Advertisement

ಟೇಬಲ್‌ ಮೇಲೆ ರಾಜೀನಾಮೆ ಪತ್ರ ಇಟ್ಟು  ಎಸ್‌ಐ ಮನೆಗೆ!

01:37 PM Jul 07, 2018 | Team Udayavani |

ಹೆಬ್ರಿ: ಟೇಬಲ್‌ ಮೇಲೆ ರಾಜೀನಾಮೆ ಪತ್ರ, ಅದರೊಂದಿಗೆ ಪೊಲೀಸ್‌ ಇಲಾಖೆ ನೀಡಿದ್ದ ಮೊಬೈಲ್‌ಅನ್ನು ಇಟ್ಟು ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಒಬ್ಬರು ಕರ್ತವ್ಯ ತ್ಯಜಿಸಿದ ವಿಲಕ್ಷಣ ಘಟನೆ ಹೆಬ್ರಿ ಠಾಣೆಯಲ್ಲಿ ನಡೆದಿದೆ. ಇಲ್ಲಿನ ಠಾಣಾಧಿಕಾರಿ ಮಹಾಬಲ ಶೆಟ್ಟಿ ಅವರೇ ಶುಕ್ರವಾರ ಮಧ್ಯಾಹ್ನ ರಾಜೀನಾಮೆ ಪತ್ರ ಇಟ್ಟು ತಮ್ಮ ಊರು ಕುಂದಾಪುರದ ಸಿದ್ದಾಪುರಕ್ಕೆ ತೆರಳಿದವರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಎಚ್ಚೆತ್ತಿದ್ದು, ಮಹಾಬಲ ಶೆಟ್ಟಿ ಅವರ ಮನೆಗೆ ತೆರಳಿ ಮನವೊಲಿಸಲು ಯತ್ನಿಸಿದ್ದಾರೆ. ಎಎಸ್‌ಪಿ ಕುಮಾರಸ್ವಾಮಿ ಅವರು ಈ ಸಂಬಂಧ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ.  ಆದರೆ ಮಹಾಬಲ ಶೆಟ್ಟಿ ಅವರ ಮುಂದಿನ ನಿರ್ಧಾರದ ಬಗ್ಗೆ ತಿಳಿದು ಬಂದಿಲ್ಲ .

Advertisement

ಪ್ರತಿಭಟನೆ 

ಜನ ಮೆಚ್ಚುಗೆಗೆ ಪಾತ್ರರಾದ ಶೆಟ್ಟಿ ಅವರನ್ನು ಕರ್ತವ್ಯದಲ್ಲಿ ಮುಂದುವರಿಸಬೇಕು. ಇದಕ್ಕಾಗಿ ಎಸ್‌ಪಿ ಅವರು ಮನವೊಲಿಸಬೇಕು. ಎಂದು ಶನಿವಾರ ಭಾರೀ ಮಳೆಯನ್ನೂ ಲೆಕ್ಕಿಸದೆ  ಠಾಣೆ ಎದುರು ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಘಟಕ ಪ್ರತಿಭಟನೆ ನಡೆಸಿದೆ. 

ಪ್ರತಿಭಟನಾ ಸ್ಥಳಕ್ಕೆ ಕಾರ್ಕಳದ ಹಿರಿಯ ಪೊಲೀಸ್‌ ಅಧಿಕಾರಿಗಳು ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದ್ದಾರೆ. 

Advertisement

ರಾಜೀನಾಮೆಗೆ ಕಾರಣ ಏನು? 
ಇಲ್ಲಿನ ಕಳೂರು ಸಂತೆಕಟ್ಟೆಯ ಜಾಗವೊಂದರ ತಕರಾರಿನ ವಿಚಾರದಲ್ಲಿ ಮೇಲಧಿಕಾರಿಗಳು ಶೆಟ್ಟಿಯವರ ಮೇಲೆ ಗರಂ ಆಗಿದ್ದಾರೆ. ಇದರಿಂದ ಬೇಸತ್ತ ಅವರು ಏಕಾಏಕಿ ರಾಜೀನಾಮೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಶೆಟ್ಟಿಯವರ ನಿವೃತ್ತಿಗೆ ಇನ್ನು ಎರಡೇ ವರ್ಷವಿದ್ದು ಶಂಕರನಾರಾಯಣದಿಂದ ಇತ್ತೀಚೆಗಷ್ಟೇ ಹೆಬ್ರಿಗೆ ವರ್ಗಾವಣೆಗೊಂಡಿದ್ದರು. 

ಎರಡನೇ ಪ್ರಕರಣ
ಮೇಲಧಿಕಾರಿಗಳ ವರ್ತನೆಯಿಂದ ಬೇಸತ್ತು ಅಧಿಕಾರಿಯೊಬ್ಬರು ಜಿಲ್ಲೆಯಲ್ಲಿ ಏಕಾಏಕಿ ರಾಜೀನಾಮೆ ನೀಡುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಹಿಂದೆ ಕೋಟ ಠಾಣೆಯ ಅಧಿಕಾರಿ ಕಬ್ಬಲ್‌ರಾಜ್‌ ಅವರೂ ಇದೇ ರೀತಿ ರಾಜೀನಾಮೆ ನೀಡಿದ್ದರು.   

ಕಳೆದ 3 ತಿಂಗಳಿನಿಂದ ಜಾಗದ ಸಮಸ್ಯೆ ಬಗ್ಗೆ ಗೊಂದಲ ನಿವಾರಿಸಲು ಸರ್ವೆ ನಡೆಸುವಂತೆ ಹೆಬ್ರಿ ಠಾಣಾಧಿಕಾರಿಗೆ ತಿಳಿಸಿದ್ದೆ. ಆದರೆ ಇದರ ಬಗ್ಗೆ ಅವರು ನಿರಾಕರಿಸಿದ್ದರು. ಈ ಸಮಸ್ಯೆ ಮುಂದುವರಿದರೆ ಹೊಣೆಗಾರರಾಗುವ ಬಗ್ಗೆ ಎಚ್ಚರಿಸಿದ್ದೆ. ಜತೆಗೆ ರಿಪೋರ್ಟ್‌ ಮಾಡಲು ಹೇಳಿದ್ದೆ. ಈಗವರು ವಿಆರ್‌ಎಸ್‌ ನೀಡಿದ್ದಾರೆ. ಅವರೊಂದಿಗೆ ಮಾತುಕತೆಗೆ ಅಧಿಕಾರಿಯೊಬ್ಬರನ್ನು ಕಳಿಸಿದ್ದು, ಮುಂದಿನ ತೀರ್ಮಾನ ನೋಡಬೇಕಿದೆ. 
-ಲಕ್ಷ್ಮಣ ಬ. ನಿಂಬರಗಿ, ಎಸ್‌.ಪಿ. ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next