Advertisement

ಹೆಬ್ರಿ-ತಾಣ ಚತುಷ್ಪಥ ರಸ್ತೆ: ಕುಸಿದ ಮೋರಿ

10:35 PM Nov 21, 2019 | Team Udayavani |

ಹೆಬ್ರಿ: ಹೆಬ್ರಿಯಿಂದ ಕಾರ್ಕಳ ಮಾರ್ಗದ ತಾಣ ಚತುಷ್ಪಥ ರಸ್ತೆ ಬದಿಯಲ್ಲಿರುವ ಚರಂಡಿ ಕಳಪೆ ಮಟ್ಟದಿಂದ ಕೂಡಿದ್ದು ಪ್ರಾಥಮಿಕ ಶಾಲೆಗೆ ಹೋಗುವ ದಾರಿಗೆ ಅಳವಡಿಸಲಾದ ಮೋರಿ ಕುಸಿದಿದ್ದು ಅಪಾಯದ ಅಂಚಿನಲ್ಲಿದೆ.

Advertisement

ಹೆಬ್ರಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯ ಅಂಚಿನ ಚರಂಡಿ ವ್ಯವಸ್ಥೆಗೆ ಅಳವಡಿಸಲಾದ ಮೋರಿ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಶಾಲಾ ಮೈದಾನದಿಂದ ಹರಿದ ನೀರು ಇಲ್ಲಿಯೇ ಬಂದು ಸೇರುವುದರಿಂದ ನೀರು ಹರಿದು ಹೋಗಲು ಜಾಗವಿಲ್ಲದೆ ರಸ್ತೆ ಮೇಲೆ ಹರಿದ ಪರಿಣಾಮ ಚರಂಡಿಗೆ ಹಾನಿಯಾಗಿದೆ.

ಮೋರಿಯ ಒಂದು ಭಾಗ ಕುಸಿದಿದ್ದು ಈ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು ಸಂಚರಿಸುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಕಾಮಗಾರಿ ನಡೆದು ಕೇವಲ 8 ತಿಂಗಳಲ್ಲಿ ಈ ಚರಂಡಿಯ ಮೋರಿ ಕುಸಿದಿದೆ.

ಅವೈಜ್ಞಾನಿಕ ಚರಂಡಿ ವ್ಯವಸ್ಥೆ
ರಸ್ತೆ ವಿಸ್ತರಣೆ ಮಾಡಿ ರಸ್ತೆಯ ಎರಡು ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಮಾಡಿದ್ದರೂ ರಸ್ತೆಯ ನೀರು ಹರಿಯಲು ಜಾಗವಿಲ್ಲದೆ ಮಳೆ ಸಂದರ್ಭ ರಸ್ತೆ ನದಿಯಂತೆ ಭಾಸವಾಗುತ್ತದೆ. ಶಾಲಾ ವಠಾರ ಎತ್ತರ ಪ್ರದೇಶದಲ್ಲಿದ್ದು ನೀರು ಕೆಳಗೆ ಚರಂಡಿಗೆ ಹರಿದುಹೋಗಲು ಸರಿಯಾದ ಚರಂಡಿಗೆ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಹರಿಯುತ್ತಿತ್ತು. ಇದನ್ನು ಮನಗಂಡ ಸ್ಥಳೀಯರು ಚರಂಡಿಯ ಮೇಲು ಹೊದಿಕೆ ಒಡೆದು ನೀರು ಹರಿಯುವಂತೆ ಮಾಡಿದ್ದಾರೆ.

ಶಾಲಾ ವಠಾರ ಅಪಾಯ
ಶಾಲೆಗೆ ಹೋಗುವ ಮಾರ್ಗದ ಬದಿಯಲ್ಲಿ ದೊಡ್ಡ ಕಂದಕ ನಿರ್ಮಾಣ ವಾಗಿದ್ದು ಚಿಕ್ಕ ಮಕ್ಕಳು ಜಾರಿ ಬೀಳುವ ಅಪಾಯವಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಜಾಗೃತವಾಗಬೇಕಿದೆ.

Advertisement

ಶಾಲೆಯ ಪ್ರಮುಖ ದ್ವಾರ
ಸುಮಾರು 137 ವರ್ಷ ಇತಿಹಾಸವಿರುವ ಶಾಲೆಯ ಪ್ರಮುಖ ದ್ವಾರ ಇದೀಗ ಮುಚ್ಚಿದೆ. ಆದ್ದರಿಂದ ಇಲ್ಲಿ ಈ ರೀತಿಯ ಅವ್ಯವಸ್ಥೆಗೆ ಕಾರಣ ವಾಗಿದೆ. ಪ್ರಸ್ತುತ ಮಕ್ಕಳು ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ಮಾರ್ಗದಲ್ಲಿ ಮಕ್ಕಳು ಓಡಾಡುವುದು ತುಂಬಾ ಅಪಾಯಕಾರಿ. ಶಿಕ್ಷಣ ಇಲಾಖೆ ಪ್ರಮುಖ ದ್ವಾರದಲ್ಲಿಯೇ ಶಾಲೆಗೆ ಹೋಗುವ ಬಗ್ಗೆ ನಿಬಂಧನೆ ವಿಧಿಸಬೇಕು, ಅಲ್ಲದೆ ಶಾಲಾ ಗೇಟ್‌ ಎದುರಿನ ಚರಂಡಿ ಕಾಮಗಾರಿ ಮಾಡಿದವರಿಗೆ ಕೂಡಲೇ ದುರಸ್ತಿ ಮಾಡುವಂತೆ ಸೂಚನೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ವಿಜಯೇಂದ್ರ ಶೆಟ್ಟಿ ಅವರು
ತಿಳಿಸಿದ್ದಾರೆ.

ಸಮಸ್ಯೆಗೆ ಶೀಘ್ರ ಪರಿಹಾರ
ಚರಂಡಿಗೆ ಸರಿಯಾಗಿ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆಯಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಂಜಿನಿಯರ್‌ ಅವರ ಗಮನಕ್ಕೆ ತಂದಿದ್ದು ಸಮಸ್ಯೆ ಬಗೆಹರಿಸುವ ಬಗ್ಗೆ ಶೀಘ್ರ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
-ಎಚ್‌.ಕೆ.ಸುಧಾಕರ್‌,ಅಧ್ಯಕ್ಷರು,ಗ್ರಾ.ಪಂ.ಹೆಬ್ರಿ

ತತ್‌ಕ್ಷಣ ದುರಸ್ತಿಗೊಳಿಸಿ
ಹೆಬ್ರಿ ಕಾರ್ಕಳ ಮುಖ್ಯ ರಸ್ತೆ ಆದ್ದರಿಂದ ವಾಹನ ಸಂಚಾರ ಹೆಚ್ಚಾಗಿದ್ದು ಮಕ್ಕಳು ರಸ್ತೆ ದಾಟುವಾಗ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಹಿಂದಿನ ಆಸ್ಪತ್ರೆ ಸಮೀಪದ ರಸ್ತೆಯಲ್ಲಿ ಮಕ್ಕಳು ಸಂಚರಿಸುತ್ತಿದ್ದಾರೆ. ಆದರೆ ಶಾಲಾ ಗೇಟ್‌ ಎದುರು ನೀರು ಹರಿದುಹೋಗಲು ಮಾಡಿದ ಶಾಲಾ ಮೈದಾನದ ಚರಂಡಿಯನ್ನು ಹಾನಿ ಮಾಡಿದ್ದು ಮೋರಿ ಕೂಡಾ ಕುಸಿದಿದೆ. ಇದರಿಂದ ಮಕ್ಕಳು ಸೇರಿದಂತೆ ಎಲ್ಲರಿಗೂ ಅಪಾಯವಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ದುರಸ್ತಿ ಮಾಡಬೇಕಾಗಿದೆ.
-ಚಂಪಕಾ, ಮುಖ್ಯ ಶಿಕ್ಷಕಿ ಸ.ಹಿ.ಪ್ರಾ ಶಾಲೆ.

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next