Advertisement

ಚಿಕಿತ್ಸೆಗೆ ನೆರವು, ಮಾಸಾಶನ ಕೊಡಿಸಿ

06:04 AM Feb 12, 2019 | Team Udayavani |

ದಾವಣಗೆರೆ: ಆಪರೇಷನ್‌ ಧನಸಹಾಯ, ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ, ಬೆಳೆ ಪರಿಹಾರ ಸಂಬಂಧ ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪರಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು.

Advertisement

ದಾವಣಗೆರೆ ತಾಲೂಕಿನ ಗೋಪನಾಳ್‌ ಗ್ರಾಮದ ವೀಣಾ ಎಂಬುವವರು ಸಂಧ್ಯಾ ಸುರಕ್ಷಾ ಯೋಜನೆಯಡಿ ಕಳೆದ ಏಳು ತಿಂಗಳಿಂದ ತಮ್ಮ ಖಾತೆಗೆ ಮಾಸಾಶನ ಸಂದಾಯವಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದರು.

ಅದೇ ಗ್ರಾಮದ ಗೌರಮ್ಮ ಎಂಬುವವರು ತಮಗೆ 2018ರ ಅಕ್ಟೋಬರ್‌ ತಿಂಗಳಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಮಂಜೂರಾಗಿದ್ದರೂ ಇದುವರೆಗೆ ತಮ್ಮ ಖಾತೆಗೆ ಹಣ ಜಮೆಯಾಗುತ್ತಿಲ್ಲ. ಪಿಂಚಣಿ ಸಂದಾಯವಾಗುವಂತೆ ಕ್ರಮ ವಹಿಸಲು ಮನವಿ ಮಾಡಿದರು.

ಆಗ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಆ ಅರ್ಜಿಗಳನ್ನು ಸಾಮಾಜಿಕ ಭದ್ರತೆ ಶಾಖೆ ವಿಷಯ ನಿರ್ವಾಹಕರಿಗೆ ನೀಡಿ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ಜಗಳೂರು ತಾಲೂಕಿನ ಆರ್‌.ಎಸ್‌.ತಿಪ್ಪೇಸ್ವಾಮಿ ಎಂಬುವರು, ತಮಗೆ 2018ನೇ ಸಾಲಿನ ಬೆಳೆ ಪರಿಹಾರ ಮಂಜೂರಾಗಿದ್ದರೂ ಖಾತೆಗೆ ಹಣ ಜಮಾ ಆಗಿಲ್ಲ. ಆದ್ದರಿಂದ ಬೆಳೆ ಪರಿಹಾರ ಹಣ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದರು.

Advertisement

ಆಗ, ಅಪರ ಜಿಲ್ಲಾಧಿಕಾರಿಗಳು ಅರ್ಜಿಯನ್ನು ಪರಿಶೀಲನೆಗಾಗಿ ಜಂಟಿ ಕೃಷಿ ನಿರ್ದೇಶಕರಿಗೆ ನೀಡಿ, ಕ್ರಮ ಜರುಗಿಸಲು ತಿಳಿಸಿದರು.

ನಗರದ ಚೌಕಿಪೇಟೆಯ ಶಮೀಮ್‌ ಬಾನು ಎಂಬುವರು ತಮಗೆ 72 ವರ್ಷ ವಯಸ್ಸಾಗಿದ್ದು, ಎರಡೂ ಕಣ್ಣು ಸರಿಯಾಗಿ ಕಾಣುವುದಿಲ್ಲ. ತಾವು ಬಿಪಿಎಲ್‌ ಕಾರ್ಡ್‌ ಹೊಂದಿಲ್ಲ. ಆದ್ದರಿಂದ ಶಾಸಕರು ಇಲ್ಲವೆ ಸಂಸದರ ನಿಧಿಯಿಂದ ಕಣ್ಣಿನ ಆಪರೇಷನ್‌ಗೆ ಧನ ಸಹಾಯ ಕೊಡಿಸಬೇಕೆಂದು ಮನವಿ ಸಲ್ಲಿಸಿದರು.

ಆಗ, ಜಿಲ್ಲಾ ಚಿಗಟೇರಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ| ನೀಲಾಂಬಿಕೆ, ಜಿಲ್ಲಾ ಆಸ್ಪತ್ರೆಗೆ ಬಂದಲ್ಲಿ ತಪಾಸಣೆ ನಡೆಸಿ, ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದರು.

ಬರಕತ್‌ ಉಲ್ಲಾ ಎಂಬುವವರು ತಾವು ಬೀದಿ ಬದಿ ವ್ಯಾಪಾರಸ್ಥರಾಗಿದ್ದು, ತಮಗೆ ರಕ್ತಹೀನತೆ ಇದೆ. ಆದ್ದರಿಂದ ಸೂಕ್ತ ಚಿಕಿತ್ಸೆಗೆ ಧನ ಸಹಾಯ ಬೇಕಿದ್ದು, ಶಾಸಕರ ಅಥವಾ ಸಂಸದರ ನಿಧಿಯಿಂದ ನೆರವು ನೀಡಲು ಕ್ರಮ ವಹಿಸಬೇಕೆಂದು ಕೋರಿದರು.

ಅಪರ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತಹೀನತೆಗೆ ಉಚಿತವಾಗಿ ಚಿಕಿತ್ಸೆ ನೀಡುಲಾಗುತ್ತಿದ್ದು, ಅಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳಾದ ರೇಷ್ಮ ಹಾನಗಲ್‌, ನಜ್ಮಾ, ರೇವಣ್ಣ, ದೇವೇಂದ್ರಪ್ಪ, ಶಿವನಾಂದ ಕುಂಬಾರ್‌, ಡಾ| ರಾಘವನ್‌ ಇತರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next