ಮಂಗಳೂರು: ನಗರದ ಜಿಲ್ಲಾ ನ್ಯಾಯಾಲಯದ ನಾಲ್ಕನೇ ಮಹಡಿಯಿಂದ 2ನೇ ಮಹಡಿಗೆ ಬಿದ್ದು, ಗಾಯಗೊಂಡು ಬಳಿಕ ಸಾವನ್ನಪ್ಪಿದ ಬಜಪೆ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೆಬಲ್ ಪ್ರವೀಣ್ ನ್ಯಾಯಾಲಯದಲ್ಲಿ ಆತ ಬೆಂಗಾವಲು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಕೆಳಗೆ ಬೀಳುತ್ತಿರುವ ದೃಶ್ಯಗಳು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡಲು ಆರಂಭಿಸಿವೆ.
ಪೊಕೊÕ ಕಾಯ್ದೆಯಡಿ ಬಂಧಿತನಾಗಿದ್ದ ಪ್ರವೀಣನನ್ನು ಕೋರ್ಟ್‌ಗೆ ಹಾಜರುಪಡಿಸಲು ಐದು ಮಂದಿ ಪೊಲೀಸರು ಕರೆದೊಯ್ಯುತ್ತಿದ್ದಾಗ ಘಟನೆ ಸಂಭವಿಸಿತ್ತು.
ಕೋರ್ಟ್‌ನಲ್ಲಿ ಅಳವಡಿಸಿರುವ 4ನೇ ಮಹಡಿಯ 1 ನೇ ಸಿಸಿ ಕೆಮರಾದಲ್ಲಿ ಆರೋಪಿ ಮಹಡಿಯಿಂದ ಹಾರುವ ದೃಶ್ಯ ಸೆರೆಯಾಗಿದೆ. ಕೋರ್ಟ್‌ನ 4ನೇ ಮಹಡಿಯಲ್ಲಿ ಲಿಫ್ಟ್‌ನಿಂದ 5 ಮಂದಿ ಪೊಲೀಸರ ಜತೆ ಆರೋಪಿ ಹೊರಗೆ ಬರುತ್ತಿರುವ ದೃಶ್ಯ ಕಾಣಿಸುತ್ತಿದೆ. ನಾಲ್ವರು ಪೊಲೀಸರು ಆರೋಪಿಯ ಎದುರಿನಿಂದ ಹಾಗೂ ಓರ್ವ ಪೊಲೀಸ್ ಹಿಂಬದಿ ಇದ್ದಾರೆ. ಲಿಫ್ಟ್‌ನಿಂದ ಹೊರಗೆ ಬಂದು 3ನೇ ಮಹಡಿಗೆ ಇಳಿಯಲು ಎಡಗಡೆ ಇರುವ ಮೆಟ್ಟಲಿನ ಜಾಗದಲ್ಲಿ ಕೆಳಗೆ ಧುಮುಕಿದ್ದ.
ಈ ಸಂದರ್ಭದಲ್ಲಿ ಆರೋಪಿಯ ಹಿಂದೆ ಇದ್ದ ಪೊಲೀಸ್ ಹಿಡಿಯುವ ಪ್ರಯತ್ನ ಮಾಡಿದರೂ ಕೂದಲೆಳೆಯ ಅಂತರದಲ್ಲಿ ತಪ್ಪಿಹೋಗಿದೆ. ಉಳಿದ ಇಬ್ಬರು ಪೊಲೀಸರು ಓಡಿ ಬರುವಷ್ಟರಲ್ಲಿ ಆರೋಪಿ ಕೆಳಗೆ ಧುಮುಕಿ ಆಗಿತ್ತು. ಕೂಡಲೇ ಗಾಬರಿಗೊಂಡ ಪೊಲೀಸರು ನೆಲಮಹಡಿಗೆ ಓಡಿ ಕೊಂಡು ಬಂದಾಗ ಅಲ್ಲಿದ್ದವರು ಮಹಡಿಯಿಂದಲೇ ಕೆಳಗೆ ನೋಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರವಿವಾರ ಈ ದೃಶ್ಯ ವಾಹಿನಿಯಲ್ಲಿ ಪ್ರಸಾರವಾಗಿದ್ದಲ್ಲದೆ ಮೊಬೈಲ್‌ನಿಂದ ಮೊಬೈಲ್‌ಗೆ ವೈರಲ್ ಆಗಿ ಹರಿದಾಡಿದೆ. ಸಿಸಿಟಿವಿ ದೃಶ್ಯವನ್ನು ನೋಡಿದಾಗ ಆರೋಪಿ ಪರಾರಿಗೆ ಪೂರ್ವದಲ್ಲೇ ನಿರ್ಧರಿಸಿದಂತೆ ಭಾಸವಾಗುತ್ತಿದೆ.
ಅಧಿಕಾರಿಗಳು ಬುದ್ಧಿವಾದ ಹೇಳಿದ್ದರು
ಮೃತ ಪ್ರವೀಣ್ 18 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತ ಸ್ವಲ್ಪ ಮುಂಗೋಪಿಯಾಗಿದ್ದು, ಸಹ ಸಿಬಂದಿ ಜತೆ ಹಲವು ಬಾರಿ ವಾಗ್ವಾದ ನಡೆಸಿದ್ದನು. ಈ ಬಗ್ಗೆ ಆತನಿಗೆ ಹಿರಿಯ ಅಧಿಕಾರಿಗಳು ಬುದ್ಧಿವಾದ ಹೇಳಿದ್ದರು. ಸಹ ಸಿಬಂದಿ ಜತೆ ಸೀಮಿತವಾಗಿ ಮಾತನಾಡುತ್ತಿದ್ದು, ಇಲಾಖೆಯೊಳಗಿನ ವಿಷಯವಾದ್ದರಿಂದ ಅನೇಕ ಸಂದರ್ಭಗಳಲ್ಲಿ ಎಲ್ಲರೂ ಹೊಂದಾಣಿಕೆಯಿಂದ ಹೋಗುತ್ತಿದ್ದರು. ಶನಿವಾರ ನಡೆದ ಘಟನೆ ಆತನ ಜತೆ ಕೆಲಸ ಮಾಡುತ್ತಿದ್ದ ಸಿಬಂದಿಗೆ ಆಘಾತ ಉಂಟು ಮಾಡಿದೆ.
ಕೇಸು ದಾಖಲು, ಶವ ಹಸ್ತಾಂತರ: ಪ್ರವೀಣ್ ಪರಾರಿಯಾಗಲು ಯತ್ನಿಸಿದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿವಾರ ಆತನ ಶವದ ಮಹಜರು ನಡೆಸಿ, ಮಧ್ಯಾಹ್ನ 1 ಗಂಟೆಗೆ ಮೃತದೇಹ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಬಜಪೆ ಸುಂಕದಕಟ್ಟೆಯಲ್ಲಿ ವಾಸಿಸುವ ಮಹಿಳೆ ಮತ್ತು ಆಕೆಯ ಪುತ್ರಿ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಈತನನ್ನು ಬಂಧಿಸಿ ಕೋರ್ಟ್‌ಗೆ ಕರೆದೊಯ್ಯಲಾಗುತ್ತಿತ್ತು.