾತನಾಡಿ
ನಿಮ್ಮ ಸಂಗಾತಿಯೊಂದಿಗೆ ಮದುವೆ ಮುನ್ನ ಅಥವಾ ಮದುವೆಯಾದ ತತ್‌ಕ್ಷಣ ಹೆತ್ತವರಿಗೆ ಸಹಾಯ ಮಾಡುವ ವಿಷಯದ ಕುರಿತು ಮುಕ್ತವಾಗಿ ಮಾತುಕತೆ ನಡೆಸಿ. ಹೆತ್ತವರಿಗೆ ನೆರವಾಗಲು ನಿರ್ಧರಿಸಿದ್ದರೆ ಅದು ನಿರಂತರ ಸಹಾಯವೇ, ವಿಶೇಷ ಸಂದರ್ಭಗಳಲ್ಲೇ ಅಥವಾ ತುರ್ತುಪರಿಸ್ಥಿತಿಯ ಸಂದರ್ಭದಲ್ಲೇ ಎಂಬುದನ್ನು ಸಂಗಾತಿಗೆ ತಿಳಿಸಿ. ಇದರೊಂದಿಗೆ ನಿಮ್ಮ ವೇತನದ ಎಷ್ಟು ಹಣವನ್ನು ಹೆತ್ತವರಿಗೆ ವಿನಿಯೋಗಿಸುತ್ತೀರಿ ಎಂಬ ಬಗ್ಗೆ ತಿಳಿಸಿ. ಒಂದು ವೇಳೆ ನಿಮ್ಮ ಸಂಗಾತಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ ಹೆತ್ತವರಿಗೆ ಸಹಾಯ ಮಾಡುವ ಕುರಿತು ಹಾಗೂ ಇದರಿಂದ ಕುಟುಂಬದ ಆರ್ಥಿಕತೆಗೆ ಯಾವುದೇ ಸಮಸ್ಯೆಯಾಗದು ಎಂಬುದನ್ನು ಅವರಿಗೆ ಮನವರಿಕೆ ಮಾಡಿ.

Advertisement

ನಿಮ್ಮ ಕುಟುಂಬಕ್ಕೂ ಪ್ರಾಮುಖ್ಯ ನೀಡಿ
ನಿಮಗೆ ಮದುವೆಯಾದರೆ, ಮಕ್ಕಳಿದ್ದರೆ ನಿಮ್ಮ ಕುಟುಂಬ ನಿಮ್ಮ ಮೊದಲ ಆದ್ಯತೆಯಾಗಿರಬೇಕು. ಇದಕ್ಕಾಗಿ ಆರ್ಥಿಕ ಬಜೆಟ್‌, ತುರ್ತನಿಧಿ ಅಥವಾ ವಿಮೆಗಳು ಸಿದ್ಧವಿದೆಯೇ ಎಂದು ಖಚಿತ ಪಡಿಸಿಕೊಳ್ಳಿ. ಹೆತ್ತವರಿಗೆ ಯಾವಾಗ ಸಹಾಯ ಬೇಕಾಗುತ್ತದೆಯೇ ಅಂದು ಸಹಾಯ ಮಾಡಿ. ಅದಕ್ಕಾಗಿ ಕುಟುಂಬದ ವೆಚ್ಚಗಳಿಗೆ ಕಡಿವಾಣ ಹಾಕಬೇಡಿ.

ಬೇರೆ ರೀತಿಯಲ್ಲಿ
ಹೆತ್ತವರಿಗೆ ಸಹಕರಿಸಿ
ಹಣಕಾಸು ಕ್ರಮವನ್ನು ಹೊಂದಿಸಿಕೊಡುವ ಮೂಲಕ ಹೆತ್ತವರಿಗೆ ನೆರವಾಗಿ. ವೃದ್ಧಾಪ್ಯದಲ್ಲಿ ಅವರ ವೈದ್ಯಕೀಯ ವೆಚ್ಚ ನೋಡಿಕೊಳ್ಳಲು ಆರೋಗ್ಯ, ಗಂಭೀರ ಅನಾರೋಗ್ಯ ವಿಮೆಗಳನ್ನು ಖರೀದಿಸಿ. ನಿವೃತ್ತಿಯ ಬಳಿಕ ಹಣವನ್ನು ಯಾವ ರೀತಿ ಹೂಡಿಕೆ ಮಾಡಬೇಕೆಂಬ ಮಾರ್ಗದರ್ಶನವನ್ನು ಅವರಿಗೆ ನೀಡಿ. ಇದರಿಂದ ನಿವೃತ್ತಿಯ ಬಳಿಕ ನಿಮ್ಮನ್ನು ಅವಲಂಬಿಸುವುದು ತಪ್ಪುತ್ತದೆ.

ತುರ್ತು ಪರಿಸ್ಥಿತಿ ನಿರ್ಲಕ್ಷ್ಯ ಸಲ್ಲ
ಹೆತ್ತವರಿಗೆ ನಿಯಮಿತ ವಿತ್ತೀಯ ನೆರವು ಅಗತ್ಯವಿದ್ದರೆ, ನಿಮ್ಮ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲು ಒಡಹುಟ್ಟಿದವರನ್ನು ಸೇರಿಸಿಕೊಳ್ಳಿ. ಅವರೊಂದಿಗೆ ಸರಿಯಾದ ರೀತಿಯಲ್ಲಿ ಮಾತುಕತೆ ನಡೆಸಿ ಹೆತ್ತವರ ಅಗತ್ಯಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ. ತುರ್ತು ಪರಿಸ್ಥಿತಿಯ ಸಂದರ್ಭ ಹೆತ್ತವರ ಸಹಾಯಕ್ಕೆ ಹಿಂದೆ ಸರಿಯಬೇಡಿ. ಆರ್ಥಿಕವಾಗಿ, ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಹೆತ್ತವರಿಗೆ ನಿಮ್ಮ ಅಗತ್ಯ ಯಾವಾಗವಿದೆಯೋ ಅಂದು ಅವರ ಪಕ್ಕ ಹಾಜರಿರಿ.

ಸಂಗಾತಿಗೆ ಗೌಪ್ಯತೆ ನೀಡಿ ನಿಮ್ಮ ಕುಟುಂಬದ ಹಣಕಾಸಿನ ಯೋಜನೆ ಇರುವವರೆಗೂ ನಿಮ್ಮ ಸಂಗಾತಿಗೆ ಕೆಲವು ಆರ್ಥಿಕ ಗೌಪ್ಯತೆಗೆ ಅವಕಾಶ ನೀಡುವುದು ಒಳ್ಳೆಯದು. ಆದ್ದರಿಂದ ಆದರ್ಶಪ್ರಾಯವಾಗಿ ಮನೆಯ ಖರ್ಚುಗಳಿಗೆ ಜಂಟಿ ಖಾತೆ ಮತ್ತು ವೈಯಕ್ತಿಕ ಖರ್ಚಿಗಾಗಿ ಬೇರೆ ಖಾತೆ ಹೊಂದಿರಿ. ಅವನು ಅಥವಾ ಅವಳು ವೈಯಕ್ತಿಕ ಖಾತೆಯಿಂದ ಹಣವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಕುರಿತು ಸಂಗಾತಿಗೆ ಅಧಿಕಾರ ಇರಬೇಕು.

-   ರಮ್ಯಾ ಕೆ.

Advertisement

Udayavani is now on Telegram. Click here to join our channel and stay updated with the latest news.

Next