Advertisement

ಹೆಬ್ರಿ ತಾ|ಆಡಳಿತ ಕಟ್ಟಡ ಲೋಕಾರ್ಪಣೆಗೆ ಸಿದ್ಧ

10:52 AM May 26, 2022 | Team Udayavani |

ಹೆಬ್ರಿ: ಕಾರ್ಕಳ ತಾಲೂಕಿನಿಂದ ಬೇರ್ಪಟ್ಟು ನೂತನವಾಗಿ ರಚನೆಯಾದ ಹೆಬ್ರಿ ತಾಲೂಕಿನಲ್ಲಿ ಸುಮಾರು 10 ಕೋಟಿ ರೂ. ವೆಚ್ಚದ ತಾಲೂಕು ಆಡಳಿತ ಕಟ್ಟಡ ನಿರ್ಮಾಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧಗೊಂಡಿದೆ.

Advertisement

ಹೆಬ್ರಿ ಉಡುಪಿ ಮುಖ್ಯ ರಸ್ತೆಗೆ ತಾಗಿಕೊಂಡು ಕಾಲೇಜು ಆವರಣದ ಒಳಗೆ ಅತ್ಯಾಕರ್ಷಕವಾಗಿ ನಿರ್ಮಾಣಗೊಂಡ ಎರಡು ಮಹಡಿಯ ತಾಲೂಕು ಆಡಳಿತ ಕಟ್ಟಡ ಜೂ.1ರಂದು ಸಿಎಂ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಳ್ಳಲಿದ್ದು ಸುಮಾರು 5 ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆಯಿದೆ.

ಹೆಬ್ರಿ ತಾಲೂಕು ರಚನೆಯಾಗಿ ಸುಮಾರು 5 ವರ್ಷ ಕಳೆದಿದ್ದು ಇದುವರೆಗೆ ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರದ ಹಳೆ ಕಟ್ಟದಲ್ಲಿ ತಾಲೂಕು ಕಚೇರಿ ನಿರ್ವಹಿಸುತ್ತಿದ್ದು ಜೂ.1ರಿಂದ ನೂತನ ಕಟ್ಟಡಕ್ಕೆ ವರ್ಗಾವಣೆಗೊಳ್ಳಲಿದೆ. ಕಂದಾಯ ಇಲಾಖೆ, ಉಪ ನೋಂದಾಣಾಧಿಕಾರಿಗಳ ಕಚೇರಿ, ಭೂ ದಾಖಲೆಗಳ ಸಹಾಯಕ ಕಚೇರಿ, ಉಪ ಖಜಾನೆ ಸೇರಿದಂತೆ ಒಟ್ಟು 4 ಇಲಾಖೆಗಳು ಈ ನೂತನ ಕಟ್ಟಡದ ಒಳಗೆ ಬರಲಿದೆ.

ಯಾವ ಯಾವ ವಿಭಾಗಗಳಿವೆ?

ನೆಲಮಹಡಿಯಲ್ಲಿ ಉಪ ಖಜಾನೆಯ ಭದ್ರತಾ ಸಿಬಂದಿಯ ಕೊಠಡಿ, ಉಪ ಖಜಾನಾಧಿಕಾರಿಗಳ ಕಾರ್ಯಾಲಯ, ಕೊಠಡಿ. ತಹಶೀಲ್ದಾರ್‌, ತಾ| ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯದ ಸಭಾಂಗಣ ಮತ್ತು ವೀಡಿಯೋ ಕಾನ್ಫರೆನ್ಸ್‌ ಹಾಲ್‌, ತಹಶೀಲ್ದಾರ್‌ ಅವರ ಕೊಠಡಿ, ತಹಶೀಲ್ದಾರ್‌ ಅವರ ಕಾರ್ಯಾಲಯದ ಸಿಬಂದಿ ಶಾಖೆಯ ಕೊಠಡಿ,ಅಭಿಲೇಖಾಲಯ, ಚುನಾವಣ ಶಾಖೆಯ ಭದ್ರತಾ ಕೊಠಡಿ, ಭೂಮಿ ಶಾಖೆ ಪಹಣಿ ವಿತರಣಾ ಕೇಂದ್ರ, ಅಟಲ್‌ ಜೀ ಜನ ಸ್ನೇಹಿ ಕೇಂದ್ರ, ಆಧಾರ್‌ ನೋಂದಣಿ ಕೇಂದ್ರ, ಹೆಬ್ರಿ ಹೋಬಳಿ ರಾಜಸ್ವ ನಿರೀಕ್ಷಕರ ಮತ್ತು ಹೆದ್ದಾರಿ ವೃತ್ತದ ಗ್ರಾಮ ಲೆಕ್ಕಿಗರ ಕಾರ್ಯಾಲಯ ಹೊಂದಿದೆ.

Advertisement

ಮೊದಲ ಮಹಡಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಪ ನೋಂದಣಾಧಿಕಾರಿ ಕಾರ್ಯಾಲಯ, ಅಭಿಲೇಖಾಲಯ, ಉಪ ನೋಂದಣಾಧಿಕಾರಿ ಕೊಠಡಿ, ಶಾಸಕರ ಕೊಠಡಿ, ಶಾಸಕರ ಆಪ್ತ ಸಹಾಯಕರ ಕೊಠಡಿ, ತಹಶೀಲ್ದಾರ್‌ ಅವರ ಕಾರ್ಯಾಲಯದ ಸಭಾಂಗಣ, ಚುನಾವಣ ಶಾಖೆಯ ಕೊಠಡಿ ಮತ್ತು ಅಭಿಲೇಖಾಲಯ ಕೇಸ್ವಾನ್‌ ಸಿಬಂದಿಯ ಕೊಠಡಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯ ಒಳಗೊಂಡಿದೆ. ವಿಶಾಲ ಜಾಗದಲ್ಲಿ ಆಕರ್ಷಕ ಕಟ್ಟಡ ನಿರ್ಮಾಣಗೊಂಡಿದ್ದು ಸುಮಾರು 8 ಜನ ಸಾಮರ್ಥ್ಯದ ಲಿಫ್ಟ್‌ ವ್ಯವಸ್ಥೆ ಇದೆ. ಕಚೇರಿ ಸಿಬಂದಿ, ಸಾರ್ವಜನಿಕರಿಗೆ, ಅಂಗವಿಕಲರಿಗೆ ಪ್ರತ್ಯೇಕ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.

2.38 ಕೋಟಿ ರೂ. ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಕಟ್ಟಡದ ಸುತ್ತ ಸುಸಜ್ಜಿತ ಕಾಂಪೌಂಡ್‌ ವ್ಯವಸ್ಥೆ, ಕಚೇರಿ ಆವರಣದ ಒಳಗೆ ಗಾರ್ಡನ್‌, ಹೈಮಾಸ್ಟ್‌ ದೀಪ, ತಹಶೀಲ್ದಾರ್‌ ಅವರ ವಸತಿ ಗೃಹ ನಿರ್ಮಾಣ ಸೇರಿದಂತೆ ಸುಮಾರು 2.38 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್‌ ಪುರಂದರ ಕೆ. ತಿಳಿಸಿದ್ದಾರೆ.

ಜನರ ಅಲೆದಾಟ ತಪ್ಪಲಿ

ನೂತನವಾಗಿ ಹೆಬ್ರಿ ತಾಲೂಕು ರಚನೆಯಾಗಿ 5 ವರ್ಷಗಳು ಕಳೆದಿವೆ. ಒಂದು ತಾಲೂಕು ಪೂರ್ಣವಾಗಲು ಸುಮಾರು 30 ಇಲಾಖೆಗಳು ಬೇಕಾಗುತ್ತದೆ. ಆದರೆ ಹೆಬ್ರಿಯಲ್ಲಿ ಇದುವರೆಗೆ ಕೇವಲ 3 ತಾಲೂಕು ಮಟ್ಟದ ಇಲಾಖೆಗಳಿವೆ. ಉಳಿದ ಇಲಾಖೆಗಳು ಶೀಘ್ರ ಕಾರ್ಯಾರಂಭ ಮಾಡುವುದರ ಜತೆ ಜನರಿಗೆ ಅತೀ ಅಗತ್ಯವಾದ ನಾಡಕಚೇರಿ, ಉಪ ನೋಂದಣಾಧಿಕಾರಿ ಕಚೇರಿ ಶೀಘ್ರ ಆರಂಭವಾಗಬೇಕು. ಕೇವಲ ಬೃಹತ್‌ ಕಟ್ಟಡವಿದ್ದರೆ ಸಾಲದು ಜನರಿಗೆ ಸೇವೆ ಬೇಕು. ಆದಷ್ಟು ಶೀಘ್ರ ಜನರ ಅಲೆದಾಟವನ್ನು ತಪ್ಪಿಸಿ ಪೂರ್ಣ ಪ್ರಮಾಣದ ತಾಲೂಕು ಆಡಳಿತ ಜನರಿಗೆ ಸಿಗುವಂತಾಗಲಿ. -ಕೆರೆಬೆಟ್ಟು ಸಂಜೀವ ಶೆಟ್ಟಿ, ಅಧ್ಯಕ್ಷರು, ಪ್ರಗತಿಪರ ನಾಗರಿಕ ಹೋರಾಟ ಸಮಿತಿ

ಹೆಬ್ರಿ ಉದಯಕುಮಾರ್‌ ಶೆಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next