Advertisement
ಹೆಸರಘಟ್ಟ ಕೆರೆಬೆಳ್ಳಂಬೆಳಗ್ಗೆದ್ದು ಹೆಸರಘಟ್ಟಕ್ಕೆ ಕಾಲಿಟ್ಟು ನೋಡಿ. ಎಲ್ಲಿ ನೋಡಿದರಲ್ಲಿ ಕಣ್ಣು ಕುಕ್ಕುವಂತಿರುವ ಹಸಿರು ನೆಲ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಹುಲ್ಲುಗಾವಲಿನಲ್ಲೆಲ್ಲೋ ಒಂದು ಕಡೆ ಅಡಗಿಕೊಂಡಿರುವ ಯಾವುದೋ ಒಂದು ಅಪರೂಪದ ಹಕ್ಕಿ ನಿಮ್ಮನ್ನು ನೋಡಿ ಕೂಗಿ ಕೂಗಿ ಸ್ವಾಗತಿಸುತ್ತದೆ. ತಂಪಾದ ಗಾಳಿ ನಿಮ್ಮನ್ನು ತಾಕಿ ಹೋಗುತ್ತಿದ್ದರೆ ಯಾವುದೋ ಒಂದು ಮಧುರವಾದ ಲೋಕಕ್ಕೆ ಕಾಲಿಟ್ಟಂತೆ ನಿಮಗನ್ನಿಸುತ್ತದೆ. ಹೆಸರಘಟ್ಟ ಇವತ್ತಿಗೂ ಅಪರೂಪದ ಹಕ್ಕಿಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿರುವ ತಾಣ. ಇಲ್ಲಿಗೆ ಹಕ್ಕಿಗಳ ಫೋಟೋ ತೆಗೆಯಲೆಂದೇ ಜನ ಬರುತ್ತಾರೆ. ಸೈಕ್ಲಿಂಗ್ ಅಂತಲೂ ಜನ ಈ ತಾಣಕ್ಕೆ ಆಗಮಿಸುತ್ತಾರೆ. ಕೆರೆಯ ಪಕ್ಕ ಕೂತು ಸ್ವಲ್ಪ ಹೊತ್ತು ಕಳೆಯುತ್ತೇನೆ ಎಂದು ಆಸೆ ಹೊತ್ತು ಬರುವವರ ಸಂಖ್ಯೆಯೂ ಜಾಸ್ತಿಯೇ ಇದೆ. ಈಗೀಗ ಮನುಷ್ಯನ ದುರಾಸೆಯಿಂದ ಇಂಥಾ ಮಧುರ ತಾಣ ಆಗಾಗ ಘಾಸಿಗೊಳ್ಳುತ್ತಲೇ ಇದೆ. ಅದನ್ನು ಹೊರತುಪಡಿಸಿದರೆ ಪ್ರಕೃತಿ ಪ್ರೇಮಿಗಳಿಗೆ ಭೇಟಿ ನೀಡಲು ಒಂದು ಅದ್ಭುತ ಜಾಗ ಇದು. ಕೆರೆಯಲ್ಲಿ ಈಗ ಸ್ವಲ್ಪ ನೀರು ಕಮ್ಮಿ ಇರಬಹುದು. ಅಡ್ಜಸ್ಟ್ ಮಾಡಿಕೊಳ್ಳಬೇಕಾಗುತ್ತದೆ.
ಪಕ್ಷಿ ಪ್ರೇಮಿಗಳಿಗೆ ಈ ಕೆರೆ ಸ್ವರ್ಗ ಇದ್ದಂತೆ. ಎಲ್ಲಿಂದಲೋ ವಲಸೆ ಬರೋ ಹಕ್ಕಿಗಳು ಇಲ್ಲಿ ಬೀಡು ಬಿಡುತ್ತವೆ. ಅಲ್ಲಲ್ಲಿ ಇಂಥದ್ದೇ ಅಪರೂಪದ ಸುಮಾರು 70 ಥರದ ಹಕ್ಕಿಗಳನ್ನು ನೀವಿಲ್ಲಿ ನೋಡಬಹುದು ಮತ್ತು ನಿಮ್ಮ ಕ್ಯಾಮೆರಾದಲ್ಲಿ ನಿಮ್ಮ ಜೊತೆಗೆ ಮನೆಗೊಯ್ಯಬಹುದು. ಹೆಬ್ಟಾಳ ಕೆರೆ ಬೆಂಗಳೂರಿನ ಅತ್ಯಂತ ದೊಡ್ಡ ಕೆರೆಗಳಲ್ಲೊಂದು. ಬೆಳಗ್ಗಿನ ಹೊತ್ತು ನೀವಿಲ್ಲಿಗೆ ಹೋದರೆ ಸೂರ್ಯೋದಯದ ಅದ್ಭುತ ದೃಶ್ಯವನ್ನು ನೋಡಬಹುದು. ಈ ದೃಶ್ಯವನ್ನು ನೋಡಲಿಕ್ಕೆಂದೇ ಬಹುತೇಕರು ಈ ಕೆರೆಯ ದಡದಲ್ಲಿ ನಿಲ್ಲುತ್ತಾರೆ. ಅದರ ಜೊತೆಗೆ ಹತ್ತಾರು ಹಕ್ಕಿಗಳು ಒಮ್ಮೆಲೆ ಕೂಗಿ ನಿಮ್ಮನ್ನು ಮೈಮರೆಯುವಂತೆ ಮಾಡುತ್ತದೆ. ಪ್ರಕೃತಿ ವಿಸ್ಮಯನ್ನು ನೋಡುತ್ತಾ ನಿಂತಿದ್ದರೆ ಸಮಯ ಸಾಗಿದ್ದೇ ತಿಳಿಯುವುದಿಲ್ಲ. ಈ ಭಾನುವಾರ ಪುರ್ಸೊತ್ತು ಮಾಡಿಕೊಂಡು ಬೆಳ್ಳಂಬೆಳಗ್ಗೆ ಎದ್ದು ಹೆಬ್ಟಾಳ ಕೆರೆಗೆ ಹೋಗಿಬನ್ನಿ. ಹ್ಯಾಪ್ಪಿ ವೀಕೆಂಡ್.