ಕನ್ನಡದಲ್ಲಿ ಈಗ ಒಂದಷ್ಟು ಕಂಟೆಂಟ್ ಸಿನಿಮಾಗಳು ಬರುತ್ತಿವೆ. ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ಹೊಸದೇನನ್ನೋ ಪ್ರಯತ್ನಿಸುವ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಸದ್ಯ ಇಂತಹ ಪ್ರಯತ್ನದಲ್ಲಿರುವ ಸಿನಿಮಾ “ಹೆಜ್ಜಾರು’. ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಫ್ ಸಿನಿಮಾವಾಗಿ ಹೆಜ್ಜಾರು ಬಿಡುಗಡೆಯ ಹಂತಕ್ಕೆ ಬಂದಿದೆ. ಹರ್ಷಪ್ರಿಯ ಈ ಸಿನಿಮಾದ ನಿರ್ದೇಶಕರು.
ಪುಟ್ಟಗೌರಿ ಮದುವೆ, ಕಿನ್ನರಿ, ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಮಹಾನಾಯಕ ಅಂಬೇಡ್ಕರ್ ಹಾಗೂ ಹೆಬ್ಬುಲಿಯ ‘ದೇವರೆ ನೀನು ಇರೊ, ವಿಳಾಸವು ಬೇಕಾಗಿದೆ’ ಹೀಗೆ ಸಾಹಿತಿಯಾಗಿ, ಕಥೆಗಾರನಾಗಿ, ಸಂಭಾಷಣೆಕಾರನಾಗಿ ಹಾಗೂ ಹಲವಾರು ಹಿಟ್ ಧಾರಾವಾಹಿಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ಹರ್ಷಪ್ರಿಯ ಅವರು ಹೆಜ್ಜಾರು ಮೂಲಕ ಸಿನಿಮಾ ನಿರ್ದೇಶಕಕ್ಕೆ ಇಳಿದಿದ್ದಾರೆ. ಕಿರುತೆರೆಯಲ್ಲಿ ಹಲವಾರು ಹಿಟ್ ಧಾರಾವಾಹಿಗಳನ್ನು ನೀಡಿರುವ ಕೆ.ಎಸ್.ರಾಮ್‌ಜಿ ತಮ್ಮ ಗಗನ ಎಂಟರ್‌ಪ್ರೈಸಸ್ ಅಡಿಯಲ್ಲಿ “ಹೆಜ್ಜಾರು’ ನಿರ್ಮಾಣ ಮಾಡಿದ್ದಾರೆ.
ಭಗತ್ ಆಳ್ವ ಈ ಚಿತ್ರದ ನಾಯಕರು. ಶ್ವೇತಾ ಲಿಯೋನಿಲ್ಲಾ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮೊದಲ ಬಾರಿಗೆ ನವೀನ್ ಕೃಷ್ಣ ಅವರು ವಿಲನ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅರುಣಾ ಬಾಲರಾಜ್, ಮುನಿರಾಜ್, ವಿನೋದ್ ಭಾರತಿ ಒಳಗೊಂಡಂತೆ ಬಹುತೇಕ ರಂಗಭೂಮಿಯ ಹೊಸ ಪ್ರತಿಭೆಗಳು ಹೆಜ್ಜಾರಿನ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.
ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತದಲ್ಲಿ ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿಬಂದಿದ್ದ “ಏನೇ ಸಿಕ್ತು ಮಳ್ಳಿ ನಿಂಗೆ..ಎಂಬ ಪ್ಯಾಥೋ ಸಾಂಗ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಈಗ ಚಿತ್ರದ “ಇವನ್ಯಾರೋ…’ ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಮೊದಲ ಪ್ರೀತಿಯಲ್ಲಿ ಬಿದ್ದ ಕಾಲೇಜು ಹುಡುಗಿಯ ಭಾವನೆಗಳ ಕುರಿತಾದ ಹಾಡು ಇದಾಗಿದೆ.
ಚಿತ್ರಕ್ಕೆ ಅಮರ್ ಗೌಡ ಛಾಯಾಗ್ರಹಣವಿದೆ. ಮಂಗಳೂರು, ಉಪ್ಪಿನಂಗಡಿ, ಗುರುವಾಯನಕೆರೆ ಮುಂತಾದ ಕರಾವಳಿ ಪ್ರದೇಶಗಳಲ್ಲಿ ಹಾಗೂ ಮಲೆನಾಡಿನಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.