Advertisement

ನಿರ್ಗತಿಕರಿಗೆ ಸಹಾಯ ಮಾಡಿ: ಎಸ್‌.ಎಚ್‌.ಕೋರಡ್ಡಿ

09:26 PM Sep 07, 2019 | Lakshmi GovindaRaju |

ಚಿಕ್ಕಬಳ್ಳಾಪುರ: ನಾಗರಿಕ ಸಮಾಜದ ಯಾವುದೇ ವ್ಯಕ್ತಿಯಾಗಲಿ ನಿರ್ಗತಿಕರನ್ನು ಕಂಡಲ್ಲಿ ಅವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಜೊತೆಗೆ ಧಾರ್ಮಿಕ, ಸಾಮಾಜಿಕವಾಗಿ ಸತ್ಯದ ಹಾದಿಯಲ್ಲಿ ಪ್ರತಿಯೊಬ್ಬರು ನಡೆದರೆ ಮಾತ್ರ ಎಲ್ಲರ ಜೀವನವು ಸುಖಮಯವಾಗಿರುತ್ತದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ಅಭಿಪ್ರಾಯಪಟ್ಟರು.

Advertisement

ನಗರದ ಹೊರ ವಲಯದ ಸುಲ್ತಾನಪೇಟೆಯ ಶ್ರೀ ಸತ್ಯಸಾಯಿ ವೃದ್ಧಾಶ್ರಮದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಪ್ರಯುಕ್ತ ವೃದ್ಧಾಶ್ರಮದ ವಯೋ ವೃದ್ಧರಿಗೆ ಹಾಲು, ಹಣ್ಣು ವಿತರಿಸಿ ಅವರು ಮಾತನಾಡಿದರು.

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೌಷ್ಟಿಕ ಆಹಾರ ಸೇವನೆ ಮುಖ್ಯ. ಜೀವನದಲ್ಲಿ ನಡೆದು ಹೋದ ಕಹಿ ಘಟನೆಗಳನ್ನು ನೆನೆದು ಕೊರಗದೆ ವೃದ್ಧಾಶ್ರಮದ ಪರಿಸರ ವಾತಾವರಣದಲ್ಲಿ ಜ್ಞಾನ, ಸಂಗೀತದ ಮೂಲಕ ತಮ್ಮ ನೋವು ಮರೆಯಬೇಕು ಎಂದು ವೃದ್ಧರಿಗೆ ಸಲಹೆ ನೀಡಿದರು.

ದೈಹಿಕ ಬೆಳವಣಿಗೆಗೆ ತೊಂದರೆ: ಪ್ರತಿಯೊಬ್ಬ ಮನುಷ್ಯನಿಗೂ ಹಸಿವು ಇರುತ್ತದೆ. ಗುಣಮಟ್ಟದ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಅಗತ್ಯ. ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಎದ್ದು ಕಾಣುತ್ತಿದೆ. ಮಕ್ಕಳಿಗೆ ತರಹೇವಾರಿ ತಿನಿಸುಗಳನ್ನು ಜಿಂಕ್‌ಫ‌ುಡ್‌ ಮಾದರಿಯಲ್ಲಿ ಕೊಡಲಾಗುತ್ತಿದೆ. ಇದರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ತೊಂದರೆಯಾಗುತ್ತಿದೆ ಎಂದರು.

ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಪೌಷ್ಟಿಕಾಂಶವುಳ್ಳ ಆಹಾರ ಸಿಗಬೇಕಿದೆ. ಇಲ್ಲದಿದ್ದರೆ ದೇಶದ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಜೀವನದಲ್ಲಿ ಮನುಷ್ಯ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಹಿಂದೆ ನಡೆದ ದುರ್ಘ‌ಟನೆಗಳನ್ನು ಮರೆತು ಇಲ್ಲಿನ ಶಾಂತಿಯುತವಾದ ವಾತವಾರಣವನ್ನು ಸವಿಯಬೇಕು ಎಂದರು.

Advertisement

ನೀರಿನ ಸಮಸ್ಯೆ ಶೀಘ್ರ ನಿವಾರಣೆ: ಇಲ್ಲಿ ವಾಸವಾಗಿರುವ ವಯೋವೃದ್ಧರಿಗೆ ಈ ಆಶ್ರಮ ಆಶ್ರಯ ನೀಡಿ ಅವರ ಕ್ಷೇಮಾಭಿವೃದ್ಧಿ ಮಾಡುತ್ತಿದೆ. ಅವರಿಗೆ ದೈನಂದಿನ ಊಟ, ವಸತಿ, ಬಟ್ಟೆ ಎಲ್ಲಾ ಉಚಿತವಾಗಿ ನೀಡುತ್ತಿದೆ. ಸರ್ಕಾರ ಮತ್ತು ದಾನಿಗಳ ಹಣದ ಸಹಾಯದಿಂದ ಈ ಆಶ್ರಮವು ಅನೇಕ ವರ್ಷಗಳಿಂದ ಮುಂದುವರಿಯುತ್ತಾ ವೃದ್ಧರಿಗೆ ಆಶ್ರಯವನ್ನು ಕಲ್ಪಿಸಿದೆ. ಈಗಾಗಲೇ ಆಶ್ರಮದಲ್ಲಿರುವ ನೀರಿನ ಸಮಸ್ಯೆ, ವೈದ್ಯಕೀಯ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇವೆ ಎಂದು ನ್ಯಾಯಾಧೀಶರು ಭರವಸೆ ನೀಡಿದರು.

ಯೋಗ, ಧ್ಯಾನ ಮಾಡಿ: ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ ಮಾತನಾಡಿ, ಈ ವೃದ್ಧಾಶ್ರಮದಲ್ಲಿರುವರು ಅನಾಥರೆಂಬ ಭಾವನೆಯನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಯಸ್ಸಾದವರ ಮನಸ್ಸಿನಲ್ಲಿ ನಾವು ಅಸಹಾಯಕರು, ನಿಶಕ್ತರು ಎಂಬ ಕೀಳರಿಮೆಯಿಂದ ತಮ್ಮ ಚೈತನ್ಯ ಕಳೆದುಕೊಳ್ಳುತ್ತಾರೆ. ಅವರಿಗೆ ಮಕ್ಕಳಿಂದ ಪ್ರೀತಿ, ಮಮಕಾರ ಸಿಕ್ಕಿರುವುದಿಲ್ಲ.

ಇಂತಹವರು ಪ್ರತಿನಿತ್ಯ ಯೋಗ ಮತ್ತು ಧ್ಯಾನ ಮಾಡಲು ಪ್ರಾಮುಖ್ಯತೆ ನೀಡುವ ಮೂಲಕ ಮನಸ್ಸಿನ ಕಹಿ ಘಟನೆಗಳಿಂದ ನೆಮ್ಮದಿ ದೊರಕಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್‌ ನ್ಯಾಯಾಧೀಶ ಎಚ್‌.ದೇವರಾಜು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿನೋದ್‌ ಕುಮಾರ್‌, ಸುಲ್ತಾನ್‌ಪೇಟೆಯ ಸತ್ಯ ಸಾಯಿ ವೃದ್ಧಾಶ್ರಮದ ವ್ಯವಸ್ಥಾಪಕ ಮುರಳಿ, ವಕೀಲರು ಮತ್ತು ಯೋಗ ಶಿಕ್ಷಕ ವೀಣಾ ಲೋಕನಾಥ್‌ ಮತ್ತಿತರರು ಉಪಸ್ಥಿತರಿದ್ದರು.

ವೃದ್ಧರನ್ನು ನೋಡಿ ಭಾವುಕರಾದ ನ್ಯಾಯಾಧೀಶರು: ವೃದ್ಧಾಶ್ರಮದಲ್ಲಿರುವ 40 ಕ್ಕೂ ಹೆಚ್ಚು ಮಂದಿ ವೃದ್ಧರನ್ನು ನೋಡಿ ಒಮ್ಮೆ ಭಾವುಕರಾದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ, ವೃದ್ಧರನ್ನು ತಮ್ಮ ತಂದೆ ತಾಯಿಗಳಂತೆ ಭಾವಿಸಿ ಅವರಿಗೆ ಯಾವುದೇ ಅಡಚಣೆಗಳು ಉಂಟಾಗದಂತೆ, ಮಕ್ಕಳಂತೆ ಸ್ನೇಹ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಶ್ರೀ ಸತ್ಯಸಾಯಿ ವೃದ್ಧಾಶ್ರಮದ ಆಯೋಜಕರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ 40 ಮಂದಿ ವಯೋವೃದ್ಧರಿಗೆ ಹಾಲು, ಹಣ್ಣುಗಳನ್ನು ನೀಡಿ ಅವರ ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು 40 ಮಂದಿ ವಯೋವೃದ್ಧರಿಗೆ ಹಾಲು, ಹಣ್ಣು ವಿತರಿಸಿ ಆರೋಗ್ಯ, ಯೋಗ ಕ್ಷೇಮ ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next