Advertisement

ನೆರೆ ಸಂತ್ರಸ್ತರಿಗೆ ಸಹಾಯ ನೀಡಿ

05:23 PM Dec 13, 2019 | Suhan S |

ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಕ್ಕಳು ಹಾಗೂ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸಿಕೊಡಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಮಹಿಳಾ ಜಾಗೃತಿ ಒಕ್ಕೂಟ ಹಾಗೂ ಗ್ರಾಮೀಣ ಕೂಲಿಕಾರ್ಮಿಕರ ಸಂಘದ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ನೆರೆ ಹಾವಳಿಯಿಂದ ಅನೇಕ ಕಡೆ ಮನೆಗಳು ನೆಲಸಮವಾಗಿವೆ. ಮನೆಗಳು ಬಿದ್ದಿದ್ದರಿಂದ ದಾಖಲಾತಿಗಳು ಸಿಗದೆ ಸಂತ್ರಸ್ತರು ಬಹಳ ಪರದಾಡುತ್ತಿದ್ದಾರೆ. ದಾಖಲಾತಿ ಇಲ್ಲದ ಕಾರಣ ಅವರಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅವರಿಗೆ ಯಾವುದೇ ರೀತಿಯ ಕಾನೂನಾತ್ಮಕ ಸಲಹೆ ಹಾಗೂ ಮಾರ್ಗದರ್ಶನ ಸಿಗುತ್ತಿಲ್ಲ. ಮನೆ ಕಳೆದುಕೊಂಡವರಲ್ಲಿ ಅನೇಕರು ಹಿರಿಯರಾಗಿದ್ದಾರೆ. ಅವರಿಗೆ ಹೆಜ್ಜೆಹೆಜ್ಜೆಗೂ ಸಹಾಯ ಬೇಕಾಗಿದೆ. ಕಾರಣ ಸರಕಾರ ಕೂಡಲೇ ಇಂತಹ ಸಂತ್ರಸ್ತರತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಶಾಲೆ ಕಟ್ಟಡಗಳ ದುರಸ್ತಿ ಹಾಗೂ ನಿರ್ಮಾಣ ಕಾರ್ಯ ತ್ವರಿತವಾಗಿ ಆಗಬೇಕು. ಇಲ್ಲದಿದ್ದರೆ ಮಕ್ಕಳ ಶಿಕ್ಷಣದ ಮೇಲೆ ಬಹಳ ಪರಿಣಾಮ ಬೀರಲಿದೆ. ಅವರಕಲಿಕೆ ಕುಂಠಿತವಾಗಲಿದೆ. ಈಗ ಶಾಲೆಗಳಿಗೆ ನೀಡುವ ನಿರ್ವಹಣಾ ವೆಚ್ಚವನ್ನು ಸರಕಾರ ಹೆಚ್ಚಿಸಬೇಕು. ಅದೇ ರೀತಿ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡಬೇಕು. ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು. ನೆರೆ ಹಾವಳಿ ಹಾಗೂ ಭಾರೀ ಮಳೆಯಿಂದ ಅನೇಕ ಕಡೆ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಕೂಡಲೇ ರಸ್ತೆಗಳ ದುರಸ್ತಿಗೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ನೆರೆ ಸಂತ್ರಸ್ತರ ನೆರವಿಗಾಗಿ ಸರಕಾರ ಕೂಡಲೇ ವಿಕೋಪ ನಿರ್ವಹಣಾ ಕಾರ್ಯತಂತ್ರ ಹಾಗೂ ಕ್ರಿಯಾ ಯೋಜನೆಯನ್ನು ರೂಪಿಸಿ ಜಿಲ್ಲೆಯ ಸಂತ್ರಸ್ತರಿಗೆ ಸಹಾಯವಾಗುವಂತೆ ಕ್ರಮ ಕೈಗೊಳ್ಳಬೇಕು. ಇದು ಸರಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪರಿಸರವಾದಿ ಶಿವಾಜಿ ಕಾಗಣಿಕರ, ಕವಿತಾ ರತ್ನ, ಶಾರದಾ ಗೋಪಾಲ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next