Advertisement

ಅಪಫಾತ ಗಾಯಾಳುವಿಗೆ ಧೈರ್ಯದಿಂದ ನೆರವಾಗಿ

06:00 AM Oct 01, 2018 | |

ಬೆಂಗಳೂರು/ನವದೆಹಲಿ: ನೀವು ಹೋಗುತ್ತಿರುವ ರಸ್ತೆಯಲ್ಲಿ ಭೀಕರ ಅಪಘಾತವಾಗಿ ಹಲವರಿಗೆ ಗಾಯಗಳಾಗಿವೆ. ನೆರವು ನೀಡುವ ಆಸೆ ಇದ್ದರೂ ಪೊಲೀಸ್‌ ಠಾಣೆ, ಕೋರ್ಟ್‌, ಕೇಸು ಭೀತಿಯಿಂದ ದೂರವಾಗಬೇಕಾಗಿಲ್ಲ. ಇಂಥ ಸಂದರ್ಭಗಳಲ್ಲಿ ನೆರವು ನೀಡುವವರಿಗೆಂದೇ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ರಚಿಸಿದ  ಕರ್ನಾಟಕ ಜೀವರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತ (ತುರ್ತು ಸನ್ನಿವೇಶಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ) ವಿಧೇಯಕ 2016ಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹಿ ಹಾಕಿದ್ದಾರೆ.

Advertisement

 2016ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ಅದಕ್ಕೆ ಅನುಮೋದನೆ ನೀಡಲಾಗಿತ್ತು.  ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ 2017ರ ಫೆ.18ರಂದು ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿತ್ತು. 

ರಸ್ತೆ, ರೈಲು, ಜಲ ಅಥವಾ ವಾಯು ಅಪಘಾತಗಳಲ್ಲಿ ಮಾರಣಾಂತಿಕವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ನೆರವಾಗುವವರಿಗೆ ಪೊಲೀಸರಿಂದ ಮತ್ತು ಕೋರ್ಟ್‌ ವಿಚಾರಣೆ ವೇಳೆ ಉಂಟಾಗುವ  ಕಾನೂನಾತ್ಮಕ ಕಿರುಕುಳ ತಪ್ಪಿಸಿ ಈ ರೀತಿಯ ಪರೋಪಕಾರಿ ಚಟುವಟಿಕೆಗಳನ್ನು ಉತ್ತೇಜಿಸಲು ಈ ವಿಧೇಯಕವನ್ನು ರೂಪಿಸಲಾಗಿತ್ತು. ವೈದ್ಯಕೀಯ ಭಾಷೆಯಲ್ಲಿ ಅದನ್ನು ಗೋಲ್ಡನ್‌ ಅವರ್‌ ಎಂದು ಕರೆಯಲಾಗುತ್ತದೆ. 

ಸಾಕ್ಷಿಗಳಾಗಬೇಕಾಗಿತ್ತು: ಅಪಘಾತ ಪ್ರಕರಣಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಪರೋಪಕಾರಿಗಳನ್ನು ಸಾಕ್ಷಿಗಳಾಗಿ ಪರಿಗಣಿಸಲಾಗುತ್ತದೆ. ಇದರಿಂದ ಸಹಾಯ ಮಾಡಿದ ಕಾರಣಕ್ಕೆ ಅವರು ಕೋರ್ಟ್‌ಗೆ ಅಲೆದಾಡುವ ಪರಿಸ್ಥಿತಿ ಇರುತ್ತದೆ. ಈ ಕಾರಣದಿಂದಾಗಿಯೇ ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ನೆರವಿಗೆ ಸಾಕಷ್ಟು ಮಂದಿ ಮುಂದಾಗುವುದಿಲ್ಲ. ಇದರ ಪರಿಣಾಮ ಗಾಯಾಳುಗಳಿಗೆ ಸೂಕ್ತ ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ಸಿಗದೆ ಅಥವಾ ಆಸ್ಪತ್ರೆಗೆ ದಾಖಲಿಸುವಾಗ ವಿಳಂಬವಾಗಿ ಪ್ರಾಣಹಾನಿಯಾದ ಉದಾಹರಣೆಗಳೂ ಇವೆ. ಕಡ್ಡಾಯವಾಗಿತ್ತು: ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ನೀಡಬೇಕಿತ್ತು. ಇದರಿಂದಾಗಿ ಪೊಲೀಸರು ಹುಡುಕಿಕೊಂಡು ಹೋಗಿ ಅವರನ್ನು ಸಾಕ್ಷಿಗಳಾಗಿ ಪರಿಗಣಿಸುತ್ತಿದ್ದರು.

ಹೊಸ ವ್ಯವಸ್ಥೆ ಏನು?: ಅಂಗೀಕಾರವಾಗಿರುವ ವಿಧೇಯಕದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ನೀಡಬೇಕೆಂಬ ನಿಯಮ ರದ್ದಾಗಲಿದೆ. ಅಷ್ಟೇ ಅಲ್ಲ, ಪ್ರತ್ಯಕ್ಷದರ್ಶಿ ಆಗದೇ ಇರುವ ಸನ್ನಿವೇಶದಲ್ಲೂ ಪೊಲೀಸರು ಸಾಕ್ಷಿಯಾಗಬೇಕು ಎಂದು ಒತ್ತಾಯ ಮಾಡಿದಲ್ಲಿ ಅಂತಹ ಪೊಲೀಸ್‌ ಅಧಿಕಾರಿ ವಿರುದ್ಧ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

Advertisement

ವೆಚ್ಚ ಭರಿಸಲಾಗುತ್ತದೆ: ಒಂದು ವೇಳೆ ಪರೋಪಕಾರಿ ಠಾಣೆ, ಕೋರ್ಟ್‌ಗೆ ವಿಚಾರಣೆಗಾಗಿ ಹಾಜರಾದರೆ ಅದರ ವೆಚ್ಚವನ್ನು ಭರಿಸಲಾಗುತ್ತದೆ. ಅದಕ್ಕಾಗಿ ಕರ್ನಾಟಕ ಸರ್ಕಾರ 5 ಕೋಟಿ ರೂ. ಇರುವ ಪರೋಪಕಾರಿ ನಿಧಿ ಸ್ಥಾಪಿಸಿ ಅದರಿಂದ ಪಾವತಿ ಮಾಡಲಾಗುತ್ತದೆ.

ಪ್ರಥಮ ಚಿಕಿತ್ಸೆ ನೀಡಬೇಕು: ಗಾಯಾಳುಗಳು ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ವಿಳಂಬ ಮಾಡದೆ ಪ್ರಥಮ ಚಿಕಿತ್ಸೆ ನೀಡಬೇಕು.  ಪೊಲೀಸ್‌ ದೂರು ದಾಖಲಾಗದೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳುವಂತಿಲ್ಲ.  ವಿಳಂಬ ಮಾಡಿದರೆ ಅಥವಾ ಚಿಕಿತ್ಸೆ ನಿರಾಕರಿಸಿ ಗಾಯಾಳು ಮೃತಪಟ್ಟರೆ ಅಂತಹ ಪ್ರಕರಣಗಳಲ್ಲಿ ಆಸ್ಪತ್ರೆ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶವಿದೆ. ಆಸ್ಪತ್ರೆಗಳು ಮೊದಲ ಬಾರಿ ಎಸಗುವ ಇಂತಹ ತಪ್ಪುಗಳಿಗೆ 10 ಸಾವಿರ ರೂ. 2ನೇ ಬಾರಿ ತಪ್ಪೆಸಗಿದರೆ 50 ಸಾವಿರ ರೂ. ಹಾಗೂ ನಂತರದ ತಪ್ಪುಗಳಿಗೆ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. 

4,80,652- 2016ರಲ್ಲಿ ದೇಶದಲ್ಲಿ ನಡೆದ ಅಪಘಾತ ಪ್ರಕರಣಗಳು
1,50,785- ಅಪಘಾತದಲ್ಲಿ ಅಸುನೀಗಿದವರ ಸಂಖ್ಯೆ
5,01,423- 2015ರಲ್ಲಿ ದೇಶದಲ್ಲಿ ನಡೆದ ಅಪಘಾತ ಪ್ರಕರಣಗಳು
1,46, 133- ಅಪಘಾತದಲ್ಲಿ ಅಸುನೀಗಿದವರ ಸಂಖ್ಯೆ

ಈಗಿನ ವ್ಯವಸ್ಥೆ ಏನು?
– ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವವರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗುತ್ತದೆ.
– ಹೀಗಾಗಿ ಅವರು ಠಾಣೆಗೆ, ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ
– ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದವರು  ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನೀಡಬೇಕು.

ಇನ್ನು ಮುಂದೆ?
– ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನೀಡಬೇಕಾಗಿಲ್ಲ.
– ಸಾಕ್ಷಿಯಾಗಬೇಕೆಂದು ಒತ್ತಾಯ ಮಾಡಿದ ಪೊಲೀಸ್‌ ಅಧಿಕಾರಿ ವಿರುದ್ಧ ಕೇಸು ದಾಖಲಿಸಲು ಅವಕಾಶ
– ಕೋರ್ಟ್‌, ಠಾಣೆಗೆ ವಿಚಾರಣೆಗೆ ಹಾಜರಾದರೆ ಅದರ ವೆಚ್ಚ ನೀಡಲಾಗುತ್ತದೆ.
– ಅದಕ್ಕಾಗಿ ಕರ್ನಾಟಕ ಸರ್ಕಾರದಿಂದ ಪರೋಪಕಾರಿ ನಿಧಿ  ಸ್ಥಾಪನೆ.
– ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ವಿಳಂಬ ಮಾಡದೆ, ಕೇಸು ದಾಖಲಾಗಬೇಕು ಎಂದು ಸಬೂಬು ಹೇಳದೆ ಪ್ರಥಮ ಚಿಕಿತ್ಸೆ ನೀಡಬೇಕು.
– ಚಿಕಿತ್ಸೆ ದೊರೆಯದೆ ಗಾಯಾಳು ಮೃತಪಟ್ಟರೆ ಕ್ರಿಮಿನಲ್‌ ಕೇಸು ದಾಖಲಿಸಲು ಅವಕಾಶ.
– 10 ಸಾವಿರ ರೂ.- ಆಸ್ಪತ್ರೆಗಳು ಮೊದಲ ಬಾರಿ ತಪ್ಪೆಸಗಿದರೆ ವಿಧಿಸುವ ದಂಡದ ಮೊತ್ತ
– 50 ಸಾವಿರ ರೂ.- 2ನೇ ಬಾರಿಗೆ ಆಸ್ಪತ್ರೆಗಳು ತಪ್ಪೆಸಗಿದರೆ ವಿಧಿಸುವ ದಂಡ ಮೊತ್ತ
– 5 ಲಕ್ಷ ರೂ.- ನಂತರದ ತಪ್ಪುಗಳಿಗೆ ವಿಧಿಸಲಾಗುವ ದಂಡದ ಮೊತ್ತ.
 

Advertisement

Udayavani is now on Telegram. Click here to join our channel and stay updated with the latest news.

Next