Advertisement

ಕುಚ್ಚಾರು: ಭಾರೀ ಸುಂಟರಗಾಳಿಗೆ ಅಪಾರ ಹಾನಿ

12:31 AM Sep 09, 2019 | Team Udayavani |

ಹೆಬ್ರಿ: ಹೆಬ್ರಿ ಸಮೀಪದ ಕುಚ್ಚಾರು-ಬೇಳಂಜೆ ಪರಿಸರದಲ್ಲಿ ಸೆ. 8ರ ಮುಂಜಾನೆ 7 ಗಂಟೆ ಸುಮಾರಿಗೆ ಬೀಸಿದ ಸುಂಟರಗಾಳಿಗೆ ಕುಚ್ಚಾರು ಗ್ರಾಮದ ಸುಮಾರು 19 ಮನೆಗಳಿಗೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.

Advertisement

ಕುಚ್ಚಾರು ಗ್ರಾ.ಪಂ. ವ್ಯಾಪ್ತಿಯ ಚಿಣ್ಣರಕಟ್ಟೆ, ಬೀದಿಬೆಟ್ಟು, ಮಂಡೊಳ್ಳಿ, ಹೆರ್ಜೆಡ್ಡು ಪರಿಸರದಲ್ಲಿ ಮನೆಗಳ ಹೆಂಚು ಹಾರಿಹೋಗಿದ್ದು ಯಾವುದೇ ಜೀವ ಹಾನಿಯಾಗಿಲ್ಲ. ಈ ಭಾಗದಲ್ಲಿ ಸುಮಾರು 15 ಜನರ ಅಡಿಕೆ, ತೆಂಗು ತೋಟಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ. ಬೃಹತ್‌ ಮರಗಳು ಧರೆಗುರುಳಿ 25ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ತುಂಡಾಗಿ ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿದೆ.

19ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಬೇಳಂಜೆ ಕೆರೆಮನೆ ತಮ್ಮು ನಾಯ್ಕ ಅವರ ಮನೆಗೆ ಸಂಪೂರ್ಣ ಹಾನಿಯಾಗಿದ್ದು ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿದೆ. ಬೇಳಂಜೆ ದೇವಸ್ಥಾನಬೆಟ್ಟು ಮೀನಕ್ಕ ಮರಕಾಲ್ತಿ, ಲಲಿತಾ ಮರಕಾಲ್ತಿ, ಜಯಲಕ್ಷ್ಮೀ, ನಾಗು ನಾಯ್ಕ, ಸೀತಾ ಮರಕಾಲ್ತಿ, ಪೂರ್ಣಿಮಾ ಸೇರ್ವೆಗಾರ್‌, ವಿಮಲಾ, ಸುಶೀಲಾ, ರತ್ನಾ, ಪದ್ದು ಪೂಜಾರ್ತಿ, ಮೃದುಲಾ, ಭುಜಂಗ ಶೆಟ್ಟಿ, ಗುಲಾಬಿ ಶೆಟ್ಟಿ ಅವರ ಮನೆಗಳು ಭಾಗಶಃ ಹಾನಿಯಾಗಿವೆ. ಬೀದಿಬೆಟ್ಟು ಪರಿಸರದ ರಾಮ ನಾಯ್ಕ, ಪುರುಷ ನಾಯ್ಕ, ಲಕ್ಷ್ಮಣ್‌ ನಾಯ್ಕ, ಸುಬ್ರಾಯ ನಾಯ್ಕ ಅವರ ಅಡಿಕೆ ತೋಟಗಳು ಹಾನಿಗೊಳಗಾಗಿವೆ.

ಮೆಸ್ಕಾಂಗೆ ಅಪಾರ ನಷ್ಟ

Advertisement

ಕುಚ್ಚಾರು ಬೇಳಂಜೆ ಪರಿಸರದಲ್ಲಿ ಎಚ್ಟಿ ಲೈನ್‌ನ 12 ಕಂಬಗಳು, ಎಲ್.ಟಿ. ಲೈನ್‌ನ 20 ಕಂಬಗಳು ಸೇರಿದಂತೆ 32 ಕಂಬಗಳಿಗೆ ಹಾನಿಯಾಗಿದ್ದು ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿದೆ. ಸುಮಾರು 2 ದಿನಗಳ ಕಾಲ ವಿದ್ಯುತ್‌ ದುರಸ್ತಿಗೆ ಸಮಯ ತೆಗೆದುಕೊಳ್ಳಬಹುದಾಗಿದ್ದು ಈ ಭಾಗದಲ್ಲಿ ಕರೆಂಟ್ ಸಮಸ್ಯೆ ಎದುರಾಗಿದೆ. ರವಿವಾರವಾದ್ದರಿಂದ ದುರಸ್ತಿ ಕೆಲಸ ಕಷ್ಟವಾಗಿದ್ದು ಎರಡು ದಿನಗಳಲ್ಲಿ ವಿದ್ಯುತ್‌ ಸಮಸ್ಯೆ ಬಗೆಹರಿಯಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಜನಪ್ರತಿನಿಧಿಗಳು ಭೇಟಿ

ಹಾನಿಗೊಂಡ ಪ್ರದೇಶಗಳಿಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್‌, ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್‌, ತಾ.ಪಂ. ಸದಸ್ಯ ಅಮೃತಕುಮಾರ್‌ ಶೆಟ್ಟಿ, ಕುಚ್ಚಾರು ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಪೂಜಾರಿ, ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್‌, ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ, ಮೆಸ್ಕಾಂ ಶಾಖಾಧಿಕಾರಿ ಲಕ್ಷ್ಮೀಶ್‌, ಗ್ರಾಮ ಲೆಕ್ಕಿಗ ಹಿತೇಶ್‌, ಪಿಡಿಒ ಆನಂದಕುಮಾರ್‌ ಬಿ.ಕೆ. ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭಾರೀ ಗಾಳಿಗೆ ಬೇಳಂಜೆಯಲ್ಲಿ ಬೃಹತ್‌ ಮರ ರಸ್ತೆಗೆ ಬಿದ್ದು ಕೆಲವು ಗಂಟೆಗಳ ಕಾಲ ಬೇಳಂಜೆ-ಆರ್ಡಿ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಬೆಳ್ವೆ, ಆರ್ಡಿ ಭಾಗದವರು ಸೋಮೇಶ್ವರ ಮೂಲಕ ಹೆಬ್ರಿಗೆ ಪ್ರಯಾಣಿಸಿದರು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಹಾಯದಿಂದ ಮರಗಳ ತೆರವುಕಾರ್ಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next