ಬೆಂಗಳೂರು: “ಮಹತ್ವಾಕಾಂಕ್ಷಿ ಆತ್ಮನಿರ್ಭರ’ದತ್ತ ಭಾರತ ಮತ್ತೊಂದು ಹೆಜ್ಜೆಗೆ ಸಾಕ್ಷಿಯಾಗಲು ಕ್ಷಣಗಣನೆ ಆರಂಭವಾಗಿದ್ದು, ಈ ಮೈಲುಗಲ್ಲು ರಾಜ್ಯದ ತುಮಕೂರಿನ ಗುಬ್ಬಿಯಲ್ಲಿ ಸ್ಥಾಪನೆಯಾಗುತ್ತಿರುವುದು ವಿಶೇಷ ವಾಗಿದೆ.
ತುಮಕೂರಿನಲ್ಲಿ ಸುಮಾರು 615 ಎಕ್ರೆ ಪ್ರದೇಶದಲ್ಲಿ ತಲೆಯೆತ್ತಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ., (ಎಚ್‌ಎಎಲ್)ನ ದೇಶದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿ ಕಾರ್ಖಾನೆ ಸೋಮವಾರ (ಫೆ. 6) ರಾಷ್ಟ್ರಕ್ಕೆ ಸಮರ್ಪಣೆಗೊಳ್ಳಲಿದೆ. ಈ ಐತಿಹಾಸಿಕ ಕ್ಷಣಗಳಿಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಗಣ್ಯರು ಸಾಕ್ಷಿಯಾಗಲಿದ್ದಾರೆ.
ಗ್ರೀನ್‌ಫೀಲ್ಡ್ ಹೆಲಿಕಾಪ್ಟರ್ ನಿರ್ಮಾಣ ಕಾರ್ಖಾನೆ ಇದಾಗಿದ್ದು, ದೇಶೀಯವಾಗಿ ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಿರುವ ಹೆಲಿಕಾಪ್ಟರ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಹಲವು ವೈಶಿಷ್ಟéಗಳನ್ನು ಒಳಗೊಂಡ ಅತ್ಯಾಧುನಿಕ ಲಘು ಬಹುಪಯೋಗಿ ಹೆಲಿಕಾಪ್ಟರ್ (ಎಲ್‌ಯುಎಚ್)ಗಳ ನಿರ್ಮಿಸಲು ಉದ್ದೇಶಿಸಿದ್ದು, ವಾರ್ಷಿಕ 30 ಹೆಲಿಕಾಪ್ಟರ್‌ಗಳು ಇಲ್ಲಿ ತಯಾರಾಗಿ ಹಾರಾಟ ನಡೆಸಲಿವೆ.
ಉದ್ದೇಶಿತ ಕಾರ್ಖಾನೆಯು ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್)ಗಳು, ಭಾರತೀಯ ಬಹುಉದ್ದೇಶಿತ ಹೆಲಿಕಾಪ್ಟರ್ (ಐಎಂಆರ್‌ಎಚ್)ಗಳನ್ನು ನಿರ್ಮಿಸುವ ಸಾಮರ್ಥ್ಯ ಕೂಡ ಹೊಂದಿದೆ. ಇದು ಎಲ್‌ಸಿಎಚ್, ಎಲ್‌ಯುಎಚ್, ನಾಗರಿಕ ಸುಧಾರಿತ ಲಘು ಹೆಲಿಕಾಪ್ಟರ್‌ಗಳ ನಿರ್ವಹಣೆ, ರಿಪೇರಿ, ಕೂಲಂಕಷ ಪರೀಕ್ಷೆ ಮತ್ತಿತರ ಸೌಲಭ್ಯಗಳನ್ನೂ ಒಳಗೊಂಡಿದ್ದು, ಎಲ್‌ಯುಎಚ್‌ಗಳ ರಫ್ತು ಸಾಮರ್ಥ್ಯ ಕೂಡ ಇದು ಹೊಂದಿದೆ.
ಎಚ್‌ಎಎಲ್ ಈ ಕಾರ್ಖಾನೆ ಮೂಲಕ ಮುಂಬರುವ ದಿನಗಳಲ್ಲಿ ಒಂದು ಸಾವಿರ ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಮೂಲಕ ಮುಂದಿನ 20 ವರ್ಷಗಳಲ್ಲಿ ನಾಲ್ಕು ಕೋಟಿ ಮೊತ್ತದ ವಹಿವಾಟು ನಡೆಸುವ ಗುರಿ ಹೊಂದಿದೆ. ಇದರಿಂದ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗುವುದರ ಜತೆಗೆ ತುಮಕೂರು ಸುತ್ತಲಿನ ಪ್ರದೇಶ ಕೂಡ ಅಭಿವೃದ್ಧಿ ಹೊಂದಲಿದೆ. ಈ ಮಧ್ಯೆ ಎಚ್‌ಎಎಲ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಇದೆಲ್ಲದರಿಂದ ಆ ಭಾಗದ ಜನರ ಜೀವನ ಮಟ್ಟದಲ್ಲಿ ಸುಧಾರಣೆ ಆಗಲಿದೆ.
ಕಾರ್ಖಾನೆಯು ಹೆಲಿ-ರನ್‌ವೇ, ಫ್ಲೈಟ್ ಹ್ಯಾಂಗರ್, ಫೈನಲ್ ಅಸೆಂಬ್ಲಿ ಹ್ಯಾಂಗರ್, ಸ್ಟ್ರಕ್ಚರ್ ಅಸೆಂಬ್ಲಿ ಹ್ಯಾಂಗರ್, ಏರ್ ಟ್ರಾಫಿಕ್ ಕಂಟ್ರೋಲ್ ಸೇರಿ ಎಲ್ಲ ಸೌಲಭ್ಯಗಳಿಂದ ಸುಸಜ್ಜಿತವಾಗಿದೆ. ಈ ಬೆಳವಣಿಗೆಗಳಿಂದ ವೈಮಾನಿಕ ಕ್ಷೇತ್ರಕ್ಕೆ ಮತ್ತಷ್ಟು ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ರಕ್ಷಣ ಇಲಾಖೆ ತಿಳಿಸಿದೆ.
2016ರಲ್ಲಿ ಈ ಕಾರ್ಖಾನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಯಾವುದೇ ಉಪಕರಣಗಳನ್ನು ಆಮದು ಮಾಡಿಕೊಳ್ಳದೆ, ಸಂಪೂರ್ಣವಾಗಿ ಆತ್ಮನಿರ್ಭರ ಅಡಿ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ತಲೆ ಎತ್ತುತ್ತಿರುವುದು ವಿಶೇಷ.