ಕುಳಗೇರಿ ಕ್ರಾಸ್ : ಬಿರು ಬೇಸಿಗೆಯಲ್ಲಿ ಬಿರುಗಾಳಿ ಸಮೇತ ಗುಡುಗು-ಸಿಡಿಲು ಸೇರಿದಂತೆ ದಿಢೀರ್ ಆಲಿಕಲ್ಲು ಮಳೆ ಸುರಿದ ಪರಿಣಾಮ ಸುಮಾರು ಗ್ರಾಮಗಳಲ್ಲಿ ಮನೆಗಳ ಛಾವಣಿ ತಗಡು ಶೀಟುಗಳು ಗಾಳಿಗೆ ಹಾರಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಗ್ರಾಮದಲ್ಲಿನ ಚರಂಡಿಗಳು ತುಂಬಿ ಹರಿದಿದ್ದರಿಂದ ಕೆಲ ಕಡೆ ಚರಂಡಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಯಿತು ಕೆಲವರು ಚರಂಡಿ ಸ್ವಚ್ಛ ಗೊಳಿಸಿ ನೀರು ಹರಿಸುತ್ತಿರುವ ದೃಶ್ಯ ಕಂಡುಬಂತು. ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಗಳು ಗಾಳಿಗೆ ನೆಲಕ್ಕುರುಳಿದ್ದವು.
ಇನ್ನು ಬಿರುಗಾಳಿ ಬಿಸಿದ್ದರಿಂದ ಗ್ರಾಮದಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳ ಸಲಕರಣೆಗಳು ಗಾಳಿಗೆ ಹಾರಿಹೋಗಿದ್ದವು. ವ್ಯಾಪಾರ ವಹಿವಾಟು ನಿಂತು ಎರಡು ಗಂಟೆಗೂ ಹೆಚ್ಚುಕಾಲ ಅಂಗಡಿಗಳ ಬಾಗಿಲು ಮುಚ್ಚಿದ್ದವು. ಅಲ್ಲಲ್ಲಿ ಗಿಡ ಮರಗಳು ಧರೆಗುರುಳಿದ್ದು ವಿದ್ಯುತ್ ಕಂಬಗಳು ಸಹ ನೆಲಕಚ್ಚಿದ ವರದಿಯಾಗಿದೆ. ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಮಳೆ-ಗಾಳಿಯಿಂದ ತಾಸಿಗೂ ಹೆಚ್ಚುಕಾಲ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಬಿರುಗಾಳಿಯಿಂದ ಹೊಲ-ಗದ್ದೆ ಅಂಚಿನಲ್ಲಿರುವ ಮುಳ್ಳಿನ ಕಂಠಿಗಳು ಹೆದ್ದಾರಿ ಮಧ್ಯೆ ಬಿದ್ದು ಕೆಲ ಸಮಯ ಸಂಚಾರಕ್ಕೆ ತೊಂದರೆಯಾಯಿತು.
ಇದನ್ನೂ ಓದಿ : ಅದ್ದೂರಿಯಾಗಿ ನೆರವೇರಿದ ಹನುಮಂತ ದೇವರ ರಥೋತ್ಸವ, ಮುಸ್ಲಿಂ ಕುಟುಂಬಕ್ಕೆ ವಿಶೇಷ ಆಹ್ವಾನ
ಖಾನಾಪೂರ ಎಸ್ ಕೆ ಗ್ರಾಮದಲ್ಲಿನ ಸುಮಾರು ಏಳೆಂಟು ಮನೆಗಳು ಸೇರಿದಂತೆ ಜಾನುವಾರುಗಳ ಶೆಡ್ಡಿನ ಛಾವಣಿಯ ತಗಡುಗಳು ಗಾಳಿಗೆ ಹಾರಿದ್ದು ರೈತಾಪಿ ವರ್ಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಸದ್ಯ ಹಾನಿಯಾದ ಗ್ರಾಮಗಳಿಗೆ ಯಾವ ಅಧಿಕಾರಿ ವರ್ಗದವರು ಭೇಟಿ ನೀಡಿಲ್ಲವೆಂದು ತಿಳಿದು ಬಂದಿದ್ದು ನಾಳೆ ಭೇಟಿ ಕೊಟ್ಟು ರೈತರ ಸಮಸ್ಯೆ ಆಲಿಸುವರೇ ಕಾದುನೋಡಬೇಕಿದೆ.