ದೇವನಹಳ್ಳಿ: ದ್ವಿಚಕ್ರ ವಾಹನ ಸವಾರರು ಹೆದ್ದಾರಿಯಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಬೇಡಿ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಹಿರಿಯ ಮೋಟಾರು ನಿರೀಕ್ಷಕ ನರಸಿಂಹ ಮೂರ್ತಿ ತಿಳಿಸಿದರು.
ನಗರದ ರಾಣಿ ಸರ್ಕಲ್‌ನಲ್ಲಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಠಾಣೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷೆ ಸಾಪ್ತಾಹದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ್ವಿಚಕ್ರ ವಾಹನಗಳಿಂದಲೇ ಹೆಚ್ಚು ಅಪಘಾತ: ಪ್ರತಿ ಎರಡು ಕಿ.ಮೀ. ಒಂದು ಅಪಘಾತ ಸಂಭವಿಸುತ್ತಿದೆ. ಅತಿ ಹೆಚ್ಚು ಅಪಘಾತಗಳು ದ್ವಿಚಕ್ರ ವಾಹನಗಳಿಂದಲೇ ಆಗುತ್ತಿದೆ. ರಸ್ತೆ ಸುರಕ್ಷತೆ ನಿಯಮ ಪಾಲಿಸಬೇಕು. ಅತಿಯಾದ ವೇಗ ಜೀವನದ ಕೊನೆ ಗಳಿಗೆಯಾಗುತ್ತಿದೆ. ನಿಧಾನ ಚಾಲನೆ ಜೀವನ ರಕ್ಷಣೆ ಆಗುತ್ತದೆ. ಭಾರಿ ವಾಹನಗಳನ್ನು ಪಾರ್ಕಿಂಗ್ ಸ್ಥಳಗಳಲ್ಲಿ 468/724 ಬಲ ಭಾಗ ಮತ್ತು 513/470 ಕಿ. ಮೀ. ಎಡ ಭಾಗದಲ್ಲಿ ನಿಲ್ಲಿಸಬೇಕು. ಕುಡಿತ ದಿಂದ ಚಾಲನೆ ಮಾಡಬೇಕು. ಕುಡಿದು ವಾಹನ ಚಾಲನೆ ಮಾಡಿದರೆ ದಂಡ ವಿಧಿಸಲಾಗುವುದು. ಕುಡಿದು ವಾಹನ ಚಾಲನೆ ಮಾಡಿ ಪ್ರಾಣ ಕಳೆದುಕೊಳ್ಳಬೇಡಿ. ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡ ಬೇಡಿ ಹಾಗೂ ನಿಮ್ಮ ಗಮನ ಬೇರೆ ಕಡೆ ಚಲಿಸಲು ಬಿಡಬೇಡಿ, ಇಲ್ಲವಾದರೆ ಅಪಘಾತಕ್ಕೆ ಕಾರಣವಾಗುವಿರಿ. ರಸ್ತೆ ಸುರಕ್ಷತೆ ಮತ್ತು ನಿಯಮ ಪಾಲನೆ ಮಾಡಿದರೆ, ಅಪಘಾತ ಹಾಗೂ ಇನ್ನಿತರೆ ಹಾನಿ ತಡೆಗಟ್ಟಲು ಸಾಧ್ಯವಿದೆ ಎಂದರು.
ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ: ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಉಮೇಶ್ ಮಾತನಾಡಿ, ವಾಹನ ಓಡಿಸುವ ಮುನ್ನಾ ವಾಹನ ಪರವಾನಗಿ, ವಾಹನ ವಿಮೆ ದಾಖಲೆ ಹೊಂದಿರಬೇಕು. ಅಲ್ಲದೇ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ಸಂಚಾರ ನಿಯಮ ಪಾಲನೆ ಮಾಡುವುದರಿಂದ ಹೆಚ್ಚಿನ ಅನುಕೂಲವಾಗುವುದು. ಅಮೂಲ್ಯ ಜೀವ ಉಳಿಸಿಕೊಳ್ಳಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳ ಸಂಚಾರದಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ತಪ್ಪಿಸಲು ರಸ್ತೆ ಸುರಕ್ಷತೆ ನಿಯಮ ಪಾಲನೆ ಮಾಡುವುದು ಮುಖ್ಯವಾಗಿದೆ. ಪಾದಚಾರಿಗಳು ಸಹ ರಸ್ತೆ ದಾಟುವಾಗ ವಾಹನ ಬರುವುದನ್ನು ಗಮನಿಸಿ, ಸಿಗ್ನಲ್ ನೋಡಿಕೊಂಡು ಮನ್ನುಗ್ಗಬೇಕು. ವಿದ್ಯಾರ್ಥಿಗಳು 18 ವರ್ಷ ತುಂಬಿದ ಬಳಿಕ ವಾಹನ ಚಾಲನೆ ಪರವಾನಗಿ ಪಡೆದು ಸವಾರಿ ಮಾಡುವುದು ಒಳಿತು. ಅಪ್ರಾಪ್ತರು ವಾಹನ ಚಾಲನೆ ಮಾಡಿ, ಅಪಘಾತ ಮಾಡಿದರೆ 25 ಸಾವಿರ ರೂ. ದಂಡ ಹಾಗೂ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದರು.
ಪ್ರಾದೇಶಿಕ ಸಾರಿಗೆ ಇಲಾಖೆ ಮೋಟಾರು ನಿರೀಕ್ಷಕ ಲಕ್ಷ್ಮೀ, ಮೋಹನ್ ಗಾವುಕರ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಠಾಣೆ ಎಎಸ್‌ಐ ರಾಜಣ್ಣ, ಇದ್ದರು.