ಬೆಂಗಳೂರು: ರಾಜ್ಯದಲ್ಲಿ ಈ ವರ್ಷದ ಬೇಸಿಗೆಯಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಮೀರಿದರೆ “ಬಿಸಿಗಾಳಿ’ ಬೀಸುವ ಅಪಾಯವಿದೆ. ಹೈದರಾಬಾದ್ ಕರ್ನಾಟಕದ ಪ್ರದೇಶದಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ಉಷ್ಣಾಂಶ ದಾಖಲಾದರೆ ಬಿಸಿಗಾಳಿಯ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿದೆ.
ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ದೇಶದಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಗಳ ಬಗ್ಗೆ ಭಾರತೀಯ ಹವಾಮಾನ ಇಲಾಖೆಯೂ ಮಾಹಿತಿ ನೀಡಿದ್ದು ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಬಾರಿ ಬಿಸಿಗಾಳಿಯ ಸಂಭವ ಹೆಚ್ಚಾಗಿದೆ.
ಈ ಭಾಗಕ್ಕೆ ಹೊಂದಿಕೊಂಡಿರುವ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡು ಪ್ರದೇಶದಲ್ಲಿ ವಾತಾವರಣದ ವೈಪರೀತ್ಯದಿಂದ ಉಂಟಾಗುವ ಬಿಸಿಗಾಳಿ ಎದುರಿಸಲು ಮುಂಜಾಗೃತಾ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದೆ. ರಾಜ್ಯದ ವಿಪತ್ತು ನಿರ್ವಹಣಾ ಕೇಂದ್ರವು ಬಿಸಿಗಾಳಿ ಪರಿಸ್ಥಿತಿ ನಿಭಾಯಿಸಲು ಕಾರ್ಯಯೋಜನೆ ಸಹ ಸಿದ್ಧಪಡಿಸಿದ್ದು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ಬಿಸಿಗಾಳಿಯಿಂದ ಸಾರ್ವಜನಿಕರಿಗೆ ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೂ ಸಂಚಕಾರ ಬರಲಿದೆ. ಪಕ್ಕದ ಆಂಧ್ರದಲ್ಲಿ 2014 ರಿಂದ 2017ರ ಅವಧಿಯಲ್ಲಿ 2,276ಕ್ಕಿಂತ ಹೆಚ್ಚಿನ ಜನ ಮೃತಪಟ್ಟಿರುವುದು ಬಿಸಿಗಾಳಿಯ ತೀವ್ರತೆ ತೋರಿಸುತ್ತದೆ. ಪ್ರಮುಖವಾಗಿ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ಕಡು ಬಡವರು, ಪ್ರಾಣಿ-ಪಕ್ಷಿಗಳಿಗೆ ಹೆಚ್ಚಿನ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.
ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಿಸಿಗಾಳಿ ಬೀಸಿದಂತೆ ರಾಜ್ಯದ ಹೈ.ಕ.ಭಾಗದ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ ಮತ್ತು ಉತ್ತರ ಒಳನಾಡಿನಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಉಷ್ಣಾಂಶ ಅಧಿಕವಾದರೆ ಬಿಸಿಗಾಳಿ ಬೀಸುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಕಾರ್ಯಯೋಜನೆ ತಯಾರಿಸಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ “ಉದಯವಾಣಿ’ ಗೆ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮ: ತಾಪಮಾನ 40 ಡಿ.ಸೆ.ಗಿಂತ ಅಧಿಕವಾಗಿದ್ದಲ್ಲಿ ಬೆಳಗ್ಗೆ 11ರಿಂದ ಸಂಜೆ 4 ಗಂಟೆಯ ತನಕ ಜನರು ಮನೆಯಿಂದ ಹೊರಗಡೆ ಬಿಸಿಲಿನಲ್ಲಿ ಓಡಾಡದಂತೆ ಎಚ್ಚರಿಕೆ ವಹಿಸಬೇಕೆಂದು ಕಾರ್ಯಯೋಜನೆಯಲ್ಲಿ ಸೂಚಿಸಲಾಗಿದೆ.
ಉತ್ತರ ಒಳನಾಡಿನಲ್ಲಿ ಸರ್ಕಾರಿ ಕಚೇರಿ, ಶಾಲೆ ಕಾಲೇಜು ಅವಧಿ ಬದಲಾವಣೆ ಜತೆಗೆ ಉದ್ಯೋಗ ಖಾತರಿ ಯೋಜನೆ ಕೆಲಸದ ಅವಧಿ ಕಡಿತಗೊಳಿಸಬೇಕು. ಬಿಸಿಲಿನ ಅವಧಿ ಹೊರತುಪಡಿಸಿ ತಂಪು ಹೊತ್ತಿನಲ್ಲಿ ಕೆಲಸದ ಸಮಯ ನಿಗದಿಪಡಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಕಾರ್ಯಯೋಜನೆಯಲ್ಲಿ ತಿಳಿಸಲಾಗಿದೆ.