Advertisement

ಚಾರ್ಮಾಡಿ ಘಾಟಿಯಲ್ಲಿ ಇಂದಿನಿಂದ ಘನವಾಹನ ನಿರ್ಬಂಧ: ಖಾದರ್‌

02:10 AM Aug 18, 2018 | Karthik A |

ಸುಬ್ರಹ್ಮಣ್ಯ: ಚಾರ್ಮಾಡಿ ರಸ್ತೆಯ ಒತ್ತಡ ತಗ್ಗಿಸಲು ಆ. 18ರಿಂದ ಘನ ವಾಹನ ಸಂಚಾರ ತಡೆ ಹಿಡಿಯುವುದಾಗಿ ಸಚಿವ ಯು.ಟಿ. ಖಾದರ್‌ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ನೆರೆ ಸಂತ್ರಸ್ತ ಸ್ಥಳಗಳಿಗೆ ಭೇಟಿ ನೀಡಿ, ಪತ್ರಕರ್ತರ ಜತೆ ಮಾತನಾಡಿದ ಅವರು, ಸದ್ಯ ಚಾರ್ಮಾಡಿ ಘಾಟಿ ರಸ್ತೆ ಮಾತ್ರ ಬಳಕೆಯಲ್ಲಿದೆ. ಗುಡ್ಡ ಜರಿತ ಹತೋಟಿಗೆ ಬರುವ ತನಕ ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನಗಳಿಗೆ ಅವಕಾಶ ನೀಡಲಾಗುವುದೆಂದರು.

Advertisement

ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಮಳೆಯಿಂದ ಪ್ರಕೃತಿ ವಿಕೋಪ ಸಂಭವಿಸಿದೆ. ಸಂರಕ್ಷಣೆ ಮತ್ತು ನಿಯಂತ್ರಣಕ್ಕೆ ಮೊದಲ ಆದ್ಯತೆ. ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎ.ಸಿ. ಮಟ್ಟದ ಅಧಿಕಾರಿಗಳನ್ನು ನೋಡೆಲ್‌ ಅಧಿಕಾರಿಯಾಗಿ ಇಟ್ಟುಕೊಂಡು ತಹಶೀಲ್ದಾರ್‌ ಮಾರ್ಗದರ್ಶನದಲ್ಲಿ ನಿಯಂತ್ರಿಸಲಾಗುತ್ತಿದೆ. ಮಳೆ ಸಂತ್ರಸ್ತರಿಗೆ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಮಳೆ ಕಾರಣಕ್ಕೆ 12 ಮಂದಿ ಮೃತಪಟ್ಟಿದ್ದಾರೆ. ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದರು.

ಕಸ್ತೂರಿರಂಗನ್‌ ತಿರಸ್ಕರಿಸಿದ್ದೇವೆ
ರಾಜ್ಯದಲ್ಲಿ ಸಾಕಷ್ಟು ಕಾಡು ಇದೆ. ಡಾ| ಕಸ್ತೂರಿ ರಂಗನ್‌ ವರದಿ ಜಾರಿಯ ಅಗತ್ಯವಿಲ್ಲ. ಹಿಂದಿನ ಅರಣ್ಯ ಸಚಿವರ ಅವಧಿಯಲ್ಲಿ ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕರಿಸಿ ಕೇಂದ್ರಕ್ಕೆ ಅಭಿಪ್ರಾಯ ಕಳುಹಿಸಲಾಗಿತ್ತು.  ಕೇಂದ್ರ ಮೂರು ಬಾರಿ ಅಭಿಪ್ರಾಯ ಕೇಳುವ ಮೂಲಕ ರಾಜ್ಯದ ಮೇಲೆ ಒತ್ತಡ ತರುತ್ತಿದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದರು. ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಆಶೀರ್ವಾದ ಪಡೆದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಚಿವರನ್ನು ಶಾಲು ಹೊದೆಸಿ ಸಮ್ಮಾನಿಸಿದರು. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಪುತ್ತೂರು ಎ.ಸಿ. ಕೃಷ್ಣಮೂರ್ತಿ, ತಹಶೀಲ್ದಾರ್‌ ಕುಂಞಮ್ಮ, ದೇಗುಲದ ಇಒ ಎಚ್‌.ಎಂ. ರವೀಂದ್ರಉಪಸ್ಥಿತರಿದ್ದರು. 

ಜಿಲ್ಲಾಧಿಕಾರಿ ಆದೇಶ
ಸಚಿವರ ಸೂಚನೆಯಂತೆ ಚಾರ್ಮಾಡಿ ಘಾಟಿಯಲ್ಲಿ ಬಸ್‌ ಮತ್ತು ಸಾಮಾನ್ಯ ಲಾರಿಗಳನ್ನು ಹೊರತುಪಡಿಸಿ ಇತರ ಎಲ್ಲ ರೀತಿಯ ಘನ ವಾಹನಗಳ ಸಂಚಾರವನ್ನು ಆ.17ರಿಂದ ಮುಂದಿನ ಸೂಚನೆಯವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಬುಲೆಟ್‌ ಟ್ಯಾಂಕರ್‌, ಕಂಟೇನರ್‌ ಲಾರಿ, ಮಲ್ಟಿ ಆ್ಯಕ್ಸೆಲ್‌ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

Advertisement

ಕಂಟೈನರ್‌ ಬಾಕಿ, ಸಂಚಾರಕ್ಕೆ ಅಡ್ಡಿ
ಬೆಳ್ತಂಗಡಿ:
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಶುಕ್ರವಾರ ಬಣಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ 10ನೇ ತಿರುವಿನಲ್ಲಿ ಕಂಟೈನರ್‌ ಒಂದು ಸಿಲುಕಿ ಟ್ರಾಫಿಕ್‌ ಜ್ಯಾಮ್‌ ಸಂಭವಿಸಿತ್ತು. ಹೆದ್ದಾರಿ ಇಲಾಖೆ ಶುಕ್ರವಾರ ರಸ್ತೆಯ ತಾತ್ಕಾಲಿಕ ದುರಸ್ತಿ ಮಾಡಿದೆ. 5ನೇ ತಿರುವಿನಲ್ಲಿ ರಸ್ತೆ ಬದಿ ಕೊಂಚ ಕುಸಿದಿದ್ದು, ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ರಸ್ತೆಗೆ ನೀರು ಬಾರದಂತೆ ಆ. 16ರಂದು ಹಸನಬ್ಬ ಚಾರ್ಮಾಡಿ ಚರಂಡಿ ದುರಸ್ತಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next