Advertisement
ಮಾತೃಭೂಮಿಯಲ್ಲಿ ಕೋವಿಡ್‌ನಿಂದಾಗಿ ಅಸಹಜವಾಗುತ್ತಿರುವ ಜನ ಜೀವನವನ್ನು ಕಂಡು ಮಿಡಿದ ಜರ್ಮನಿಯಲ್ಲಿರುವ ಆರ್‌ಎಂಕೆಎಸ್‌ನ ಕನ್ನಡ ಮನಸುಗಳು, ಸಾಮಾಜಿಕ ಕಳಕಳಿಯುಳ್ಳ ಹಲವರೊಂದಿಗೆ ಜೂಮ್ ಮೂಲಕ ಚರ್ಚಿಸಿ ಹಲವರ ಅಭಿಪ್ರಾಯಗಳನ್ನು ಸಂಗ್ರಹಿಸಿ ನಾವು ನೀಡುವ ಸಹಾಯದ ಸೇತುವೆ ಎಷ್ಟು ಭದ್ರವಾಗಿದೆ ಎಂದು ಖಾತ್ರಿ ಪಡಿಸಿಕೊಂಡು ನೋಂದಾಯಿತ ಎನ್‌ಜಿಒ ಗಳೊಂದಿಗೆ ಸೇರಿ ಅವಶ್ಯಕತೆಯುಳ್ಳ ಜನರು ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದೆ. ಇದರೊಂದಿಗೆ ಅಜಲಾ ಫೌಂಡೇಶನ್, ವಿದ್ಯಾಪೋಷಕ ಹಾಗೂ ಶ್ರೀ ಸಾಯಿ ಭಾರ್ಗವ ಸೇವಾ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ಕೈ ಜೋಡಿಸಿದೆ.
Related Articles
Advertisement
ಅನ್ನ ದೇವರ ಮುಂದೆ ಇನ್ನು ದೇವರುಂಟೆ ? ಎಂಬ ಸರ್ವಜ್ಞರ ನುಡಿಯಂತೆ ಲಾಕ್‌ಡೌನ್‌ನಿಂದ ಕೆಲಸವನ್ನು ಕಳೆದುಕೊಂಡು ಅಸಹಾಯಕರಾಗಿರುವವರಿಗೆ ಬೆಂಗಳೂರಿನ ವಿದ್ಯಾಪೋಷಕ ಸಂಸ್ಥೆ 88,500 ರೂ.ಗಳ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಆರ್.ಪಿ.ಡಿ. ಟಾಸ್ಕ್ಫೋರ್ಸ್ ಟೀಮ್‌ನವರ ಕೋರಿಕೆ ಮೇರೆಗೆ ಸಂಕಷ್ಟದಲ್ಲಿರುವ ಅಂಗವಿಕಲ ಕುಟುಂಬಗಳಿಗೆ 700 ಬೆಲೆಯ 125 ದಿನಸಿ ಕಿಟ್‌ಗಳನ್ನು ದಾವಣಗೆರೆ ಜಿಲ್ಲೆಯ ಹರಿಹರ, ನ್ಯಾಮತಿ, ಹೊನ್ನಾಳಿ ತಾಲೂಕಿನ ಕುಟುಂಬಗಳಿಗೆ ವಿತರಿಸಿದ್ದಾರೆ.
ಅಜಲಾ ಫೌಂಡೇಶನ್‌ನಿಂದ ಹಲವು ಬುಡಕಟ್ಟು ಜನರಿಗೂ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಗ್ರಿಗಳನ್ನು ಹಂಚಲಾಗಿದ್ದು, ಮತ್ತಷ್ಟು ಜನರಿಗೆ ಆಹಾರವನ್ನು ಒದಗಿಸುವಲ್ಲಿ ಕಾರ್ಯಗತವಾಗಿದೆ. ಶ್ರೀ ಸಾಯಿ ಭಾರ್ಗವ ಸೇವಾ ಫೌಂಡೇಶನ್‌ನಿಂದ ಹಲವು ಬುಡಕಟ್ಟು ಜನರಿಗೂ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಗ್ರಿಗಳನ್ನು ಹಂಚಲಾಗಿದ್ದು ಮತ್ತಷ್ಟು ಜನರಿಗೆ ಆಹಾರವನ್ನು ಒದಗಿಸುವಲ್ಲಿ ಕಾರ್ಯಗತವಾಗಿದೆ. ಶ್ರೀ ಸಾಯಿ ಭಾರ್ಗವ ಸೇವಾ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ಹಲವು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಆಹಾರವನ್ನು ಒದಗಿಸುತ್ತಾ ಹಸಿವನ್ನು ಇಂಗಿಸುತ್ತಿದೆ.
ಕರ್ನಾಟಕ ಬಿಟ್ಟು ಸಾವಿರಾರು ಮೈಲಿಗಳಾಚೆ ಇರುವ ನಮಗೆ ಕರ್ನಾಟಕ ಕೇವಲ ಒಂದು ಜಾಗವಾಗಿ ಉಳಿಯದೆ ನಮ್ಮೆಲ್ಲ ಸುಂದರ ನೆನಪುಗಳಿಂದ ಕೂಡಿದ ಭದ್ರ ಭಾವುಕ ಅಡಿಪಾಯವಾಗಿದೆ. ಅಲ್ಲಿಯ ನೋವು ಇಲ್ಲಿ ನಮ್ಮ ನಿದ್ದೆಗೆಡಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಮಗಾದ ಅಳಿಲು ಸೇವೆ ಮಾಡುತ್ತಿರುವುದು ಧನ್ಯತೆಯ ಭಾವ ಉಂಟು ಮಾಡುತ್ತಿದೆ. ಈ ಮಹತ್ತರ ಕಾರ್ಯಕ್ಕೆ ದೇಣಿಗೆ ನೀಡಿರುವವರ ಹಣಕ್ಕೆ ನಾವು ಜವಾಬ್ದಾರರಾಗಿ ನಡೆದುಕೊಳ್ಳಬೇಕು. ಅದು ಸೂಕ್ತ ವ್ಯಕ್ತಿಗಳಿಗೆ ಸಿಗುವಂತಾಗಿ ಆದಷ್ಟು ಬೇಗ ನಮ್ಮ ನೆಲ, ನಮ್ಮ ಜನ ಆರೋಗ್ಯವಂತರಾಗಿ ನೆಮ್ಮದಿಯಿಂದ ಜೀವನ ಸಾಗಿಸುವಂತಾದರೆ ನಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗುವುದು.
– ಶೋಭಾ ಚೌಹಾನ್, ಫ್ರಾಂಕ್‌ಫರ್ಟ್ ಜರ್ಮನಿ