ಬೆಳಗಾವಿ: ಕೃಷ್ಣಾ ಮತ್ತು ದೂದಗಂಗಾ ನದಿಗಳಿಂದ 2.16 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿಯ ಮತ್ತೆರಡು ಸೇತುವೆ ಮುಳುಗಡೆಯಾಗಿದೆ.
ದೂದಗಂಗಾ ಮತ್ತು ವೇದಗಂಗಾ ನದಿಯ ಪಾತ್ರದ ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಕರ್ನಾಟಕ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಸದಲಗಾ- ಭೋರಗಾಂವ, ಯಕ್ಸಂಬಾ- ಧಾನವಾಡ ಸೇತುವೆ ಶುಕ್ರವಾರ ಬೆಳಿಗ್ಗೆ ಮುಳುಗಡೆಯಾಗಿ ಸಂಪರ್ಕ ಸ್ಥಗಿತಗೊಂಡಿವೆ.
ಮಹಾರಾಷ್ಟ್ರ ರಾಜಾಪೂರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ 1.78 ಲಕ್ಷ ಕ್ಯೂಸೆಕ್ ನೀರು ಬಂದರೆ ದೂದಗಂಗಾ ನದಿ ಮೂಲಕ 38 ಸಾವಿರ ಕ್ಯೂಸೆಕ್ ನೀರು ಸೇರಿದಂತೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 2.16 ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ.
ಅದರಂತೆ ಸಾವಂತವಾಡಿ ಅರಣ್ಯ ಪ್ರದೇಶದಲ್ಲಿ ಸಹ ಧಾರಾಕಾರ ಮಳೆಯಾಗುತ್ತಿದ್ದು ಘಟಪ್ರಭಾ ನದಿಯ ಮೂಲಕ ಹಿಡಕಲ್ ಜಲಾಶಯಕ್ಕೆ 33 ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದೆ.
ಖಾನಾಪುರ ತಾಲೂಕಿನ ಕಣಕುಂಬಿ ಮತ್ತು ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಸಹ ಭಾರೀ ಮಳೆ ಬೀಳುತ್ತಿದ್ದು ಇದರಿಂದ ಮಲಪ್ರಭಾ ನದಿಯ ಮೂಲಕ ಜಲಾಶಯಕ್ಕೆ 21 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.