Advertisement

ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಕಡ್ಡಾಯ-ಸುರಕ್ಷತೆ ಅರಿವು

01:34 PM Jun 29, 2019 | Suhan S |

ಶಿರಹಟ್ಟಿ: ಪ್ರತಿಯೊಬ್ಬ ವ್ಯಕ್ತಿ ಕುಟುಂಬದ ಆಧಾರ ಸ್ತಂಭವಾಗಿದ್ದಾರೆ. ಪ್ರತಿ ಜೀವಕ್ಕೂ ಬೆಲೆಯಿದೆ. ಇದನ್ನು ತಿಳಿದುಕೊಳ್ಳದೇ ಹುಂಬತನಕ್ಕೆ ಮುಂದಾದರೆ ಜೀವಕ್ಕೆ ಆಪತ್ತು ಖಚಿತ. ಆದ್ದರಿಂದ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಕುಟುಂಬದ ಆತಂಕ ನಿವಾರಿಸಬೇಕೆಂದು ಪಿಎಸ್‌ಐ ಬಸವರಾಜ ತಿಪ್ಪ್ಪಾರಡ್ಡಿ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹೆಲ್ಮೆಟ್ ಕಡ್ಡಾಯ ಮತ್ತು ಸುರಕ್ಷತೆ ಕುರಿತು ಅವರು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ನಿರ್ಲಕ್ಷ್ಯ ಧೋರಣೆಯಿಂದ ಕುಟುಂಬವನ್ನು ಬೀದಿಗೆ ತರಬೇಡಿ. ವಾಹನ ಸವಾರರು ನಿಯಮಗಳನ್ನು ಪಾಲಿಸುವುದರ ಜೊತೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇನ್ನು ಆಟೋ ರಿಕ್ಷಾದವರು ಮಿತವಾಗಿ ಪ್ಯಾಸೆಂಜರ್‌ ಹಾಕಬೇಕು. ಮಿತವಾದ ವೇಗದಲ್ಲಿ ಚಲಿಸಬೇಕು. ಇತ್ತೀಚಿನ ದಿನಮಾನದಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮಿತವಾಗಿ ಪ್ರಯಾಣಿಕರನ್ನು ಕರೆದೊಯ್ಯಬೇಕು. ವಾಹನ ಚಲಿಸುವಾಗ ಹೆಚ್ಚು ಧ್ವನಿಯೊಂದಿಗೆ ಹಾಡುಗಳನ್ನು ಕೇಳಿವುದು ಮತ್ತು ಶಬ್ದಗಳನ್ನು ಮಾಡುವುದು ನಿಷೇಧಿಸಬೇಕು ಎಂದರು.

ಮಾಜಿ ಶಾಸಕ ಎಸ್‌.ಎನ್‌. ಪಾಟೀಲ್ ಮತ್ತು ಪಪಂ ಮಾಜಿ ಸದಸ್ಯ ಚಾಂದಸಾಬ ಮುಳಗುಂದ, ಪೊಲೀಸ್‌ ಸಿಬ್ಬಂದಿ ಇದ್ದರು.

ಹೆಲ್ಮೆಟ್ ಧರಿಸುವಂತೆ ಹೂ ನೀಡಿ ವಿಶೇಷ ಜಾಗೃತಿ:

Advertisement

ದ್ವಿಚಕ್ರ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸುವಂತೆ ಮನವರಿಕೆ ಮಾಡಿ, ಗುಲಾಬಿ ಹೂವು ನೀಡುವ ಮೂಲಕ ಅವಳಿ ನಗರದ ಪ್ರಮುಖ ವೃತ್ತಗಳಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ನಗರದ ಮುಳಗುಂದ ನಾಕಾ, ಭೂಮರೆಡ್ಡಿ ಸರ್ಕಲ್, ಮಹಾತ್ಮಗಾಂಧಿ ವೃತ್ತ, ಬೆಟಗೇರಿ ಮುಖ್ಯರಸ್ತೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಶುಕ್ರವಾರ ಬೆಳಗ್ಗೆಯೇ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಜಮಾಯಿಸಿದ್ದರು. ಶಿರಸ್ತ್ರಾಣ (ಹೆಲ್ಮೆಟ್) ಧರಿಸದೇ ಸಂಚರಿಸುವ ವಾಹನ ಸವಾರರನ್ನು ತಡೆದು, ದಂಡ ಹಾಕದೇ ಅವರಿಗೆ ಗುಲಾಬಿ ಹೂ ನೀಡುವುದರೊಂದಿಗೆ ಇನ್ನು ಮುಂದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಪ್ರೊಬೇಶನರಿ ಡಿವೈಎಸ್‌ಪಿ ನವೀನಕುಮಾರ, ಸಂಚಾರಿ ಠಾಣೆ ಪಿಎಸ್‌ಐ ಕಮಲಾ ದೊಡ್ಡಮನಿ, ಗದಗ ಶಹರ ಪಿಎಸ್‌ಐ ಸೋಮೇಶ ಗೆಜ್ಜಿ, ಶಹರ ಹೆಚ್ಚವರಿ ಪಿಎಸ್‌ಐ ಉಮಾ ವಗ್ಗರ ಬೈಕ್‌ ಸವಾರರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಧರಿಸಲು ಸೂಚಿಸಿದರು.

ಪೊಲೀಸ್‌ ಸಿಬ್ಬಂದಿ ಸಂತೋಷ ಗುಬ್ಬಿ, ಮಂಜುನಾಥ, ಎಸ್‌.ಜಿ. ಹೂಗಾರ, ಮಾರುತಿ ಕುರ್ಲಗೇರಿ, ಐ.ಪಿ. ರಾಠೊಡ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಜಾಗೃತಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next