ಹೆಬ್ರಿ: ಭ್ರಷ್ಟ ಮುಖ್ಯಮಂತ್ರಿ, ಅತ್ಯಾಚಾರಿ ವೇಣುಗೋಪಾಲರಿರುವ ಕಾಂಗ್ರೆಸ್‌ನ ಸರಕಾರದ ಆಡಳಿತ ಕಂಡುರಾಜ್ಯದ ಪ್ರತಿಯೊಬ್ಬ ಜನತೆ ಬೇಸತ್ತಿದ್ದಾರೆ. ನೆಮ್ಮದಿಯ ಜೀವನ ನೀಡಲು ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಗೆ ಈಗಾಗಲೇ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನ ಪರಿವರ್ತನೆ ಬಯಸುತ್ತಿದ್ದಾರೆ ಎಂಬುದಕ್ಕೆ ಬಿಜೆಪಿಯ ಶಕ್ತಿಕೇಂದ್ರ ಹೆಬ್ರಿಯಲ್ಲಿನ ಜನಸಾಗರವೇ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ರವಿವಾರ ನವಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಹೆಬ್ರಿಗೆಆಗಮಿಸಿದ ಪರಿವರ್ತನಾ ಯಾತ್ರೆಯ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದ ಶಾಸಕರಿಗೆ ಮೇಲ್ಪಂಕ್ತಿ ಹಾಕಿದ ಶಾಸಕ ಎಂದರೆ ಅದು ಸುನಿಲ್ ಕುಮಾರ್. ಒಬ್ಬ ಆದರ್ಶ ಶಾಸಕ ಹೇಗೆ ಇರಬೇಕು ಹೇಗೆ ಕೆಲಸ ಮಾಡ ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಬೇಕು ಅದನ್ನು ಸಾಕಾರಗೊಳಿಸಲು ನಿಮ್ಮ ಆಶೀರ್ವಾದ ಬೇಕು ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.
ಕಾಂಗ್ರೆಸ್ ಧೂಳೀಪಟ ಕಾಂಗ್ರೆಸ್ ಭದ್ರಕೋಟೆಯಾಗಿರುವ ಹೆಬ್ರಿಯಲ್ಲಿ ಇಂದು ವ್ಯಾಪಕ ಜನರು ಸೇರಿದ್ದು, ಕಾಂಗ್ರೆಸ್ ಧೂಳೀಪಟ ವಾಗಿದೆ. ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಕೂಡಲೇ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಸಂಸದರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಕ್ಯಾ| ಗಣೇಶ್ ಕಾರ್ಣಿಕ್, ಭಾರತಿ ಶೆಟ್ಟಿ, ತೇಜಸ್ವಿನಿ ಗೌಡ, ರವಿಕುಮಾರ್, ನಳಿನ್ ಕುಮಾರ್ ಕಟೀಲು, ಮಟ್ಟಾರು ರತ್ನಾಕರ ಹೆಗ್ಡೆ,ಬೋಳ ಪ್ರಭಾಕರ ಕಾಮತ್, ಜಯ ಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಲಾಲಾಜಿ ಮೆಂಡನ್, ಎಂ.ಕೆ. ವಿಜಯಕುಮಾರ್, ದಿನಕರ ಬಾಬು ಮೊದಲಾದವರು ಉಪಸ್ಥಿತರಿ ದ್ದರು. ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ ಪ್ರಸ್ತಾವನೆಗೈದರು. ರವೀಂದ್ರ ಕುಮಾರ್ ಸ್ವಾಗತಿಸಿ, ರೇಷ್ಮಾ ಕಾರ್ಯಕ್ರಮ ನಿರೂಪಿಸಿ, ಡಿ.ಜಿ. ರಾಘವೇಂದ್ರ ವಂದಿಸಿದರು.
ಅಪಾರ ಜನಸಾಗರ
ಪರಿವರ್ತನಾ ಯಾತ್ರೆ ಸಭೆಯಲ್ಲಿ ಜನಸಾಗರವೇ ನೆರೆದಿತ್ತು. ಸಾವಿರಾರು ಬಿಜೆಪಿ ಕಾರ್ಯಕರ್ತರು ಬೈಕ್ ವಾಹನ ರ್ಯಾಲಿ ಮೂಲಕ ಹೆಬ್ರಿಗೆ ಆಗಮಿಸಿದ ಪರಿವರ್ತನಾ ಯಾತ್ರೆಯ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು.