ಹೆಬ್ರಿ: ಹೆಬ್ರಿ ಜೆಸಿಐ, ಜೆಸಿರೆಟ್ ಹಾಗೂ ಯುವ ಜೆಸಿ ವಿಭಾಗದ ವತಿಯಿಂದ ಹೆಬ್ರಿ ಸ.ಪ್ರ. ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಸಹಯೋಗದೊಂದಿಗೆ ಮಾಧ್ಯಮದವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ. 20ರಂದು ನಡೆಯಿತು.
ಹೆಬ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಆರ್. ಮಂಜುನಾಥ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಸಮಾಜದ ಅಂಕುಡೊಂಕನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಡಳಿತ ಪಕ್ಷದ ನ್ಯೂನತೆಯನ್ನು ಎತ್ತಿ ಹಿಡಿದು ಸರಿದಾರಿಗೆ ತರುವಲ್ಲಿ ಸಾಮಾಜಿಕ ಕಾಳಜಿಯೊಂದಿಗೆ ಗುರುತರವಾದ ಜವಾಬ್ದಾರಿ ಪತ್ರಕರ್ತರಲ್ಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾಧ್ಯಮದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಆಧುನಿಕ ತಂತ್ರಜ್ಞಾನದ ಜತೆಗೆ ಕ್ಷಣ ಕ್ಷಣದ ಮಾಹಿತಿ ಬಿತ್ತರಿಸುವ ಮಾಧ್ಯಮ ಗಳಾಗಿ ಟಿ.ವಿ. ಹಾಗೂ ಪತ್ರಿಕೆಗಳು ಬೆಳೆಯುತ್ತಿವೆ. ಇವುಗಳಲ್ಲಿ ಉತ್ತಮ ಉದ್ಯೋಗ ಅವಕಾಶಗಳಿದ್ದು ವಿದ್ಯಾರ್ಥಿ ಗಳು ಇಂದಿನಿಂದಲೇ ಪತ್ರಿಕೋದ್ಯಮದ ಬಗ್ಗೆ ತರಬೇತುದಾರಿಂದ ಮಾಹಿತಿ ಪಡೆದಲ್ಲಿ ಪದವಿ ಬಳಿಕ ಉದ್ಯೋಗ ಪಡೆಯಲು ಸಾಧ್ಯ ಎಂದು ಜೆಸಿಐ ಪೂರ್ವಾಧ್ಯಕ್ಷ ಡಾ| ಗಣಪತಿ ಎಚ್.ಎ. ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಪತ್ರಿಕಾ ವರದಿಗಾರಿಕೆ, ಸಂಪಾದಕೀಯ ವಿಭಾಗದ ಕೆಲಸ, ಪ್ರಸರಣ ಹಾಗೂ ಜಾಹೀರಾತು ವಿಭಾಗದ ಕಾರ್ಯವೈಖರಿ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ಜೆಸಿರೇಟ್ ಅಧ್ಯಕ್ಷೆ ಶ್ರೀಲತಾ ಪಿ., ಜೆಸಿಐ ನಿಕಟಪೂರ್ವ ಅಧ್ಯಕ್ಷೆ ವೀಣಾ ಆರ್.ಭಟ್, ಯುವ ಜೆಸಿ ಅಧ್ಯಕ್ಷ ದೀಕ್ಷಿತ್ ಕುಲಾಲ್, ಕಾರ್ಯಕ್ರಮ ನಿರ್ದೇಶಕ ಬಾಲರಾಜ್, ಪ್ರಶಾಂತ್ ಪೈ ಉಪಸ್ಥಿತರಿದ್ದರು.
ಹೆಬ್ರಿ ಜೆಸಿಐ ಅಧ್ಯಕ್ಷ ನಾಗೇಂದ್ರ ಸ್ವಾಗತಿಸಿ, ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ವಂದಿಸಿದರು.
ಪತ್ರಿಕೋದ್ಯಮದ ಸವಾಲುಗಳು
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪತ್ರಕರ್ತೆ ನವ್ಯ ಜ್ಯೋತಿ ನೆಲ್ಲಿಜೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ಸದಾ ಹೊಸತನವನ್ನು ಹುಡುಕುವ ಸಾಮಾಜಿಕ ಕಾಳಜಿಯೊಂದಿಗೆ ತಾಳ್ಮೆ ಮತ್ತು ಧೈರ್ಯವನ್ನು ಹೊಂದಿದವರು ಪತ್ರಿಕೋದ್ಯಮದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದರು.