ಹೆಬ್ರಿ: ಮೂರು ರಸ್ತೆ ಬಳಿ ಕಾಲೇಜಿಗೆ ಹೋಗುವ ರಸ್ತೆಯ ಸರ್ಕಲ್ನಲ್ಲಿ ಅಪಾಯಕಾರಿ ವಿದ್ಯುತ್ ಕಂಬವಿರುವ ಬಗ್ಗೆ ಪತ್ರಿಕೆ ವರದಿ ಪ್ರಕಟಿಸಿದ ಬೆನ್ನಲ್ಲೇ ಜು. 2ರಂದು ಹೆಬ್ರಿ ಮೆಸ್ಕಾಂ ಅಧಿಕಾರಿಗಳ ನೇತೃತ್ವದಲ್ಲಿ ಕಂಬವನ್ನು ತೆರವುಗೊಳಿಸಲಾಗಿದೆ.
ಒಂದು ವರ್ಷದಿಂದ ಈ ಭಾಗದಲ್ಲಿ ಅಪಾಯಕಾರಿ ವಿದ್ಯುತ್ ಕಂಬವಿರುವ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿರಲಿಲ್ಲ.ಆದರೆ ಈಗಿನ ಅಧಿಕಾರಿಗಳು ಕೂಡಲೇ ಸಮಸ್ಯೆ ಸ್ಪಂದಿಸಿದ್ದು ವರ್ಷಗಳಿಂದ ಸಮಸ್ಯೆಯಾಗಿದ್ದ ವಿದ್ಯುತ್ ಕಂಬಕ್ಕೆ ಮುಕ್ತಿ ದೊರೆತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೆಸ್ಕಾಂ ಶಾಖಾಧಿಕಾರಿ ಲಕ್ಷ್ಮೀಶ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಘುನಾಥ ನಾಯ್ಕ ಅವರ ಮಾರ್ಗದರ್ಶನ ಮೆಸ್ಕಾಂ ಸಿಬಂದಿ ಕ್ರೇನ್‌ಗಳನ್ನು ಬಳಸಿ ಅಪಾಯಕಾರಿ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಹೊಸ ಕಂಬವನ್ನು ಅಳವಡಿಸಿದ್ದಾರೆ.
ಮೆಸ್ಕಾಂ ಬಗ್ಗೆ ಮೆಚ್ಚುಗೆ
ಅಪಾಯಕಾರಿ ವಿದ್ಯತ್ ಕಂಬಗಳ ಬಗ್ಗೆ ಹಾಗೂ ಅಪಾಯಕಾರಿ ಮರಗಳು ಕಂಬಗಳಿಗೆ ವಾಲಿರುವ ಬಗ್ಗೆ ಮಾಹಿತಿ ದೊರೆತಕೂಡಲೇ ಮೆಸ್ಕಾಂ ಶೀಘ್ರ ಸ್ಪಂದಿಸುತ್ತಿದ್ದು ಇದೀಗ ಹೆಬ್ರಿ ಮೂರು ರಸ್ತೆ ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸಿದ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.