ಶಹಾಬಾದ: ತಾಲೂಕಿನ ಬಾನಂಗಳದಲ್ಲಿ ಬುಧವಾರ ಬೆಳಗ್ಗೆ ಕಂಡು ಬಂದ ಸೂರ್ಯ ವಿಸ್ಮಯಕ್ಕೆ ಬೇರೆಯದೇ ಕಾರಣವಿದೆ. ಈ ಉಂಗುರವನ್ನು “ಹ್ಯಾಲೋ ರಿಂಗ್’ ಎಂದು ಕರೆಯುತ್ತಾರೆ. ಹೆಚ್ಚಾಗಿ ಇದು ಮಳೆಗಾಲ ಮುಗಿಯುವ ಸಂದರ್ಭ ಅಥವಾ ಮಳೆಗಾಲದ ಆರಂಭದಲ್ಲಿ ಮೂಡುತ್ತದೆ. ಮಳೆಹನಿಯ ಕಣಗಳನ್ನು ಮೋಡಗಳು ತುಂಬಿಕೊಂಡಾಗ ಸಂಭವಿಸುವ ವೈಜ್ಞಾನಿಕ ವಿದ್ಯಮಾನವಿದು.
ಸೂರ್ಯನ ಕಿರಣಗಳು ಈ ಮಳೆ ಹನಿಯ ಕ್ರಿಸ್ಟಲ್ ಕಣಗಳ ಮೇಲೆ ಬಿದ್ದು, ವಕ್ರೀಭವನ ಉಂಟಾಗಿ ಇಂಥ ವಿಸ್ಮಯಕಾರಿ ಉಂಗುರ ಸೃಷ್ಟಿಯಾಗುತ್ತದೆ. ಇದನ್ನು 22 ಡಿಗ್ರಿ ಹ್ಯಾಲೋಸ್ ಎಂದು ಕರೆಯುತ್ತಾರೆ. ಇದಕ್ಕೆ ಸೂರ್ಯನ ಕೊಡೆ ಎಂದೂ ಕರೆಯುತ್ತಾರೆ. ಇಂಗ್ಲಿಷನಲ್ಲಿ “ಡಿಫ್ರಾಕ್ಷನ್ ಹ್ಯಾಲೋ’ ಎನ್ನುತ್ತಾರೆ. ಮಳೆ ಬರುವ ಸೂಚನೆಯಿದು ಎಂದು ವಿಶ್ಲೇಷಿಸುತ್ತಾರೆ.
ಭೂ ಮಟ್ಟದಿಂದ ಸುಮಾರು ಆರು ಅಥವಾ ಏಳು ಕಿ.ಮೀ ಎತ್ತರದಲ್ಲಿ ಹಿಮದ ಹರಳುಗಳು ಸೃಷ್ಟಿ ಆಗುತ್ತವೆ. ಸೂರ್ಯನ ಬೆಳಕು ಈ ಹರಳುಗಳ ಮೂಲಕ ಹಾಯ್ದು ಬರುವಾಗ ಬೆಳಕಿನ ಪ್ರತಿಫಲನದಿಂದ ನಮಗೆ ಈ ಅದ್ಭುತ ವೃತ್ತ ಕಾಣಿಸುತ್ತದೆ. ಇದೊಂದು ಪ್ರಕೃತಿಯ ಸುಂದರ ವಿದ್ಯಮಾನ ಎಂದು ಕಲಬುರಗಿ ವಿಜ್ಞಾನ ಕೇಂದ್ರದ ಅಧಿ ಕಾರಿ ಲಕ್ಷಿ ನಾರಾಯಣ ತಿಳಿಸಿದ್ದಾರೆ.
ತಿಳಿ ಆಗಸದಲ್ಲಿ ಸೂರ್ಯನ ಸುತ್ತ ಬೆಳಗ್ಗೆ 12ಗಂಟೆ ಸುಮಾರಿಗೆ ಕಾಮನಬಿಲ್ಲು ಗೋಚರಿಸಿತ್ತು. ಸೌರ ಪ್ರಭೆ ಎಂದು ಗುರುತಿಸಲಾದ ಇದು ನಮ್ಮ ವಾತಾವರಣದಲ್ಲಿ 20,000 ಅಡಿಗಳ ಮೇಲಿರುವ ಉಂಗುರಾಕಾರದ ಸಿರರ್ಸ್ ಮೋಡಗಳೊಳಗೆ ಇರುವ ಮಂಜುಗಡ್ಡೆಯ ಹರಳುಗಳು ಸೂರ್ಯನ ಬೆಳಕಿನ ಕಿರಣಗಳನ್ನು ವಕ್ರೀಭವಿಸುವುದರಿಂದ ಆಗುವ ವಿದ್ಯಮಾನ ಎಂದು ಲಕ್ಷಿ¾à ನಾರಾಯಣ ತಿಳಿಸಿದ್ದಾರೆ.