Advertisement

“ಹಲೋ ಕಂದಾಯ ಸಚಿವರೇ’ಸಹಾಯವಾಣಿ

10:49 PM Apr 30, 2022 | Team Udayavani |

ಬೆಂಗಳೂರು: ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ “72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ’ ತಲುಪಿಸಲು “ಹಲೋ, ಕಂದಾಯ ಸಚಿವರೇ’ ಸಹಾಯವಾಣಿ ಆರಂಭವಾಗಲಿದ್ದು, ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

Advertisement

ನಾಗರಿಕರು ದೂರವಾಣಿ ಕರೆ ಮೂಲಕ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದಾದ ವಿನೂತನ ಯೋಜನೆ ದೇಶದಲ್ಲಿಯೇ ಪ್ರಥಮವಾಗಿದೆ. ಕಂದಾಯ ಇಲಾಖೆಯ ಸೇವೆಗಳನ್ನು ನಾಗರಿಕರು ಅಲೆದಾಟ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಡೆಯುವ ಜನಸ್ನೇಹಿ ವ್ಯವಸ್ಥೆ ನಿಟ್ಟಿನಲ್ಲಿ “ಸ್ವಾವಲಂಬಿ’ ಹಾಗೂ “ನಾಗರಿಕರ ಸ್ವಯಂ ಘೋಷಣೆ ಆಧರಿಸಿ ಕೃಷಿಯೇತರ ಬಳಕೆಗೆ ಭೂ ಪರಿವರ್ತನೆ’ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ್‌, 72 ಗಂಟೆಗಳಲ್ಲಿ ಪಿಂಚಣಿ ಯೋಜನೆಯಡಿ ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ, ಅಂಗವಿಕಲರು, ವಿಧವೆಯರು ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು, ತೃತೀಯ ಲಿಂಗಿಗಳು, ಆ್ಯಸಿಡ್‌ ದಾಳಿಗೊಳಗಾದ ಮಹಿಳೆಯರು ಮತ್ತು ಎಂಡೋಸಲ್ಫಾನ್‌ ಸಂತ್ರಸ್ತರಿಗೆ ನೀಡುವ ಪಿಂಚಣಿ ಅನ್ವಯವಾಗಲಿದೆ ಎಂದು ಹೇಳಿದರು.
ನವೋದಯ ಮೊಬೈಲ್‌ ಆ್ಯಪ್‌ ಮೂಲಕ ಪುಸ್ತುತ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಮಗ್ರ ವಾರ್ಷಿಕ ಪರಿಶೀಲನ ಕಾರ್ಯವನ್ನು ನಡೆಸಲಾಗುತ್ತಿದೆ.

ಮೊಬೈಲ್‌ ಆ್ಯಪ್‌ನಲ್ಲಿ ಮಾಹಿತಿ
ನಾಗರಿಕರು ದೂರವಾಣಿ ಕರೆ ಮೂಲಕ ತಮ್ಮ ಆಧಾರ್‌ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದಾಗಿದೆ. ದೂರವಾಣಿ ಮುಖಾಂತರ ಸ್ವೀಕರಿಸಲಾದ ಕೋರಿಕೆ ಮೇರೆಗೆ ಗ್ರಾಮಲೆಕ್ಕಾಧಿಕಾರಿಗಳು ಸದರಿ ಮಾಹಿತಿ ಆಧರಿಸಿ ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ “ನವೋದಯ” ಮೊಬೈಲ್‌ ಆಪ್‌ ಮೂಲಕ ಅರ್ಜಿದಾರರ ಮಾಹಿತಿ ನಮೂದಿಸಿಕೊಳ್ಳುತ್ತಾರೆ. ಅನಂತರ ಪ್ರಕ್ರಿಯೆ ಆರಂಭಗೊಂಡು 72 ಗಂಟೆಗಳಲ್ಲಿ ಪಿಂಚಣಿ ಮಂಜೂರು ಆದೇಶ ಮನೆ ಬಾಗಿಲಿಗೆ ತಲುಪುತ್ತದೆ ಎಂದು ತಿಳಿಸಿದರು.

ಸ್ವಾವಲಂಬಿ ಯೋಜನೆ
ರೈತರಿಗೆ ಬೇಕಾದ 11 ಇ ಸ್ಕೆಚ್‌ ಹಾಗೂ ಪೋಡಿ ಸ್ವಯಂ ಪಡೆದುಕೊಳ್ಳಲು ರೂಪಿಸಲಾಗಿರುವ ಸ್ವಾವಲಂಬಿ ಆ್ಯಪ್‌ ಬಿಡುಗಡೆ ಮಾಡಿದ್ದು , ಸ್ವಾವಲಂಬಿ ಯೋಜನೆಯ ಅಡಿಯಲ್ಲಿ ನಾಗರಿಕರು ತನ್ನ ಸ್ವಂತ ಖಾಸಗಿ ಜಮೀನಿನ 11ಇ ಸ್ಕೆಚ್‌ ಅಥವಾ ಪೋಡಿ, ಭೂಪರಿವರ್ತನೆಯ ಪೂರ್ವ ನಕ್ಷೆ, ವಿಭಜನೆಯ ನಕ್ಷೆಯನ್ನು ತಾವೇ ತಯಾರಿಸಬಹುದಾಗಿದೆ. ಇದು ನಾಗರಿಕ ಸ್ವ-ಸೇವಾ ವ್ಯವಸ್ಥೆಯಾಗಿದ್ದು, ಅತ್ಯಂತ ನಾಗರಿಕ ಸ್ನೇಹಿ ವ್ಯವಸ್ಥೆಯಾಗಿದೆ. ನಾಗರಿಕರು ತಮ್ಮ ಸ್ವಂತ ಭೂಮಿಯ ನಕ್ಷೆಯನ್ನು ತಾನೆ ಸ್ವತಃ ತಯಾರಿಸಬಹುದು, ಅದು ಸಂಪೂರ್ಣ ಕಾನೂನು ಮಾನ್ಯತೆಯನ್ನು ಹೊಂದಿದೆ. 11 ಇ ಸ್ಕೆಚ್‌, ಭೂಪರಿವರ್ತನೆಯ ಪೂರ್ವ ನಕ್ಷೆ ಫೋಡಿ, ವಿಭಜನೆ ನಕ್ಷೆ ಇದರಿಂದ ಪಡೆಯಬಹುದಾಗಿದೆ ಎಂದು ತಿಳಿಸಿದರು.

Advertisement

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಭೂ ದಾಖಲೆಗಳ ಆಯುಕ್ತ ಮುನೀಷ್‌ ಮೌದ್ಗಿಲ್‌, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕ ಡಿ.ಎಂ. ಸತೀಶ್‌ ಕುಮಾರ್‌ ಉಪಸ್ಥಿತರಿದ್ದರು. ಎ. 10ರಂದು ಉದಯವಾಣಿಯಲ್ಲಿ “ಕರೆ ಮಾಡಿ 72 ಗಂಟೆಗಳಲ್ಲಿ ಪಿಂಚಣಿ ಪಡೆಯಿರಿ’ ಎನ್ನುವ ಶೀರ್ಷಿಕೆಯಡಿ ಸಹಾಯವಾಣಿ ಹಾಗೂ ವಿಶೇಷ ಆ್ಯಪ್‌ ಆರಂಭದ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು.

ಸ್ವಯಂ ಘೋಷಣೆ ಆಧಾರಿತ ಭೂಪರಿವರ್ತನೆ ವ್ಯವಸ್ಥೆ ಜಾರಿಗೊಳಿಸಲಾಗುವುದು. ಈಗ ಇರುವ ವ್ಯವಸ್ಥೆಯಲ್ಲಿ ಭೂಪರಿವರ್ತನೆಗೆ ಅತ್ಯಂತ ದೀರ್ಘ‌ ಸಮಯ ಹಿಡಿಯುತ್ತದೆ.ಹೀಗಾಗಿ, ಭೂ-ಬಳಕೆಯನ್ನು ಮುಕ್ತಗೊಳಿಸಲು ನಾಗರಿಕರು, ಕೈಗಾರಿಕೆಗಳಿಂದ ನಿರಂತರ ಬೇಡಿಕೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕೆಲವೊಂದು ಬದಲಾವಣೆ ಮಾಡಲು ನಿರ್ಧರಿಸಿ ಸ್ವಯಂ-ಘೋಷಣೆ ಆಧಾರಿತ ಭೂ ಪರಿವರ್ತನೆಗೆ ಅನುಮತಿ ನೀಡಲು ನಿರ್ಧರಿಸಿದೆ. ಇದರಿಂದ ಕೃಷಿ ಭೂಮಿಯ ಮಾಲೀಕರು ತಮ್ಮ ಭೂಮಿಯನ್ನು ಕೃಷಿಯೇತರ ಬಳಕೆ ಮಾಡಲು ಸಾಧ್ಯವಾಗುತ್ತದೆ.
– ಆರ್‌. ಅಶೋಕ್‌, ಕಂದಾಯ ಸಚಿವರು

 

Advertisement

Udayavani is now on Telegram. Click here to join our channel and stay updated with the latest news.

Next