Advertisement

ಶಾಂತಿಯುತ ಗಣೇಶೋತ್ಸವಕ್ಕೆ ಸಹಕರಿಸಿ

04:12 PM Jul 26, 2022 | Team Udayavani |

ಬೆಳಗಾವಿ: ಸರ್ವೋಚ್ಚ ನ್ಯಾಯಾಲಯ ಹಾಗೂ ಸರಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳ ಪ್ರಕಾರವೇ ಗಣೇಶೋತ್ಸವ ಮೊದಲಾದ ಹಬ್ಬದ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

Advertisement

ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಗಣೇಶೋತ್ಸವ ಮಂಡಳಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಆಗಸ್ಟ್‌ 31 ರಿಂದ ಸೆಪ್ಟೆಂಬರ್‌ 9 ರವರೆಗೆ ಗಣೇಶೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಸಂಭ್ರಮದಿಂದ ಹಾಗೂ ಶಾಂತಿಯುತವಾಗಿ ಉತ್ಸವ ಆಚರಣೆಗೆ ಗಣೇಶೋತ್ಸವ ಮಂಡಳಿಗಳು ಸಹಕರಿಸಬೇಕು ಎಂದರು.

ಉತ್ಸವದ ಸಂದರ್ಭದಲ್ಲಿ ಡಿ ಜೆ ಗೆ ಅವಕಾಶವಿಲ್ಲ. ಆದರೆ ನಿಗದಿತ ಪ್ರಮಾಣದ ಶಬ್ದ ಹೊರಸೂಸುವ ಧ್ವನಿವರ್ಧಕ ಬಳಕೆಗೆ ಸದ್ಯಕ್ಕೆ ಅವಕಾಶವಿರುತ್ತದೆ. ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಧ್ವನಿವರ್ಧಕ ಬಳಕೆಗೆ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗುವುದು. ಏಕಗವಾಕ್ಷಿ ವ್ಯವಸ್ಥೆ ಮೂಲಕ ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅನುಮತಿ ನೀಡಲಾಗುವುದು. ಏಕಗವಾಕ್ಷಿ ವ್ಯವಸ್ಥೆ ಮೂಲಕ ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಪೊಲೀಸ್‌, ಹೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಒಂದೇ ಕಡೆ ಲಭ್ಯವಿದ್ದು, ಅಗತ್ಯ ಅನುಮತಿಯನ್ನು ನೀಡಲಿದ್ದಾರೆ ಎಂದು ಹೇಳಿದ ಜಿಲ್ಲಾಧಿಕಾರಿಗಳು ಡಿಜೆ, ಧ್ವನಿವರ್ಧಕಗಳ ಬಳಕೆ, ಪಿಓಪಿ ಮೂರ್ತಿ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸರಕಾರ ಮತ್ತು ಸುಪ್ರಿಂ ಕೋರ್ಟ್‌ ಹಲವಾರು ಆದೇಶಗಳನ್ನು ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿವೆ. ನ್ಯಾಯಾಲಯ ಹಾಗೂ ಸರಕಾರದ ಮಾರ್ಗಸೂಚಿ ಪ್ರಕಾರ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಪಿಓಪಿ ಗಣಪತಿ ಬೇಡ: ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಿಓಪಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ಪಿಓಪಿ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮನವಿ ಮಾಡಿದರು. ಈ ಬಗ್ಗೆ ಪಿಓಪಿ ಗಣೇಶ ಮೂರ್ತಿ ತಯಾರಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕಿರುವುದರಿಂದ ಈ ಸಭೆ ನಡೆಸಲಾಗಿದೆ ಎಂದ ಅವರು, ಗಣೇಶೋತ್ಸವ ಮಹಾಮಂಡಳಿಗಳಿಗೆ ಅನುಕೂಲ ಕಲ್ಪಿಸಲು ಹೆಸ್ಕಾಂ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಮೇ 10 ರ ನಂತರದ ಪ್ರಸ್ತುತ ಸನ್ನಿವೇಶದಲ್ಲಿ ನ್ಯಾಯಾಲಯ ಮತ್ತು ಸರಕಾರ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ. ಹೀಗಾಗಿ ಅವುಗಳ ಪಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಗಣೇಶೋತ್ಸವಕ್ಕೆ ಮಾತ್ರ ಸೀಮಿತವಾದ ನಿರ್ಬಂಧಗಳಲ್ಲ ಎಂದು ಪೊಲೀಸ್‌ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಸ್ಪಷ್ಟಪಡಿಸಿದರು.

ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಪೊಲೀಸ್‌ ಠಾಣೆಯ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುವುದು. ಸ್ಥಳೀಯ ಅಧಿಕಾರಿಗಳು ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ಅವರು ಹೇಳಿದರು.

378 ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ: ಬೆಳಗಾವಿ ನಗರದಲ್ಲಿ 378 ಕ್ಕೂ ಅಧಿಕ ಮಂಡಳಿಗಳು ಗಣೇಶ ಪ್ರತಿಷ್ಠಾಪಿಸುತ್ತಿವೆ. ಕೋವಿಡ್‌ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಉತ್ಸವ ಆಚರಿಸಲಾಗಿದೆ. ನಗರದ ಎಲ್ಲ ಮಂಡಳಿಗಳ ಅಧ್ಯಕ್ಷರು-ಪದಾಧಿಕಾರಿಗಳ ಜೊತೆ ವಿಸ್ತೃ¤ತವಾಗಿ ಚರ್ಚೆ ನಡೆಸಿದ ಬಳಿಕ ಜಿಲ್ಲಾಡಳಿತದ ಜೊತೆಗೆ ಮತ್ತೂಂದು ಸುತ್ತಿನ ಸಭೆಯನ್ನು ನಡೆಸಲಾಗುವುದು ಎಂದು ವಿಕಾಸ ಕಲಘಟಗಿ ಹೇಳಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ರಾಜೇಶ್ವರಿ ಕುಳ್ಳಿ ಮಾತನಾಡಿ, ಪಿಓಪಿ ಗಣೇಶ ವಿಸರ್ಜನೆಯಿಂದ ಜಲಮಾಲಿನ್ಯವಾಗುತ್ತದೆ. ಈ ಕಾರಣದಿಂದ ಪಿಓಪಿ ಗಣೇಶ ಮೂರ್ತಿ ಬಳಕೆಗೆ ಅವಕಾಶವಿಲ್ಲ. ಆದ್ದರಿಂದ ಮಣ್ಣಿನ ಗಣೇಶ ಪ್ರತಿಷ್ಠಾಪನೆಗೆ ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಂಜೀವ್‌ ಪಾಟೀಲ, ಉಪ ಪೊಲೀಸ್‌ ಆಯುಕ್ತರಾದ ರವೀಂದ್ರ ಗಡಾದಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next