ಬಂಗಾರಪೇಟೆ: ಹಣ್ಣು ಮತ್ತು ಹೂವಿನ ಬೆಲೆ ಹೆಚ್ಚಿದ್ದರೂ ತಾಲೂಕಿನಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ತುಂತುರು ಮಳೆಯಲ್ಲೂ ಮಹಿಳೆಯರು ಗುರುವಾರ ಹಬ್ಬದ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಪಟ್ಟಣದಲ್ಲಿನ ಮಾರುಕಟ್ಟೆಯಲ್ಲಿ ಕಂಡು ಬಂತು.
ಪಟ್ಟಣದ ಕುವೆಂಪು ವೃತ್ತ, ಬಜಾರ್ ಮುಖ್ಯ ರಸ್ತೆಯಲ್ಲಿ ಎಲ್ಲಿ ನೋಡಿದರೂ ವ್ಯಾಪಾರಿಗಳು, ಗ್ರಾಹಕರೇ ತುಂಬಿದ್ದರು. ರೈತರು ವರಮಹಾಲಕ್ಷ್ಮೀ ಮೂರ್ತಿಯನ್ನು ಅಲಂಕರಿಸಲು ಬೇಕಾದ ಸಣ್ಣ ಬಾಳೆ ಕಂದು ತಂದು ಮಾರಾಟ ಮಾಡಿದರೆ, ಹೂ, ಹಣ್ಣು ವ್ಯಾಪಾರಿಗಳು ರಸ್ತೆ ಬದಿಯಲ್ಲಿ ನಿಂತು ಮಾರಾಟ ಮಾಡುತ್ತಿದ್ದರು.
ಪಟ್ಟಣದ ಆಸ್ಪತ್ರೆಯ ಸರ್ಕಲ್ನಿಂದ ಕುವೆಂಪು ರಸ್ತೆಯವರೆಗೂ ತಾತ್ಕಾಲಿಕ ಅಂಗಡಿಗಳು ಭಾರೀ ಸಂಖ್ಯೆಯಲ್ಲಿ ತೆರೆದಿದ್ದವು. ಹಣ್ಣು-ಹಂಪಲುಗಳನ್ನು ಖರೀದಿಸಲು ಗ್ರಾಹಕರು ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದರು.
ಕೆಲ ವ್ಯಾಪಾರಸ್ಥರು ತಳ್ಳುವ ಗಾಡಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಹೂ., ಹಣ್ಣು, ಹಬ್ಬದ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಬೇಕರಿಗಳಲ್ಲಿ ಬೆಳಗ್ಗೆಯಿಂದಲೇ ಸಿಹಿ ತಿಂಡಿಗಳ ವ್ಯಾಪಾರ ಭರ್ಜರಿಯಾಗಿ ನಡೆ ಯಿತು. ಗುರುವಾರ ಸಂಜೆ ಮೂರು ಗಂಟೆಗೆ ಆರಂಭವಾದ ಮಳೆ ಸಂಜೆ 6 ಗಂಟೆವರೆಗೂ ಬೀಳುತ್ತಿತ್ತು. ಪಟ್ಟಣದ ತಾಪಂ ಕಚೇರಿ ಎದುರು ಹಣ್ಣು ಹಂಪಲು ಅಂಗಡಿಗಳು ತೆರೆದಿದ್ದರೂ ಅಲ್ಲಿಯೂ ವ್ಯಾಪಾರ ಜೋರಾಗಿಯೇ ಇತ್ತು.
ಹಣ್ಣಿನ ಬೆಲೆ: ಸೇಬಿನ ಕೇಜಿಗೆ 250 ರೂ., ಮೂಸಂಬಿ, ಕಿತ್ತಳೆ 120 ರೂ., ಬಾಳೆಹಣ್ಣು 100 ರೂ., ಚೇಪೆ ಹಣ್ಣು 100 ರೂ., ಮುಸುಕಿನ ಜೋಳ ಕೆ.ಜಿ. 50 ರೂ., ದ್ರಾಕ್ಷಿ 200 ರೂ., ಮಲ್ಲಿಗೆ ಪ್ರತಿ ಕೆ.ಜಿ.ಗೆ 800 ರೂ., ಕನಕಾಂಬರ ಪ್ರತಿ ಕೆ.ಜಿ.ಗೆ 1200 ರೂ., ವರಮಹಾಲಕ್ಷ್ಮೀಗೆ ಬೇಕಾದ ಹಾರದ ಬೆಲೆ 250 ರೂ. ಇತ್ತು.
● ಎಂ.ಸಿ.ಮಂಜುನಾಥ್