Advertisement

ಕಾರ್ಖಾನೆ ಅಭಿವೃದ್ಧಿಗೆ ಸಹಾಯ

08:16 AM Jun 27, 2020 | Suhan S |

ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಗಡಿಭಾಗದ ರೈತರಿಗೆ ಸರ್ಕಾರ ಅನುಕೂಲ ಕಲ್ಪಿಸಿದೆ. ಇಲ್ಲಿನ ಶಾಸಕರು ಕಾರ್ಖಾನೆ ಶ್ರೇಯೋಭೀವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾರ್ಖಾನೆ ಅಭಿವೃದ್ಧಿಗಾಗಿ ಸರ್ಕಾರದಿಂದ ನಾನೂ ಸಹ ಸಹಾಯ ಮಾಡುತ್ತೇನೆ. ಸರ್ಕಾರ ಯಾವತ್ತೂ ರೈತರ ಬೆನ್ನ ಹಿಂದೆ ಇರುತ್ತದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಹೇಳಿದರು.

Advertisement

ತಾಲೂಕಿನ ಮರಗೂರ ಗ್ರಾಮದಲ್ಲಿರುವ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಭೀಮಾಶಂಕರ ಸೌಹಾರ್ದ ಸಹಕಾರಿ ನಿಯಮಿತ ಇಂಡಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಖಾನೆಯ ವಿವಿಧ ಅಭಿವೃದ್ಧಿ ಯೋಜನೆಗಳ ಭೂಮಿ ಪೂಜೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೋವಿಡ್ ವೈರಸ್‌ನಂತಹ ಭೀಕರ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸೇವೆ ಮಾಡಿ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡಿದ ಕೊರೊನಾ ವಾರಿಯರ್ಸ್ಗಳಿಗೆ ಅಭಿನಂದಿಸಿದ ಅವರು, ಕೋವಿಡ್‌ -19 ಸಂದರ್ಭದಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಮೂರು ಸಾವಿರ ರೂ. ಸಹಾಯಧನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಇಂದು ನಿಮ್ಮ ತಾಲೂಕಿನ ಆಶಾ ಕಾರ್ಯಕರ್ತರಿಗೆ 12 ಲಕ್ಷ ರೂ. ಸಹಾಯಧನ ವಿತರಿಸಿ ಅವರ ಕಾರ್ಯಕ್ಕೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಮ್ಮ ಸೌಭಾಗ್ಯ ಎಂದರು. ಗಡಿ ಭಾಗದಲ್ಲಿ ಇಂತಹ ಉತ್ಕೃಷ್ಟ ಸಕ್ಕರೆ ಕಾರ್ಖಾನೆ ನಿರ್ಮಿಸಿದ್ದು ನಿಜಕ್ಕೂ ಶ್ಲಾಘನೀಯ. ಗಡಿಭಾಗದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಾವಿರಾರು ರೈತರಿಗೆ ಈ ಸಕ್ಕರೆ ಕಾರ್ಖಾನೆ ವರದಾನವಾಗಲಿದ್ದು, ನಮ್ಮ ಸರ್ಕಾರದಲ್ಲಿಯೂ ಈ ಕಾರ್ಖಾನೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಶಾಸಕ ಯಶವಂತ್ರಾಯಗೌಡ ಪಾಟೀಲ ಮಾತನಾಡಿ, ನನ್ನ ಅಧಿ ಕಾರವಧಿ ಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟು ಎರಡನೇ ಬಾರಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ಋಣ ತೀರಿಸಲು ನಾನು ಬದ್ಧನಿದ್ದೇನೆ. ನಂಜುಂಡಪ್ಪ ವರದಿಯಂತೆ ಇಂಡಿ ತಾಲೂಕು ಭೀಕರ ಬರಗಾಲಕ್ಕೆ ತುತ್ತಾಗಿ ಅತೀ ಹಿಂದುಳಿದ ತಾಲೂಕಾಗಿದೆ.

ಈ ಕ್ಷೇತ್ರಕ್ಕೆ ಈ ಹಿಂದೆ ಯಾವೊಬ್ಬ ಸಚಿವರೂ ಬಂದಿರಲಿಲ್ಲ. ಅಭಿವೃದ್ಧಿ ಕನಸು ಕಾಣುತ್ತಿರುವ ನನಗೆ ಎಲ್ಲ ಸರ್ಕಾರಗಳು ಬೆಂಬಲಿಸುತ್ತಿವೆ. ಹಿಂದಿನ ಸರ್ಕಾರದಲ್ಲಿಯೂ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಸಚಿವರು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈಗ ಬಿಜೆಪಿ ಸರ್ಕಾರ ಇದ್ದರೂ ಆ ಪಕ್ಷದ ಅನೇಕ ಶಾಸಕ, ಸಚಿವರು ನನ್ನ ಮಿತ್ರರಾಗಿದ್ದು ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಮಾತನಾಡಿ ಸಹಕಾರ ಸಚಿವರಾದ ಸೋಮಶೇಖರ ಅವರು ಹಾಗೂ ಇಂಡಿ ಶಾಸಕ ಯಶವಂತರಾಯಗೌಡರು ಈ ಹಿಂದೆ ಒಂದೇ ಪಕ್ಷದಲ್ಲಿದ್ದು, ಆತ್ಮೀಯರಾಗಿದ್ದರು. ಈಗ ಸೋಮಶೇಖರ ಅವರು ಬಿಜೆಪಿಗೆ ಸೇರಿ ಸಹಕಾರ ಸಚಿವರಾಗಿದ್ದು, ಸಹಕಾರ ಸಚಿವರ ಸಹಕಾರದಿಂದ ಇಂಡಿ ಶಾಸಕರು ನಮಗೆ ಸಹಕಾರಿಯಾಗಲಿದ್ದಾರೆ ಎಂದು ಪರೋಕ್ಷವಾಗಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಸಿಂದಗಿ ಶಾಸಕ ಎಂ.ಸಿ. ಮನಗೂಳಿ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಶಾಸಕ ರಾಜು ಆಲಗೂರ, ಮಾಜಿ ಶಾಸಕ ವಿಠಲ ಕಟಕದೊಂಡ, ಸಂಭಾಜಿ ಮಿಸಾಳೆ, ಎಂ.ಆರ್‌. ಪಾಟೀಲ, ಬಿ.ಎಂ. ಕೋರೆ ಸೇರಿದಂತೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next