ಅಂಕಾರಾ (ಟರ್ಕಿ): ಟೇಕ್ ಆಫ್ ಸಮಯದಲ್ಲಿಆಸ್ಪತ್ರೆ ಕಟ್ಟಡಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಹೆಲಿಕಾಪ್ಟರ್ ವೊಂದು ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಿರುವ ಘಟನೆ ನೈಋತ್ಯ ಟರ್ಕಿಯಲ್ಲಿ ಭಾನುವಾರ (ಡಿ.22 ರಂದು) ನಡೆದಿರುವುದು ವರದಿಯಾಗಿದೆ.
ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಮುಗ್ಲಾ ತರಬೇತಿ ಮತ್ತು ಸಂಶೋಧನಾ ಆಸ್ಪತ್ರೆಯಿಂದ ಟೇಕ್ ಆಫ್ ಆಗುತ್ತಿತ್ತು, ಇಬ್ಬರು ಪೈಲಟ್ಗಳು, ಒಬ್ಬ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹೆಲಿಕಾಪ್ಟರ್ನಲ್ಲಿದ್ದರು ಎನ್ನಲಾಗಿದೆ.
ಟೇಕ್-ಆಫ್ ಸಮಯದಲ್ಲಿ ಹೆಲಿಕಾಪ್ಟರ್ ಆಸ್ಪತ್ರೆಯ ನಾಲ್ಕನೇ ಮಹಡಿಗೆ ಢಿಕ್ಕಿ ಹೊಡೆದ ನಂತರ ನೆಲಕ್ಕೆ ಬಿದ್ದಿದೆ. ಪರಿಣಾಮ ಅದರಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿರುವುದಾಗಿ ವರದಿಯಾಗಿದೆ.
ಹೆಲಿಕಾಪ್ಟರ್ ಹಾರಾಟದ ವೇಳೆ ದಟ್ಟವಾದ ಮಂಜು ಇತ್ತು. ಈ ದಟ್ಟವಾದ ಮಂಜೇ ಘಟನೆಗೆ ಕಾರಣವಾಗಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.
ಸದ್ಯ ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಟರ್ಕಿಯ ನೈಋತ್ಯ ಇಸ್ಪಾರ್ಟಾ ಪ್ರಾಂತ್ಯದಲ್ಲಿ ಸೇನಾ ತರಬೇತಿ ಅಭ್ಯಾಸದ ವೇಳೆ ಎರಡು ಹೆಲಿಕಾಪ್ಟರ್ಗಳು ಢಿಕ್ಕಿ ಹೊಡೆದು ಆರು ಸೈನಿಕರು ಸಾವನ್ನಪ್ಪಿದ ಎರಡು ವಾರಗಳ ನಂತರ ಈ ಅಪಘಾತ ಸಂಭವಿಸಿದೆ.