Advertisement
ದುರಸ್ತಿ ಕಾರ್ಯ ಆರಂಭ ತಾಲೂಕು ಕಚೇರಿ ಎಂದು ತಾತ್ಕಾಲಿಕವಾಗಿ ನಿಗದಿಯಾದ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದ ದುರಸ್ತಿ ಕಾರ್ಯ ಆರಂಭವಾಗಿದೆ. ಆದರೆ ಇಲ್ಲಿ ಇನ್ನಷ್ಟೇ ಸೇವೆಗಳು ಲಭ್ಯವಾಗಬೇಕಿದೆ. ಇನ್ನು ಹೆಬ್ರಿಗೆ ನೂತನ ತಹಶೀಲ್ದಾರರ ನೇಮಕವಾಗಿದ್ದರೂ ಇದುವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ.
ಬೋರ್ಡ್ ಮಾತ್ರ
ತಾಲೂಕು ಕಚೇರಿಯಾಗಬೇಕೆಂದು ಹೋರಾಟ ನಡೆದ ಬಳಿಕ ಹೆಬ್ರಿ ತಾಲೂಕು ತಾಲೂಕು ದಂಡಾಧಿಕಾರಿ ಕಚೇರಿ ಎಂದು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಹಳೆ ಕಟ್ಟಡದಲ್ಲಿ ನಾಮಫಲಕವನ್ನು ತೂಗು ಹಾಕಲಾಗಿದ್ದು ಕೇವಲ ಬೋರ್ಡ್‌ಗೆ ಮಾತ್ರ ಸೀಮಿತವಾಗಿದೆ.
ತಾಲೂಕು ಎಂದು ಹೇಳುತ್ತಿದ್ದರೂ, ಜನರಿಗೆ ಅಗತ್ಯವಾದ ಪಹಣಿಪತ್ರ ಇನ್ನೂ ಇಲ್ಲಿ ಲಭ್ಯವಿಲ್ಲ. ಅದಕ್ಕಾಗಿ ಕಾರ್ಕಳಕ್ಕೆ ಹೋಗುವುದು ಮೇಗದ್ದೆ, ಕೂಡ್ಲುವಿನಂತಹ ತೀರಾ ಹಳ್ಳಿ ಪ್ರದೇಶದವರು ಕಾರ್ಕಳಕ್ಕೆ ಹೋಗುವುದು ಅನಿವಾರ್ಯವಾಗಿದೆ. ಹೆಬ್ರಿಯಲ್ಲಿ ನೆಮ್ಮದಿ ಕೇಂದ್ರದ ವ್ಯವಸ್ಥೆಯೂ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ ಎಂದು ಗ್ರಾಮಸ್ಥರು ದೂರಿದ್ದಾರೆ. ಅಜೆಕಾರಿನಲ್ಲಿರುವ ನಾಡಕಛೇರಿ, ನೆಮ್ಮದಿ ಕೇಂದ್ರವನ್ನು ಹೆಬ್ರಿಗೆ ಸ್ಥಳಾಂತರಿಸುವುದರಿಂದ ಹೆಬ್ರಿ ತಾಲೂಕಿನ ಜನರಿಗೆ ಅನುಕೂಲವಾಗುತ್ತದೆ ಎಂದು ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ನೀತಿ ಸಂಹಿತೆ ಜಾರಿ ಆದರೆ…
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ನೀತಿ ಸಂಹಿತೆ ಜಾರಿಯಾದರೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದು. ಈಗಾಗಲೇ ತಾಲೂಕಾದರೂ ಯಾವುದೇ ಚಟುವಟಿಕೆ ನಡೆಯದೇ ಇರುವುದರಿಂದ ಇಲ್ಲಿನ ನಿವಾಸಿಗಳ ಪಾಡು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈಗಾಗಲೇ ಒಂದು ವರ್ಷದಿಂದ ಈ ಭಾಗದ ಜನರು ಸಮಸ್ಯೆಗಳು ಅನುಭವಿಸುತ್ತಿದ್ದು ಬೆಳ್ವೆ ಮಾಡಮಕ್ಕಿ ಗ್ರಾಮದ ಜನರು ಅತ್ತ ಕುಂದಾಪುರವೂ ಅಲ್ಲದೆ ಇತ್ತ ಹೆಬ್ರಿಯೂ ಅಲ್ಲದೆ ಕಡತಗಳಿಗೆ ಪರದಾಡುವಂತಾಗಿದೆ. ಪ್ರತಿಭಟನೆಗೆ ಸಿದ್ಧತೆ
ಹೆಬ್ರಿ ತಾಲೂಕು ಆಯಿತು ಎಂದು ಖುಷಿ ಪಡುವ ಬದಲು ದುಃಖ ಪಡುಂತಾಗಿದೆ. ಕಾರ್ಕಳ ತಾಲೂಕಿನ ಹಾಗೂ ಕುಂದಾಪುರ ತಾಲೂಕಿನ ಗ್ರಾಮಗಳು ಹೆಬ್ರಿ ತಾಲೂಕಿಗೆ ಸೆಪೆìಡೆಗೊಂಡಿದ್ದರಿಂದ ಈ ಭಾಗದ ಗ್ರಾಮಸ್ಥರು ಪಹಣಿಪತ್ರ ಹಾಗೂ ಇತರ ಕಡತಗಳಿಗೆ ಪರದಾಡುವಂತಾಗಿದೆ. ಇದೇ ರೀತಿ ಗ್ರಾಮಸ್ಥರನ್ನು ನಿರ್ಲಕ್ಷಿಸಿದರೆ ತಾಲೂಕು ಕಚೇರಿಯ ಎದುರುಗಡೆ ಉಗ್ರ ಪ್ರತಿಭಟನೆ ಮಾಡಲಾಗುವುದು.
– ಕೆರೆಬೆಟ್ಟು ಸಂಜೀವ ಶೆಟ್ಟಿ
Related Articles
ಈಗಾಗಲೇ ಹೆಬ್ರಿಯಲ್ಲಿ ನೂತನ ತಾಲೂಕು ಕಚೇರಿ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲನೆಯಾಗಿ ಹೆಬ್ರಿ ಪ್ರಥಮ ದರ್ಜೆ ಕಾಲೇಜಿನ ಆವರಣದ ಬಳಿ ಹೆಬ್ರಿ-ಉಡುಪಿ ಮುಖ್ಯ ರಸ್ತೆಯ ಬದಿಯಲ್ಲಿ ನೂತನ ತಾಲೂಕು ಕಚೇರಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ನೂತನ ತಹಶೀಲ್ದಾರ ನೇಮಕ ಹೆಬ್ರಿ ನೂತನ ತಹಶೀಲ್ದಾರ್ ನೇಮಕ ಗೊಂಡಿದ್ದು ವಾರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಶೀಘ್ರದಲ್ಲಿ ಕಟ್ಟಡದ ದುರಸ್ತಿ ಕಾರ್ಯ ಮುಗಿದು ಕಚೇರಿ ಕಾರ್ಯ ಆರಂಭಗೊಳ್ಳಲಿದೆ. ಈಗಾಗಲೇ ಭೂಮಿ ಸಾಫ್ಟ್ವೇರ್ ಕೆಲಸ ಮುಗಿದಿದ್ದು ಎಲ್ಲಾ ಕಡತಗಳು ಹೆಬ್ರಿ ತಾಲೂಕು ಕಚೇರಿಯಲ್ಲಿ ಲಭ್ಯವಾಗಲಿದೆ.
– ಮಹಮ್ಮದ್ ಇಸಾಕ್, ತಹಶೀಲ್ದಾರ್, ಕಾರ್ಕಳ – ಹೆಬ್ರಿ ಉದಯಕುಮಾರ್ ಶೆಟ್ಟಿ