Advertisement

ಅಮೃತ ಮಹೋತ್ಸವದ ನೆನಪಿಗೆ ಅಮೃತ ನಿವಾಸ 

11:24 PM Aug 11, 2022 | Team Udayavani |

ಹೆಬ್ರಿ: ನಾಡ್ಪಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೆಂಗಮಾರಿನಲ್ಲಿ 50 ವರ್ಷಗಳಿಂದ ಗುಡಿಸಲಿನಲ್ಲಿ ವಾಸವಾಗಿದ್ದ ನಾರಾಯಣ ಗೌಡ ಅವರಿಗೆ ಹೆಬ್ರಿಯ ಎಎನ್‌ಎಫ್‌ ತಂಡದವರು ಶ್ರಮದಾನ ಜತೆಗೆ ತಾವು ದೇಣಿಗೆಯಾಗಿ ಸಂಗ್ರಹಿ ಸಿದ ಹಣದಿಂದ ಮನೆ ನಿರ್ಮಿಸಿಕೊಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಕೇವಲ ನಾಲ್ಕು ದಿನಗಳಲ್ಲಿ ನಕ್ಸಲ್‌ ನಿಗ್ರಹ ಪಡೆಯ ಸಿಬಂದಿ ಸುಮಾರು 55 ಸಾವಿರ ರೂ.ಗಳನ್ನು ಸಂಗ್ರಹಿಸಿದ್ದಲ್ಲದೆ ಸ್ವತಃ ಶ್ರಮದಾನದ ಮೂಲಕ ಮನೆ ನಿರ್ಮಿಸಿಕೊಟ್ಟಿದ್ದಾರೆ. ಮನೆಗೆ ಬೇಕಾದ ಎಲ್ಲ ಪರಿಕರಗಳನ್ನು ಒದಗಿಸಿದ್ದಾರೆ. ಆ. 11ರಂದು ಕಾರ್ಕಳ ಎಎನ್‌ಎಫ್‌ ಅಧೀಕ್ಷಕ ಪ್ರಕಾಶ್‌ ಅವರು ಸುಮಾರು 2 ಕಿ.ಮೀ. ನಡೆದು ತೆರಳಿ ನಾರಾಯಣ ಗೌಡ ಅವರಿಗೆ ಹೊಸ ಬಟ್ಟೆ ನೀಡುವ ಮೂಲಕ ಮನೆಯನ್ನು ಹಸ್ತಾಂತರಿಸಿದರು.

ಹೆಬ್ರಿ ಠಾಣಾಧಿಕಾರಿ ಸುದರ್ಶನ್‌ ದೊಡ್ಮನಿ, ಎಎನ್‌ಎಫ್‌ ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.

ಅಮೃತ ನಿವಾಸ’:

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಗ್ರಾಮೀಣ ಪ್ರದೇಶವಾದ ತೆಂಕಮಾರಿನ ರಸ್ತೆ ಮತ್ತು ಮೂಲ ಸೌಲಭ್ಯಗಳಿಲ್ಲದ ಪ್ರದೇಶದಲ್ಲಿ ನಿರ್ಮಿಸಿಕೊಟ್ಟ ಈ ಮನೆಗೆ “ಅಮೃತ ನಿವಾಸ’ ಎಂದು ಹೆಸರಿಡಲಾಗಿದೆ. ಎಎನ್‌ಎಫ್‌ ಸಿಬಂದಿ ಸೇರಿ ಮನೆಗೆ ಬೇಕಾದ ಪಾತ್ರೆಗಳು, ಬಟ್ಟೆಬರೆ ಮತ್ತು ಮನೆ ನಿರ್ಮಾಣಕ್ಕೆ ಸಹಕರಿಸಿದ ಸ್ಥಳೀಯರಿಗೆ ಹೊಸ ವಸ್ತ್ರ ನೀಡುವ ಮೂಲಕ ಅಮೃತ ನಿವಾಸವನ್ನು ಹಸ್ತಾಂತರಿಸಲಾಯಿತು. ಅಲ್ಲದೆ ಮನೆ ಮನೆಯಲ್ಲಿ ತಿರಂಗಾ ಕಾರ್ಯಕ್ರಮದ ಅಂಗವಾಗಿ ಧ್ವಜವನ್ನು ನೀಡಿ ಮನೆಯಲ್ಲಿ ಹಾರಿಸುವಂತೆ ಎಎನ್‌ಎಫ್ ಸಿಬಂದಿ ಸೂಚನೆ ನೀಡಿದರು.

Advertisement

ಮಾನವೀಯತೆ ಮೆರೆದ ಎಎನ್‌ಎಫ್‌ ತಂಡ:

50 ವರ್ಷಗಳಿಂದ ಮನೆಯಿಲ್ಲದೆ, ಸರಕಾರ ಮತ್ತು ಪಂಚಾಯತ್‌ನ ಯಾವುದೇ ಸೌಲಭ್ಯಗಳಿಂದ ವಂಚಿತವಾಗಿ ವಾಸವಾಗಿದ್ದ ಸುಮಾರು 73 ವರ್ಷ ವಯಸ್ಸಿನ ನಾರಾಯಣ ಗೌಡ ಅವರ ಪರಿಸ್ಥಿತಿಯನ್ನು ಗಮನಿಸಿದ ಎಎನ್‌ಎಫ್‌ ತಂಡದ ಮುಖ್ಯಸ್ಥ ಸತೀಶ್‌ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ಮತ್ತು ಗಣಪತಿ ಅವರು ತಮ್ಮ ತಂಡದೊಂದಿಗೆ ಭೇಟಿ ನೀಡಿ, ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.

ರಸ್ತೆಯಿಲ್ಲ:

ಗ್ರಾಮೀಣ ಪ್ರದೇಶವಾದ ತೆಂಗಮಾರಿಗೆ ಸರಿಯಾದ ರಸ್ತೆ ಇಲ್ಲ. ಸುಮಾರು 2 ಕಿ.ಮೀ. ನಡೆದೇ ಸಾಗಬೇಕು. ಎಎನ್‌ಎಫ್‌ ತಂಡ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ತಲೆಹೊರೆ ಯಲ್ಲಿ ಹೊತ್ತೂಯ್ದು ಸ್ಥಳೀಯರ ನೆರವಿನೊಂದಿಗೆ ತಾವೇ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

20 ಸಾವಿರ ರೂ. ಬಹುಮಾನ ಘೋಷಣೆ:

ಹೆಬ್ರಿ ಎಎನ್‌ಎಫ್‌ ತಂಡದ ಈ ಕಾರ್ಯವನ್ನು ಮೆಚ್ಚಿ ಎಎನ್‌ಎಫ್‌ ಪೊಲೀಸ್‌ ಅಧೀಕ್ಷಕ ಪ್ರಕಾಶ್‌ ಇಲಾಖೆಯಿಂದ 20 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

 

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next