ಅಮೆರಿಕ ಕೋವಿಡ್-19 ದಿಂದ ಬಾಧಿತರಾಗಿರುವ ಜನರಿಗೆ ನೆರವಾಗುವ ಸಲುವಾಗಿ ಪ್ರತ್ಯೇಕ ಕೊರೊನಾ ಬಜೆಟ್ ಮಂಡಿಸುವ ಪ್ರಸ್ತಾವ ಇಟ್ಟಿದೆ. ಬ್ರಿಟನ್‌ನಲ್ಲಿ ಕೂಡ ಸಾರ್ವತ್ರಿಕ ಮೂಲವೇತನ ಕೊಡುವ ಪ್ರಸ್ತಾವವವೊಂದನ್ನು ಇಡಲಾಗಿದೆ. ಜನರ ಕೈಯಲ್ಲಿ ಹಣ ಓಡಾಡದಿದ್ದರೆ ಬೇಡಿಕೆ-ಪೂರೈಕೆ ವ್ಯವಸ್ಥೆಯ ಸರಪಣಿ ಅಸ್ತವ್ಯಸ್ತಗೊಳ್ಳುತ್ತದೆ. ಹೀಗಾಗಿ ಈಗ ಜನರ ಕೈಯಲ್ಲಿ ಹಣ ಓಡಾಡುವಂತೆ ಮಾಡುವುದು ಅಗತ್ಯ.
ಆರ್ಥಿಕತೆಯ ಮೇಲೆ ಕೋವಿಡ್-19 ದುಷ್ಪರಿಣಾಮ ಬೀರಿರುವುದು ಢಾಳಾಗಿಯೇ ಗೋಚರಿಸಲುತೊಡಗಿದೆ. ವಾಯುಯಾನ ಕ್ಷೇತ್ರದಿಂದ ತೊಡಗಿ ಹಳ್ಳಿಗಳ ಕಿರಾಣಿ ಅಂಗಡಿಗಳ ತನಕ ವಹಿವಾಟು ಕುಸಿತದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಕೋವಿಡ್-19 ಹಾವಳಿ ಎಷ್ಟು ಸಮಯ ಇರಬಹುದು ಎಂಬ ಖಚಿತ ಅಂದಾಜು ಯಾರಿಗೂ ಇಲ್ಲ. ಸದ್ಯಕ್ಕೆ ಲಾಕ್‌ಡೌನ್, ನಿರ್ಬಂಧಗಳಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಷ್ಟಕ್ಕೇ ನಿಯಂತ್ರಣಕ್ಕೆ ಬರದಿದ್ದರೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾದೀತು. ಇಂಥ ಸಂದರ್ಭ ಬಂದರೆ ಜನಸಾಮಾನ್ಯರ ಗತಿಯೇನು? ಈ ಪ್ರಶ್ನೆಯೀಗ ಬೃಹದಾಕಾರವಾಗಿ ಕಾಡುತ್ತಿದೆ.
ಈಗಿರುವ ನಿರ್ಬಂಧಗಳಿಂದಲೇ ಆರ್ಥಿಕ ಚಟುವಟಿಕೆಗಳೆಲ್ಲ ಬಹುತೇಕ ಸ್ತಬ್ಧಗೊಂಡಿವೆ. ಮಾಲ್‌ಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು ಮುಚ್ಚಿರುವುದರಿಂದ, ಕಾರ್ಯಕ್ರಮಗಳು ರದ್ದಾಗಿರುವುದರಿಂದ, ಬೀದಿ ಬದಿಯ ವ್ಯಾಪಾರವನ್ನು ಮುಚ್ಚಿರುವುದರಿಂದ ಅನೇಕ ಮಂದಿ ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಬಸ್, ರಿಕ್ಷಾ, ಟ್ಯಾಕ್ಸಿಗಳು ಪ್ರಯಾಣಿಕರಿಲ್ಲದೆ ಭಣಗುಟ್ಟುತ್ತಿವೆ. ಇವರೆಲ್ಲ ಅಸಂಘಟಿತ ವಲಯದ ಕಾರ್ಮಿಕರು. ಇವರ ಸಂಖ್ಯೆ ಎಷ್ಟು ಎನ್ನುವ ಖಚಿತ ಅಂಕಿ ಅಂಶ ಸರಕಾರದ ಬಳಿಯೂ ಇಲ್ಲ. ಆದರೆ ಇವರು ಆರ್ಥಿಕತೆಯ ಬಹುಮುಖ್ಯ ಭಾಗ ಎನ್ನುವುದರಲ್ಲಿ ಅನುಮಾನವಿಲ್ಲ. ಕೋವಿಡ್-19 ದಿಂದ ನಿರುದ್ಯೋಗಿಗಳಾಗಿರುವ ಇವರ ಬದುಕು ಈಗ ಅತಂತ್ರಗೊಂಡಿದೆ.
ಅಂತೆಯೇ ಅನೇಕ ಚಿಕ್ಕ ಮತ್ತು ಮಧ್ಯಮ ಗಾತ್ರದ ಕಂಪೆನಿಗಳು ಬಾಗಿಲೆಳೆದಿವೆ ಇಲ್ಲವೆ ವ್ಯವಹಾರ ಕಡಿತಗೊಳಿಸಿವೆ. ಇದರ ಪರಿಣಾಮವಾಗಿ ಕಾರ್ಮಿಕರಿಗೆ ವೇತನ ಕಡಿತ ಮಾಡಲಾಗಿದೆ ಹಾಗೂ ಅನೇಕ ಕಂಪೆನಿಗಳು ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿವೆ. ಈ ಮೂಲಕವೂ ಅನೇಕ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇವರೆಲ್ಲರ ಮುಂದಿರುವ ಪ್ರಶ್ನೆ ಮುಂದೇನು ಎನ್ನುವುದು?
ಈ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ಜನರ ನೆರವಿಗೆ ಧಾವಿಸುವುದು ಅಗತ್ಯ. ಉತ್ತರ ಪ್ರದೇಶ ಸರಕಾರ ಕೊರೊನಾದಿಂದಾಗಿ ನಿರುದ್ಯೋಗಿಗಳಾಗಿರುವ ದಿನಗೂಲಿ ನೌಕರರಿಗೆ ಹಣಕಾಸಿನ ನೆರವು ನೀಡಲು ಚಿಂತನೆ ನಡೆಸಿದೆ. ಇದು ಅನುಷ್ಠಾನಕ್ಕೆ ಬರುವುದೋ ಇಲ್ಲವೋ ತಿಳಿಯದು. ಆದರೆ ಈ ಮಾದರಿಯ ಕ್ರಮಗಳನ್ನು ಸರಕಾರಗಳು ಕೈಗೊಳ್ಳುವುದು ಮಾತ್ರ ಅಪೇಕ್ಷಣೀಯ. ಅಮೆರಿಕದ ಸರಕಾರ ಈಗಾಗಲೇ ಕೋವಿಡ್-19 ದಿಂದ ಬಾಧಿತರಾಗಿರುವ ಜನರಿಗೆ ನೆರವಾಗುವ ಸಲುವಾಗಿ ಪ್ರತ್ಯೇಕ ಕೋವಿಡ್-19 ಬಜೆಟ್ ಮಂಡಿಸುವ ಪ್ರಸ್ತಾವವನ್ನು ಸಂಸತ್ತಿನಲ್ಲಿ ಇಟ್ಟಿದೆ. 2.5 ಲಕ್ಷ ಬಿಲಿಯನ್ ಡಾಲರ್‌ನ ಈ ಪೂರಕ ಬಜೆಟ್‌ನಲ್ಲಿ ಕೋವಿಡ್-19 ದಿಂದಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಾಧಿತರಾದವರಿಗೆ ವಿವಿಧ ರೀತಿಯ ನೆರವುಗಳನ್ನು ನೀಡುವ ಅಂಶಗಳನ್ನು ಅಡಕಗೊಳಿಸಲಾಗಿದೆ. ಬ್ರಿಟನ್‌ನಲ್ಲಿ ಕೂಡ ಸಾರ್ವತ್ರಿಕ ಮೂಲವೇತನ ಕೊಡುವ ಪ್ರಸ್ತಾವವವೊಂದನ್ನು ಇಡಲಾಗಿದೆ.
ಸದ್ಯಕ್ಕೆ ಭಾರತದಲ್ಲೂ ಈ ಮಾದರಿಯ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಸಮುಚಿತವಾದ ನಿರ್ಧಾರವಾಗಬಹುದು. ಜನರ ಕೈಯಲ್ಲಿ ಹಣ ಓಡಾಡದಿದ್ದರೆ ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆಯ ಸರಪಣಿ ಅಸ್ತವ್ಯಸ್ತಗೊಳ್ಳುತ್ತದೆ. ಇದು ವಾಣಿಜ್ಯ ಚಟುವಟಿಕೆಗಳು ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಈಗ ಜನರ ಕೈಯಲ್ಲಿ ಹಣ ಓಡಾಡುವಂತೆ ಮಾಡುವುದು ಅಗತ್ಯ. ಇದೇ ವೇಳೆ ಕೆಲವು ತಿಂಗಳ ಮಟ್ಟಿಗೆ ಬ್ಯಾಂಕುಗಳು ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳು ಸಾಲದ ಕಂತು ವಸೂಲು ಮಾಡುವುದನ್ನು ತಡೆ ಹಿಡಿಯುವುದು, ಬಡ್ಡಿ ಮನ್ನಾ ಮಾಡುವಂಥ ಕ್ರಮಗಳ ಮೂಲಕ ಜನರ ಬವಣೆಯನ್ನು ಕಡಿಮೆ ಮಾಡಬಹುದು. ಆರ್ಥಿಕ ಕೊಂಡಿಯ ಕೊಟ್ಟ ಕೊನೆಯಲ್ಲಿರುವವರ ದೈನಂದಿನ ಬದುಕು ಕೂಡ ಸುಲಲಿತವಾಗುವಂತೆ ಮಾಡುವುದು ಆಳುವವರ ಸದ್ಯದ ಆದ್ಯತೆಯಾಗಬೇಕು. ಇದಕ್ಕಾಗಿ ಸಮಗ್ರವಾದ ಆರ್ಥಿಕ ಯೋಜನೆಯೊಂದನ್ನು ತುರ್ತಾಗಿ ರೂಪಿಸುವ ಅಗತ್ಯವಿದೆ.