Advertisement

ನೂತನ ಹೆಬ್ರಿ ತಾಲೂಕಿಗೆ ಪ್ರಾಕೃತಿಕ ವೃಕ್ಷೋದ್ಯಾನ

01:25 AM May 05, 2019 | sudhir |

ಹೆಬ್ರಿ: ನೂತನವಾಗಿ ರಚನೆಯಾದ ಹೆಬ್ರಿ ತಾಲೂಕಿಗೆ ಇದೀಗ ಸುಮಾರು 20 ಎಕರೆ ಜಾಗದಲ್ಲಿ 1.10 ಕೋಟಿ ರೂ.ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್‌ ನಿರ್ಮಾಣಗೊಂಡಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ.

Advertisement

ಸಸ್ಯ ಸಂಪತ್ತು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹೆಸರಲ್ಲಿ ರಾಜ್ಯದ ವಿವಿದೆಡೆ ಒಟ್ಟು 27 ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್‌ ಮಂಜೂರು ಮಾಡಿದೆ. ಇದೀಗ ಉಡುಪಿ ಶಿವಮೊಗ್ಗ ರಾ.ಹೆ. ಬಳಿಯ ಹೆಬ್ರಿ ಅರಣ್ಯ ಇಲಾಖೆಯ ಕಚೇರಿ ಸಮಿಪ ಪ್ರಕೃತಿ ಸೊಬಗನ್ನು ಉಳಿಸಿಕೊಂಡು ಪಾರ್ಕ್‌ ನಿರ್ಮಾಣಗೊಂಡಿದೆ.

ಹೆಬ್ಬೇರಿ ಉದ್ಯಾನವನ ಮಾರ್ಪಾಡು
ಹೆಬ್ಬೇರಿ ಉದ್ಯಾನವನ್ನು ಸಾಲುಮರದ ತಿಮ್ಮಕ್ಕ ಪಾರ್ಕ್‌ ಆಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಅರಣ್ಯ ಸಮಿತಿ ಶ್ರಮದಾನ ಮಾಡಿ ಯೋಜನೆ ಚಾಲ್ತಿಯಲ್ಲಿರಿಸಿದ್ದು, 2016ರಲ್ಲಿ ಜಿ.ಪಂ. ಅನುದಾನದಲ್ಲಿ ಬಾವಿ, ಪಂಪ್‌ಶೆಡ್‌, ಆವರಣಗೋಡೆ ನಿರ್ಮಾಣವಾಗಿತ್ತು.

ಪಾರ್ಕ್‌ನಲ್ಲಿ ಏನೇನಿದೆ?
ಪ್ರಾಕೃತಿಕ ರಚನೆಯ ಆಕರ್ಷಕ ಮಹಾದ್ವಾರ , ಔಷಧಿಯ ಸಸ್ಯಗಳ ವನ, ಪಾರಾಗೋಲಾ, ಟೆಂಟ್‌ ಹೌಸ್‌, 1600 ಮೀಟರ್‌ ಉದ್ದದ ಸಣ್ಣ ಮತ್ತು ದೊಡ್ಡದಾದ ಎರಡು ವಾಕಿಂಗ್‌ ಟ್ರಾÂಕ್‌, ಪ್ರಾಕೃತಿಕ ವನ , ಮಕ್ಕಳು ಆಟವಾಡಲು ವಿವಿಧ ಜೋಕಾಲಿಗಳು, ಕುಳಿತುಕೊಳ್ಳಲು ಬೆಂಚ್‌ಗಳು, ವಿಶ್ರಾಂತಿ ತಾಣ, ರೋಪ್‌ ವೇ,ವೀಕ್ಷಣಾ ಗೋಪುರ, ಮುಕ್ತ ಸಭಾಂಗಣ, ಸ್ತಬ್ಧ ಚಿತ್ರಗಳು, ನೈಸರ್ಗಿಕ ಪಥ, ಪಕ್ಷಿಗಳ ವೀಕ್ಷಣೆಗೆ ವ್ಯವಸ್ಥೆ ಹೊಂದಿದೆ. 20 ಎಕರೆ ಜಾಗಕ್ಕೆ ಆವರಣ ಗೋಡೆ, ರಾತ್ರಿಗೆ ವರ್ಣರಂಜಿತ ಬೆಳಕು ಮೊದಲಾದ ಕಾಮಗಾರಿಯು ಮುಂದಿನ ಐದು ವರ್ಷದಲ್ಲಿ ಹಂತ ಹಂತವಾಗಿ ಪೂರ್ಣಗೊಳ್ಳಲಿದೆ.

600 ಗಿಡಗಳ ನಾಟಿ
ಪ್ರಕೃತಿ ಸೊಬಗಿನ ರಕ್ಷಣೆಯೊಂದಿಗೆ ಪರಿಸರ ಸ್ನೇಹಿಯಾಗಿ ಟ್ರೀ ಪಾರ್ಕ್‌ ನಿರ್ಮಾಣಗೊಳ್ಳುತ್ತಿದೆ. ಮೀಸಲು ಅರಣ್ಯದ ಯಾವುದೇ ಗಿಡ-ಮರಗಳಿಗೆ ಹಾನಿ ಮಾಡದೇ ಸಸ್ಯ ರಾಶಿಗಳ ಮಧ್ಯೆ ಮಳೆಗಾಲದಲ್ಲಿ ಔಷಧೀಯ ಸಸ್ಯಗಳು ಸೇರಿದಂತೆ ಸುಮಾರು 600 ಗಿಡಗಳನ್ನು ನೆಡುವ ಉದ್ದೇಶವನ್ನು ಹೆಬ್ರಿ ಅರಣ್ಯ ಇಲಾಖೆ ಹೊಂದಿದ್ದು ಬಣ್ಣಬಣ್ಣದ ಹೂವು ಹಾಗೂ ಪಶ್ಚಿಮ ಘಟ್ಟದ ಅಮೂಲ್ಯ ಮರಗಳನ್ನು ಬೆಳೆದು ಸುಂದರ ಉದ್ಯಾನವನ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಇಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ದೀಪದ ವ್ಯವಸ್ಥೆ ಇನ್ನಷ್ಟೇ ಆಗಬೇಕಿದೆ.

Advertisement

ದಾನಿಗಳ ಸಹಾಯ ಬೇಕು
ಪ್ರವಾಸಿತಾಣವಾಗಿ ಗುರುತಿಸಿಕೊಂಡ ಹೆಬ್ರಿ ಇದೀಗ ತಾಲೂಕಾಗಿದ್ದು ಒಂದು ಸುಂದರವಾದ ವೃಕ್ಷೋದ್ಯಾನವನದ ಅಗತ್ಯ ಇತ್ತು. ಅದು ನಿರಂತರ ಪ್ರಯತ್ನದ ಮೂಲಕ ಪೂರ್ಣ ಗೊಂಡಿದೆ. ದಾನಿಗಳು ಸಹಾಯದಿಂದ ಇನ್ನೂ ಅತ್ಯುತ್ತಮ ಪ್ರವಾಸಿ ಪಾರ್ಕ್‌ನ್ನಾಗಿ ಇದನ್ನು ನಿರ್ಮಿಸಲು ಸಾಧ್ಯ.
-ಜಯಕರ ಪೂಜಾರಿ, ಅಧ್ಯಕ್ಷರು, ಗ್ರಾಮ ಅರಣ್ಯ ಸಮಿತಿ

ಶೀಘ್ರ ಲೋಕಾರ್ಪಣೆ
ಪಾರ್ಕ್‌ನ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಕೆಲವೊಂದು ಸಣ್ಣ ಪುಟ್ಟ ಕೆಲಸಗಳು ಬಾಕಿ ಇದೆ.ಚುನಾವಣಾ ನೀತೆ ಸಂಹಿತೆ ಹಿನ್ನಲೆಯಲ್ಲಿ ಪಾರ್ಕ್‌ನ ಉದ್ಘಾಟನೆಯಾಗಿಲ್ಲ. ಶೀಘ್ರದಲ್ಲಿ ದಿನ ನಿಗದಿ ಪಡಿಸಿ ಸುಂದರ
ಪಾರ್ಕ್‌ ಲೋಕಾರ್ಪಣೆ ಆಗಲಿದೆ.
-ಸುಬ್ರಹ್ಮಣ್ಯ ಆಚಾರ್ಯ, ವಲಯ ಅರಣ್ಯ ಅಧಿಕಾರಿ, ಹೆಬ್ರಿ

ಮೂಲಸೌಕರ್ಯ
ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕಿಂಗ್‌ ವ್ಯವಸ್ಥೆ ಈಗಾಗಲೇ ಪೂರ್ಣಗೊಂಡಿದೆ. ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಲಾತ್ತದೆ. ಉದ್ಯಾನವನ ಪ್ರವೇಶಿಸುವಲ್ಲಿ ಕೌಂಟರ್‌ ತೆರೆಯಲಾಗುತ್ತಿದ್ದು ಮಕ್ಕಳಿಗೆ 5 ರೂ.ದೊಡ್ಡವರಿಗೆ 10 ರೂ. ಪ್ರವೇಶ ಶುಲ್ಕ ನಿಗದಿಗೆ ಪಡಿಸುವ ಬಗ್ಗೆ ಯೋಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next