Advertisement

ಅಬ್ಬರಿಸಿ ಬೊಬ್ಬಿರಿಯುವ ರಿಯಲ್‌ ಪೊಲೀಸ್‌

11:26 AM Mar 12, 2017 | Team Udayavani |

“ನಿನ್ನೆವರೆಗೂ ಹೇಗಿದ್ರೋ ಗೊತ್ತಿಲ್ಲ. ಆದರೆ, ಈ ಕ್ಷಣದಿಂದ ಕರೆಕ್ಟ್ ಆಗಿರ್ಬೇಕು…’ ಹೊಸದಾಗಿ ಬಂದ ಆ ಪೊಲೀಸ್‌ ಅಧಿಕಾರಿ ಹೀಗೆ ಖಡಕ್‌ ಡೈಲಾಗ್‌ ಹೇಳುವ ಮೂಲಕ ಸಿನಿಮಾಗೆ ಚಾಲನೆ ಸಿಗುತ್ತೆ. ಆರಂಭದ ಆ ಡೈಲಾಗ್‌ಗಳನ್ನು ಕೇಳಿಸಿಕೊಂಡರೆ, ಮುಂದೆ ಕಾಣೋದೆಲ್ಲಾ “ದಂಡಂ ದಶಗುಣಂ’ ಅಂದುಕೊಳ್ಳೋದು ಗ್ಯಾರಂಟಿ. ಆದರೆ, ಅಲ್ಲಿ ಅಂತಹ ಯಾವ ಲಕ್ಷಣಗಳೂ ಕಾಣಬರಲ್ಲ. “ರಿಯಲ್‌ ಪೊಲೀಸ್‌’ ಇಂಥದ್ದಕ್ಕೇ ಸೀಮಿತವಾದ ಸಿನಿಮಾ ಅಂತ ಹೇಳುವುದು ಕಷ್ಟ. ಇಲ್ಲಿ ಹಲವು ಕಥೆಗಳ ಸಮ್ಮಿಲನವಾಗಿದೆ!

Advertisement

ಹಾಗಾಗಿ, “ರಿಯಲ್‌ ಪೊಲೀಸ್‌’ನ ಖದರ್‌, ರೀಲ್‌ನಲ್ಲಿ ಅಷ್ಟಾಗಿ ಮೂಡಿಲ್ಲ. ಒಂದು ಸಮಾಧಾನದ ವಿಷವೆಂದರೆ, ಇಲ್ಲಿ ಸಾಯಿಕುಮಾರ್‌ ಅದೇ ಗತ್ತಿನಲ್ಲಿ ಡೈಲಾಗ್‌ಗಳನ್ನು ಹರಿಬಿಟ್ಟಿರೋದು. ಅದನ್ನು ಹೊರತುಪಡಿಸಿದರೆ, ಇದೊಂದು “ಕೊಲೆ’ಯ ಸುತ್ತವೇ ಸುತ್ತಿರುವ ಸಿನಿಮಾ. ಹಾಗಾಗಿ, ಇಲ್ಲಿ ಪೊಲೀಸ್‌ ಅಧಿಕಾರಿಯ ಅಬ್ಬರವಾಗಲಿ, ವ್ಯವಸ್ಥೆಗೆ ಹಿಡಿಯುವ ಕನ್ನಡಿಯಾಗಲಿ ಕಾಣಸಿಗಲ್ಲ. ಆರಂಭದಲ್ಲಿ ಮರಳು ದಂಧೆಕೋರರ ಮೇಲೊಂದು ದೃಶ್ಯ ಕಾಣಿಸಿಕೊಳ್ಳುತ್ತೆಯಾದರೂ, ಅದಕ್ಕೆ ಕಾರಣಕರ್ತರ್ಯಾರು,

ಮುಂದೇನಾಗುತ್ತೆ ಎಂಬುದಕ್ಕೆ ಉತ್ತರವಿಲ್ಲ. ಪೊಲೀಸ್‌ ಅಧಿಕಾರಿ ಭ್ರಷ್ಟರಾಜಕಾರಣಿಗಳ ವಿರುದ್ಧ ಹೋರಾಡುತ್ತಾನೆ ಎಂಬ ಸಣ್ಣ ಅನುಮಾನಕ್ಕೆ ಕಾರಣವಾಗುವ ದೃಶ್ಯ ಅಲ್ಲಿಗೇ ಮಾಯವಾಗುತ್ತೆ. ಇನ್ನೊಂದೆಡೆ, ಜಿಹಾದ್‌ ಚಿತ್ರಣವೂ ಕಾಣಸಿಗುತ್ತೆ. ಮುಂದೆ ಇದೇ ಸಿನಿಮಾದ ಪ್ಲಸ್‌ ಇರಬಹುದು ಅಂದುಕೊಂಡರೆ, ಅದಕ್ಕೂ ಅಲ್ಲಿಗೇ ಅಂತ್ಯ ಹಾಡಲಾಗಿದೆ. ಹೀಗೆ ಸಣ್ಣ ಸಣ್ಣ ಎಪಿಸೋಡ್‌ಗಳನ್ನೆಲ್ಲಾ ಒಟ್ಟಿಗೆ ಸೇರಿಸಿ “ರಿಯಲ್‌ ಪೊಲೀಸ್‌’ನನ್ನು ಕಣ್ಮುಂದೆ ತಂದಿದ್ದಾರೆ ನಿರ್ದೇಶಕರು.  

ಒಂದಷ್ಟು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಅವಕಾಶವಿತ್ತು. ಅದನ್ನು ಮುಂದುವರೆಸದೆಯೇ, ಅರ್ಧಕ್ಕರ್ಧ ವಿಷಯ ಪ್ರಸ್ತಾಪಿಸಿ, ಅದನ್ನು ಪಕ್ಕಕ್ಕಿಟ್ಟು, ಇನ್ಯಾವುದೋ ವಿಷಯ ಹಿಡಿದು ಹೋಗಿರುವುದೇ ನೋಡುಗ “ತಾಳ್ಮೆ’ ಕಳದುಕೊಳ್ಳುವುದಕ್ಕೆ ಕಾರಣ. ಹೀಗಾಗಿ ರಿಯಲ್‌ ಪೊಲೀಸ್‌ ತನ್ನ ಖದರ್‌ ತೋರಿಸುವುದಕ್ಕೂ ಅಲ್ಲಿ ಸರಿಯಾದ ಜಾಗ ಸಿಕ್ಕಿಲ್ಲ. ಆ ರಿಯಲ್‌ ಪೊಲೀಸ್‌ನ ಓಡಾಟ, ಹೋರಾಟಗಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದು ಕಷ್ಟ.

ಒಂದು ಚಿತ್ರಕ್ಕೆ ಹಾಸ್ಯ ಬೇಕು. ಹಾಗಂತ, ಆ ಹಾಸ್ಯ ಅಪಹಾಸ್ಯವಾಗಬಾರದು. ಇಲ್ಲಿ ಸಾಧು ಕೋಕಿಲ ಟ್ರಾಕ್‌ನಲ್ಲೊಂದು ಹಾಸ್ಯವಿದೆ. ಅದನ್ನು ನೋಡಿದವರಿಗೆ ನಗು ಬದಲು ಕಿರಿಕಿರಿಯಾಗುವೇ ಹೆಚ್ಚು. ಆದರೆ, ಆ ದೃಶ್ಯದಲ್ಲೊಂದು ಸಣ್ಣ ಸಂದೇಶವಿದೆ ಎಂಬುದಷ್ಟೇ ಸಮಾಧಾನ. ಇನ್ನು, ಏನಾದರೂ ಸರಿ, ಹೇಳಿಬಿಡಬೇಕು ಎಂಬ ಧಾವಂತದಲ್ಲೇ ಚಿತ್ರ ಮಾಡಿರುವಂತಿದೆ. ಹಾಗಾಗಿ, ಸಿನಿಮಾದಲ್ಲಿ ಸಾಕಷ್ಟು ತಪ್ಪುಗಳು ಕಾಣಸಿಗುತ್ತವೆ.

Advertisement

ಆದರೆ, ಒಂದು ಕೊಲೆಯ ಸುತ್ತ ನಡೆಯುವ ತನಿಖೆ ಮಾತ್ರ ತಕ್ಕಮಟ್ಟಿಗೆ ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತೆ. ಅದು ಬಿಟ್ಟರೆ, ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಂಶಗಳು ಪ್ರಭಾವ ಬೀರುವುದಿಲ್ಲ. ಭರತ್‌ (ಸಾಯಿಕುಮಾರ್‌) ಒಬ್ಬ ಪ್ರಾಮಾಣಿಕ ಪೊಲೀಸ್‌ ಅಧಿಕಾರಿ. ಲಂಚತನದಲ್ಲೇ ಮುಳುಗಿರುವ ಪೊಲೀಸ್‌ ಠಾಣೆಗೆ ಬರುವ ಭರತ್‌, ಆ ವ್ಯಾಪ್ತಿಯಲ್ಲಿ ಬರುವ ಮರಳು ದಂಧೆಗೆ ಕಡಿವಾಣ ಹಾಕುತ್ತಾನೆ. ರಾಜಕಾರಣಿಗಳನ್ನು ಬಗ್ಗು ಬಡಿಯುತ್ತಾನೆ.

ಇನ್ನೆಲ್ಲೋ ಒಬ್ಬ ತನ್ನ ಮಗನನ್ನು ಜಿಹಾದ್‌ಗೆ ಸೇರಿಸಲು ಮಂದಾಗುವಾಗ, ಅಲ್ಲೂ ಅಲ್ಲಾನ ಕುರಿತು ಒಂದಷ್ಟು ಉದ್ದುದ್ದ ಡೈಲಾಗ್‌ ಹರಿಬಿಟ್ಟು, ಅವನ ಕೆಟ್ಟ ಉದ್ದೇಶದಿಂದ ಹೊರಬರಲು ಕಾರಣವಾಗುತ್ತಾನೆ. ತನ್ನ ಹೆಂಡತಿಯ ಆಸೆ ಪೂರೈಸಲು, ತಪ್ಪು ದಾರಿ ಹಿಡಿಯುವ ಪೊಲೀಸ್‌ ಪೇದೆಯೊಬ್ಬನಿಗೆ ಪಾಠ ಕಲಿಸುತ್ತಾನೆ. ಆಮೇಲೆ ಒಂದು ಕೊಲೆ ನಡೆಯುತ್ತೆ. ಆ ಕೊಲೆಯ ಸುತ್ತ ತನಿಖೆ ನಡೆಯುತ್ತೆ. ಕೊಲೆ ಮಾಡಿದ್ದು ಯಾರು ಅನ್ನುವುದನ್ನೇ ಸ್ವಲ್ಪ ಸ್ವಾರಸ್ಯಕರವಾಗಿ ತೋರಿಸಲಾಗುತ್ತದೆ.

ಹಾಗಾದರೆ, ಆ ಕೊಲೆ ಮಾಡಿದ್ದು ಯಾರು? ಈ ಕುತೂಹಲವಿದ್ದರೆ, “ರಿಯಲ್‌ ಪೊಲೀಸ್‌’ ನೋಡುವ ನಿರ್ಧಾರ ನೋಡುಗರದ್ದು. ಸಾಯಿಕುಮಾರ್‌ ಎಂದಿನಂತೆಯೇ ಇಲ್ಲಿ ಅಬ್ಬರಿಸಿದ್ದಾರೆ. ಆದರೆ, ಹಿಂದೆ ಇದ್ದಂತಹ ಪವರ್‌ಫ‌ುಲ್‌ ಖದರ್‌, ಲುಕ್ಕು, ಕಿಕ್ಕು ಮಾಯವಾಗಿದೆ. ಸ್ವಲ್ಪ ದಪ್ಪ ಇರುವ ಕಾರಣ, ಅವರನ್ನು ಆ ಪಾತ್ರದಲ್ಲಿ ಪರಿಪೂರ್ಣವಾಗಿ ಒಪ್ಪಿಕೊಳ್ಳುವುದು ಕಷ್ಟ. ಆದರೆ, ಇರುವ ಸೀಮಿತ ದೃಶ್ಯಗಳಲ್ಲಿ ಪಾತ್ರದಲ್ಲಿ ಜೀವಿಸಿದ್ದಾರೆ.

ಮಂಜುನಾಥ್‌ ಹೆಗ್ಡೆ ಇಲ್ಲಿ ಎಂದಿಗಿಂತ ಇಷ್ಟವಾಗುತ್ತಾರೆ. ಸಾಧು ಕೋಕಿಲ ಕಾಮಿಡಿ ಅವರಿಗೇ ಚೆಂದ! ದಿಶಾ ಪೂವಯ್ಯ ಹೇಳಿದ್ದನ್ನಷ್ಟೇ ಮಾಡಿದಂತಿದೆ. ರಾಜ್‌ಗೊàಪಾಲ್‌, ಆನಂದ್‌, ಗಣೇಶ್‌ ರಾವ್‌ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಬಲರಾಮ್‌ ಸಂಗೀತದಲ್ಲಿ ಯಾವ ಹಾಡೂ ನೆನಪಲ್ಲುಳಿಯೋದಿಲ್ಲ. ಜೆ.ಜಿ. ಕೃಷ್ಣ ಅವರ ಛಾಯಾಗ್ರಹಣ ಪೂರಕವಾಗಿದೆ.

ಚಿತ್ರ: ರಿಯಲ್‌ ಪೊಲೀಸ್‌
ನಿರ್ದೇಶನ: ಸಾಯಿಪ್ರಕಾಶ್‌
ನಿರ್ಮಾಣ: ಸಾಧಿಕ್‌ವುಲ್ಲ ಆಜಾದ್‌
ತಾರಾಗಣ: ಸಾಯಿಕುಮಾರ್‌, ದಿಶಾಪೂವಯ್ಯ, ಸಾಧುಕೋಕಿಲ, ಮಂಜುನಾಥ ಹೆಗ್ಡೆ,ಅಕ್ಷತಾ, ಗಣೇಶ್‌ರಾವ್‌ ಇತರರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next