Advertisement

ತೊಡಿಕಾನ-ಮಾಪಳಕಜೆ ಸಂಪರ್ಕ ಸೇತುವೆ ಎಂದು?

10:58 PM Oct 09, 2019 | Sriram |

ಅರಂತೋಡು: ತೊಡಿಕಾನ-ಮುಪ್ಪಸೇರು- ಕುದುರೆ ಪಾಯ-ಮಾಪಳಕಜೆ ನಡುವೆ ಮತ್ಸ್ಯತೀರ್ಥ ಹೊಳೆಗೆ ಸಂಪರ್ಕ ಸೇತುವೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಈ ಭಾಗದ ಜನರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ವಾಹನ ಸಂಪರ್ಕ ಸಾಧ್ಯವಾಗದೆ ಸ್ಥಳೀಯರೊಬ್ಬರಿಗೆ ದಾರಿ ಮಧ್ಯೆಯೇ ಹೆರಿಗೆಯಾಗಿದೆ.

Advertisement

ಐದಾರು ವರ್ಷಗಳ ಹಿಂದೆ ಮಳೆಗಾಲದ ಸಂದರ್ಭದಲ್ಲಿ ಅಸೌಖ್ಯಕ್ಕೆ ಒಳಗಾದ ವ್ಯಕ್ತಿಯೊಬ್ಬರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೇ ದಾರಿ ಮಧ್ಯೆ ಮೃತಪಟ್ಟಿದ್ದರು.

ಈ ಸೇತುವೆ ನಿರ್ಮಾಣಕ್ಕೆ ಸುಮಾರು 20 ವರ್ಷಗಳ ಹಿಂದೆ ಬೇಡಿಕೆ ಇಡಲಾಗಿತ್ತು. ಪರಿಣಾಮವಾಗಿ ಸಂಸದರ ನಿಧಿಯಿಂದ 20 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು, ಟೆಂಡರ್‌ ಆಗಿದೆ ಎಂದು ತಿಳಿದುಬಂದಿದೆ. ಈ ರಸ್ತೆ ಅಭಿವೃದ್ಧಿಗಾಗಿ 10 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಅಂಗಾರ ತಿಳಿಸಿದ್ದಾರೆ.

6 ತಿಂಗಳ ಹಿಂದೆಯೇ ಗುದ್ದಲಿಪೂಜೆ
ಆರು ತಿಂಗಳ ಹಿಂದೆ ಇಲ್ಲಿನ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಸೇತುವೆ ಕಾಮಗಾರಿಗೆ ಟೆಂಡರ್‌ ಆದರೂ ಕಾಮಗಾರಿ ಪ್ರಾರಂಭಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ಮತ್ಸ್ಯ ತೀರ್ಥ ಹೊಳೆಯಿಂದ ದ.ಕ., ಕೊಡಗು ಜಿಲ್ಲೆಯ ಗಡಿಭಾಗದ ತನಕ ದ.ಕ. ಜಿಲ್ಲೆಯ ವ್ಯಾಪ್ತಿಗೆ ಈ ರಸ್ತೆ ಒಳಪಡುತ್ತದೆ. ಮತ್ಸ್ಯತೀರ್ಥ ಹೊಳೆ ಬದಿಯಿಂದ ಗಡಿಭಾಗದ 1.5 ಕಿ.ಮೀ. ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಪೆರಂಬಾರು ಬಳಿ 60 ಮೀಟರ್‌ ರಸ್ತೆಗೆ ಸ್ಥಳೀಯ ಗ್ರಾಮ ಪಂಚಾಯತ್‌, ಜಿ.ಪಂ., ಶಾಸಕರ ಅನುದಾನದಲ್ಲಿ ಕಾಂಕ್ರೀಟ್‌ ಹಾಕಲಾಗಿದೆ.

Advertisement

ಇನ್ನೂ 100 ಮೀ. ರಸ್ತೆ ಕಾಂಕ್ರೀಟ್‌ ಆಗಲು ಬಾಕಿ ಇದೆ.
ತೊಡಿಕಾನ ದೇಗುಲಕ್ಕೆ ಪೂರಕ ತೊಡಿಕಾನದಲ್ಲಿ ಅತೀ ಪುರಾತನ ಶ್ರೀ ಮಲ್ಲಿಕಾರ್ಜುನ ದೇವಾಲಯವಿದೆ. ಇಲ್ಲಿಗೆ ದಿನ ನಿತ್ಯ ನೂರಾರು ಭಕ್ತರು, ಉತ್ಸವಾದಿ ದಿನಗಳಲ್ಲಿ ಸಾವಿರಾರು ಭಕ್ತರು ಆಗಮಿತ್ತಾರೆ. ಇಲ್ಲಿಯ ದೇವಾಲಯದಲ್ಲಿ ರುವ ಸಾವಿರಾರು ದೇವರ (ಮಹಷೀರ್‌) ಮೀನುಗಳು, ಪಕ್ಕದ ದೇವರ ಗುಂಡಿ ಜಲಪಾತ ಅನೇಕ ಪ್ರವಾಸಿ ಪ್ರೇಮಿಗಳನ್ನು ತನ್ನತ್ತ ಗಮನ ಸೆಳೆಯುತ್ತಿದೆ.

ಕೊಡಗು ರಸ್ತೆ ಅಭಿವೃದ್ಧಿ
ದ.ಕ. ಜಿಲ್ಲೆಯ ಗಡಿಭಾಗ ತನಕ ಕೊಡಗು ಜಿಲ್ಲೆಗೆ ಸೇರಿದ ರಸ್ತೆ ಸಂಪೂರ್ಣ ಸರ್ವ ಋತು ರಸ್ತೆಯಾಗಿ ಅಭಿವೃದ್ಧಿಗೊಂಡಿದೆ. ಇಲ್ಲಿಯ ಮಾಪಳಕಜೆ ತೋಡಿಗೆ ಕಿರು ಸೇತುವೆ ಕಾಮಗಾರಿ ನಡೆಯುತ್ತಿದ್ದು, ಅದು ಕೊನೆಯ ಹಂತದಲ್ಲಿದೆ. ತೊಡಿಕಾನ ಮತ್ಸ್ಯತೀರ್ಥ ಹೊಳೆಗೆ ಸೇತುವೆ ನಿರ್ಮಾಣಗೊಂಡರೆ ತೊಡಿಕಾನ-ಕುದುರೆಪಾಯ ಮಾಪಳಕೆ ನಡುವೆ ಸರ್ವ ಋತು ಹಾಗೂ ಅಂತರ್‌ ಜಿಲ್ಲಾ ಸಂಪರ್ಕ ರಸ್ತೆ ಅಭಿವೃದ್ಧಿಯಾಗುತ್ತದೆ. ತೊಡಿಕಾನ ಪ್ರವಾಸಿ, ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಗೊಳ್ಳಲು ಸಹಕಾರಿಯಾಗುತ್ತದೆ.

ಟೆಂಡರ್‌ ಆಗಿದೆ
ತೊಡಿಕಾನ- ಮುಪ್ಪಸೇರು- ಮಾಪಳಜೆ, ಕುದರೆಪಾಯ ಸಂಪರ್ಕಕ್ಕೆ ಪೂರಕವಾದ ಮತ್ಸ್ಯತೀರ್ಥ ಹೊಳೆಗೆ ಕಿರು ಸೇತುವೆ ನಿರ್ಮಾಣಕ್ಕೆ ಟೆಂಡರ್‌ ಆಗಿದೆ. ಕಾಮಗಾರಿ ಸದ್ಯದಲ್ಲಿ ಪ್ರಾರಂಭಿಸಲಾಗುವುದು.
-ಹರೀಶ್‌ ಕಂಜಿಪಿಲಿ, ಜಿ.ಪಂ. ಸದಸ್ಯ

 ಒತ್ತಡ ಹೇರಬೇಕು
ತೊಡಿಕಾನ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದ ಸುದ್ದಿ ಕೇಳಿ ಖುಷಿಯಾಯಿತು. ಆದರೆ ಇನ್ನೂ ಕಾಮಗಾರಿ ಪ್ರಾರಂಭವಾಗದಿರುವುದು ನಿರಾಸೆ ತಂದಿದೆ. ಕಾಮಗಾರಿ ಆದಷ್ಟು ಬೇಗ ಪ್ರಾರಂಭಿಸುವಂತೆ ಜನಪ್ರತಿನಿಧಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹೇರಬೇಕಾಗಿದೆ.
– ಪುರುಷೋತ್ತಮ ಸ್ಥಳೀಯ

-ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next