ಮಾಲ್ಡೀವ್ಸ್: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ ಬುಧವಾರ(ಜುಲೈ 13) ರಾತ್ರಿ ಮಾಲ್ಡೀವ್ಸ್ ನ ವೆಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕಾರು-ಆಟೋ ಮುಖಾಮುಖಿ ಢಿಕ್ಕಿ: ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ
ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದ್ದ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದ್ದು, ಸಾರ್ವಜನಿಕರ ರಾಜೀನಾಮೆ ಒತ್ತಡ ಹೆಚ್ಚಾದ ನಂತರ ಅಧ್ಯಕ್ಷ ಗೊಟಬಯ ರಾಜಪಕ್ಸ ಲಂಕಾದಿಂದ ಮಾಲ್ಡೀವ್ಸ್ ಗೆ ಪರಾರಿಯಾಗಿದ್ದರು.
ಮೂಲಗಳ ಪ್ರಕಾರ, ರಾಜಪಕ್ಸ ಸಿಂಗಾಪುರಕ್ಕೆ ತೆರಳಿದ ನಂತರ ಶ್ರೀಲಂಕಾ ಸಂಸತ್ ನ ಸ್ಪೀಕರ್ ಗೆ ರಾಜೀನಾಮೆ ಪತ್ರವನ್ನು ರವಾನಿಸಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಏತನ್ಮಧ್ಯೆ ವೆಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಟರ್ಮಿನಲ್ ಬಳಿ ಕಾಯುತ್ತಿದ್ದ ಪತ್ರಕರ್ತರನ್ನು ಭದ್ರತಾ ಅಧಿಕಾರಿಗಳು ಹೊರಗೆ ಕಳುಹಿಸಿರುವುದಾಗಿ ವರದಿ ವಿವರಿಸಿದೆ.
ದ್ವೀಪರಾಷ್ಟ್ರದಿಂದ ಅಧ್ಯಕ್ಷ ಗೊಟಬಯ ರಾಜಪಕ್ಸ ಪರಾರಿಯಾಗಿದ್ದಾರೆಂಬ ಸುದ್ದಿ ಬಹಿರಂಗಗೊಂಡ ನಂತರ ಜನಾಕ್ರೋಶ ಭುಗಿಲೆದ್ದಿತ್ತು. ಈ ನಿಟ್ಟಿನಲ್ಲಿ ಶ್ರೀಲಂಕಾದಲ್ಲಿ ಬುಧವಾರ ತುರ್ತುಸ್ಥಿತಿ ಘೋಷಿಸಲಾಗಿತ್ತು.
ಮಾಲ್ಡೀವ್ಸ್ ಆಕ್ಷೇಪ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಸರ್ಕಾರಿ ಮಟ್ಟದ ಸ್ವಾಗತ ನೀಡಿ, ಆಶ್ರಯ ನೀಡಿದ್ದಕ್ಕೆ ಮಾಲ್ಡೀವ್ಸ್ ನ ನ್ಯಾಷನಲ್ ಪಾರ್ಟಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಕ್ಷದ ನಾಯಕ ದುನ್ಶಾ ಮೌಮೂನ್, ದ್ವೀಪ ರಾಷ್ಟ್ರದ ಜನರ ಭಾವನೆಗಳಿಗೆ ಚ್ಯುತಿ ತಂದಂತೆ ಆಗಿದೆ ಎಂದು ತಿಳಿಸಿದ್ದರು.