Advertisement

ಬೆಂಗಳೂರು ಬಾನಲ್ಲಿ ಹೆಲಿಟ್ಯಾಕ್ಸಿ ಕಲರವ

12:24 PM Mar 06, 2018 | Team Udayavani |

ಬೆಂಗಳೂರು: ವಾಹನಗಳು ಉಗುಳುವ ಹೊಗೆ ಸೇವಿಸುತ್ತಾ ಸಂಚಾರದಟ್ಟಣೆಯಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವ ಕಷ್ಟ ಇನ್ನಿಲ್ಲ. ಇನ್ನೇನಿದ್ದರೂ ಆಗಸದಲ್ಲಿ ಹಾರಿಕೊಂಡು ಕೆಲವೇ ನಿಮಿಷಗಳಲ್ಲಿ ನಗರದ ಒಂದು ತುದಿಯಿಂದ ಮತ್ತೂಂದು ತುದಿ ತಲುಪುವ ಖುಷಿ!

Advertisement

ಹೌದು, ಟೂರಿಸ್ಟ್‌ ಟ್ಯಾಕ್ಸಿ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಂತೆಯೇ ದೇಶದ ಮೊದಲ “ಹೆಲಿಟ್ಯಾಕ್ಸಿ’ ಸೇವೆ ನಗರದಲ್ಲಿ ಆರಂಭಗೊಂಡಿದೆ. ದೇಶ-ವಿದೇಶಗಳಿಂದ ವಿಮಾನಗಳಲ್ಲಿ ನಗರಕ್ಕೆ ಬಂದಿಳಿಯುವ ಪ್ರಯಾಣಿಕರಿಗೆ ಸಂಚಾರದಟ್ಟಣೆ ಕಿರಿಕಿರಿಯಿಂದ ಮುಕ್ತಿ ನೀಡಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಬಿಐಎಎಲ್‌) ಥುಂಬಿ ಏವಿಯೇಷನ್‌ ಪ್ರೈ.ಲಿ., ಸಹಯೋಗದಲ್ಲಿ ಈ ಸೇವೆಯನ್ನು ಪರಿಚಯಿಸಿದೆ. ಸೋಮವಾರ ಕೆಂಪೇಗೌಡ ಅಂರಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿ ನಡುವೆ ಹೆಲಿಕಾಪ್ಟರ್‌ ಹಾರಾಟ ನಡೆಸಿತು. 

ಮೊದಲ ದಿನವೇ ವಿಮಾನ ನಿಲ್ದಾಣ-ಎಲೆಕ್ಟ್ರಾನಿಕ್‌ ಸಿಟಿ ನಡುವೆ ಒಂಬತ್ತು ಬಾರಿ ಹೆಲಿಕಾಪ್ಟರ್‌ ಹಾರಾಟ ನಡೆಸಿದ್ದು, ಒಂಬತ್ತು ಪ್ರಯಾಣಿಕರು ಹೆಲಿ ಟ್ಯಾಕ್ಸಿ ಬಳಸಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಸೇವೆ ಲಭ್ಯವಾಗಲಿದೆ ಎಂದು ಥುಂಬಿ ಏವಿಯೇಷನ್‌ ಪ್ರೈ.ಲಿ., ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್‌ ಕೆಎನ್‌ಜಿ ನಾಯರ್‌ “ಉದಯವಾಣಿ’ಗೆ ತಿಳಿಸಿದರು. 

ಸಾಮಾನ್ಯವಾಗಿ ರಸ್ತೆ ಮೂಲಕ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಎರಡೂವರೆಯಿಂದ ಮೂರು ತಾಸು ಹಿಡಿಯುತ್ತದೆ. ಆದರೆ, ಹೆಲಿಟ್ಯಾಕ್ಸಿಯಲ್ಲಿ ಕೇವಲ 15 ನಿಮಿಷದಲ್ಲಿ ತಲುಪಬಹುದು. ಪ್ರಯಾಣ ದರ 3,500 ರೂ. ನಿಗದಿಪಡಿಸಲಾಗಿದೆ. ಟೂರಿಸ್ಟ್‌ ಟ್ಯಾಕ್ಸಿಗೆ 2ರಿಂದ 2,500 ರೂ. ಆಗಲಿದ್ದು, ಐಷಾರಾಮಿ ಕಾರುಗಳಲ್ಲಿ ಇಷ್ಟೇ ದೂರ ಕ್ರಮಿಸಲು 10 ಸಾವಿರ ರೂ.ಗಳಿಗೂ ಹೆಚ್ಚು ಬಾಡಿಗೆ ಆಗುತ್ತದೆ. ಈ ನಿಟ್ಟಿನಲ್ಲಿ ಹೋಲಿಸಿದರೆ, ಹೆಲಿಟ್ಯಾಕ್ಸಿ ಪ್ರಯಾಣಿಕರಿಗೆ ಅನುಕೂಲಕರವಾಗಿದೆ ಎಂದು ನಾಯರ್‌ ಹೇಳುತ್ತಾರೆ. 

ಎಲೆಕ್ಟ್ರಾನಿಕ್‌ ಸಿಟಿ ಐಟಿ-ಬಿಟಿ ಹಬ್‌ ಆಗಿದ್ದು, ವಿಮಾನ ನಿಲ್ದಾಣದಿಂದಲೂ ಸಾಕಷ್ಟು ದೂರ ಇದೆ. ಅಲ್ಲಿಗೆ ದೇಶ-ವಿದೇಶಗಳಿಂದ ಗಣ್ಯರು ಭೇಟಿ ನೀಡುತ್ತಾರೆ. ಅವರ ಅನುಕೂಲಕ್ಕಾಗಿ ಈ ಸೇವೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ವೈಟ್‌ಫೀಲ್ಡ್‌ ಸೇರಿದಂತೆ ನಗರದ ಇತರ ಕಡೆಗಳಿಗೂ ವಿಸ್ತರಿಸುವ ಉದ್ದೇಶ ಇದೆ ಎಂದು ತಿಳಿಸಿದರು. 

Advertisement

ಹೆಲಿಕಾಪ್ಟರ್‌ ಟ್ಯಾಕ್ಸಿ ಸೇವೆ ಜತೆಗೆ ಇದರಿಂದ ವೈದ್ಯಕೀಯ ಸೇವೆ, ಸಾರ್ವಜನಿಕ ಸುರಕ್ಷತೆ ಸೇರಿದಂತೆ ಮತ್ತಿತರ ಸೇವೆಗಳಿಗೂ ಅವಕಾಶ ಇದೆ. ಮುಂದಿನ ದಿನಗಳಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೂ ಬಳಕೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ಸಂಸ್ಥೆ ಚಿಂತನೆ ನಡೆಸಬೇಕು. ಅಲ್ಲದೆ, ಈ ಸೇವೆ ಕೇವಲ ಪ್ರತಿಷ್ಠಿತ ಜನರಿಗೆ ಸೀಮಿತವಾಗಬಾರದು. ಸಾಮಾನ್ಯರಿಗೂ ತಲುಪುವಂತಾಗಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ನಗರದಲ್ಲಿ 90 ಹೆಲಿಪ್ಯಾಡ್‌: ನಗರದಲ್ಲಿ 90 ಬಹುಮಹಡಿ ಕಟ್ಟಡಗಳ ಮೇಲ್ಛಾವಣಿಯಲ್ಲಿ ಹೆಲಿಪ್ಯಾಡ್‌ಗಳಿವೆ. ಇವುಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ಇದನ್ನು ಈಗ ಆರಂಭಿಸುತ್ತಿರುವ ಹೆಲಿಕಾಪ್ಟರ್‌ ಟ್ಯಾಕ್ಸಿ ಸೇವೆಗೆ ಬಳಸಿಕೊಳ್ಳಲು ಅವಕಾಶ ಇದೆ. ಇದಕ್ಕೆ ಪೂರಕವಾಗಿ ಬಿಬಿಎಂಪಿ ಕೂಡ ಗಣ್ಯರು ಮತ್ತು ಏರ್‌ ಆಂಬ್ಯುಲನ್ಸ್‌ಗಾಗಿ ಎಂಟು ವಲಯಗಳ ವ್ಯಾಪ್ತಿಯಲ್ಲಿ ತಲಾ ಒಂದು ಹೆಲಿಪ್ಯಾಡ್‌ ನಿರ್ಮಿಸಲು ಮುಂದಾಗಿದ್ದು, ಈ ಸಂಬಂಧ ಪಾಲಿಕೆ ಬಜೆಟ್‌ನಲ್ಲಿ 5 ಕೋಟಿ ರೂ. ಮೀಸಲಿಟ್ಟಿದೆ.

6 ಆಸನಗಳ (2 ಪೈಲಟ್‌ ಸೇರಿ) ಸಾಮರ್ಥ್ಯ ಇರುವ “ಬೆಲ್‌-407′ ಹೆಲಿಕಾಪ್ಟರ್‌ನಿಂದ ಸೇವೆ ಆರಂಭಗೊಂಡಿದೆ. ನಿತ್ಯ ಕೆಐಎಎಲ್‌ನಿಂದ 60 ಸಾವಿರ ಜನ ಪ್ರಯಾಣಿಸುತ್ತಾರೆ. ಈ ಪೈಕಿ ಕನಿಷ್ಠ 60ರಿಂದ 80 ಜನ ಹೆಲಿಟ್ಯಾಕ್ಸಿ ಬಳಸುವ ನಿರೀಕ್ಷೆ ಇದೆ.
-ಕೆ.ಎನ್‌.ಜಿ.ನಾಯರ್‌, ಥುಂಬಿ ಏವಿಯೇಷನ್‌ ಎಂಡಿ

ನಾನು 15 ದಿನಗಳಲ್ಲಿ ಮೂರು ಬಾರಿ ಕಾರ್ಯನಿಮಿತ್ತ ವಿಮಾನದಲ್ಲಿ ದೆಹಲಿಗೆ ತೆರಳುತ್ತೇನೆ. ನನ್ನ ಮನೆ ಇರುವುದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ. ವಿಮಾನದಲ್ಲಿ ದೆಹಲಿಗೆ ತಲುಪಲು ಎರಡೂವರೆ ತಾಸು ಬೇಕು. ಆದರೆ, ಮನೆಯಿಂದ ವಿಮಾನ ನಿಲ್ದಾಣಕ್ಕೆ ಎರಡೂವರೆ ತಾಸು ಹಿಡಿಯುತ್ತಿತ್ತು. ಈಗ ಕೇವಲ 13 ನಿಮಿಷದಲ್ಲಿ ಎಲೆಕ್ಟ್ರಾನಿಕ್‌ ಸಿಟಿಯಿಂದ ವಿಮಾನ ನಿಲ್ದಾಣ ತಲುಪಬಹುದು.
-ಸುರೇಶ್‌ಬಾಬು, ವಿಜ್ಞಾನಿ

ನಾನೊಬ್ಬ ಸ್ಟಾರ್ಟ್‌ಅಪ್‌ ಮಾಲಿಕನಾಗಿರುವುದರಿಂದ ವಾರದಲ್ಲಿ ಕನಿಷ್ಠ ಎರಡು ಬಾರಿ ದೇಶ-ವಿದೇಶಗಳಿಗೆ ಹೋಗಬೇಕಾಗುತ್ತದೆ. ಆದರೆ, ಎಲೆಕ್ಟ್ರಾನಿಕ್‌ಸಿಟಿಯಿಂದ ವಿಮಾನ ನಿಲ್ದಾಣ ತಲುಪುವುದೇ ಸವಾಲಾಗಿತ್ತು. ಆದರೆ, ಸೋಮವಾರ ಹೆಲಿಟ್ಯಾಕ್ಸಿಯಲ್ಲಿ ಕೇವಲ 13-15 ನಿಮಿಷದಲ್ಲಿ ಯಾವುದೇ ಸಂಚಾರದಟ್ಟಣೆ ಕಿರಿಕಿರಿ ಇಲ್ಲದೆ ತಲುಪಿದೆ. ರಸ್ತೆ ಮೂಲಕ ಬಂದಾಗ ಸುಸ್ತಾಗುತ್ತಿತ್ತು. ಆದರೆ, ಈ ಬಾರಿ ಆ ಸಮಸ್ಯೆ ಆಗಲಿಲ್ಲ.
-ಅಬ್ದುಲ್‌ ಹಾಯಿದ್‌, ಸ್ಟಾರ್ಟ್‌ಅಪ್‌ ಸಂಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next