ಬೆಳಗಾವಿ : ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಆದರೆ ಸದ್ಯ ಪ್ರವಾಹದ ಸ್ಥಿತಿ ಇಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದರು. ಪ್ರವಾಹ ಸಿದ್ಧತೆ ಕುರಿತು ಬೆಳಗಾವಿ ಸೇರಿದಂತೆ ರಾಜ್ಯದ 20 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಶನಿವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು ಎರಡು ದಿನಗಳಿಂದ ಹೆಚ್ಚಿನ ಮಳೆಯಾಗಿದೆ. ಆದರೆ ಪ್ರವಾಹ ಸ್ಥಿತಿ ಉದ್ಭವಿಸಿಲ್ಲ. ವೇದಗಂಗಾ ನದಿ ಮಾತ್ರ ಸ್ವಲ್ಪಮಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ನಾಲ್ಕು ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ಎರಡು ವರ್ಷಗಳ ಅನುಭವದ ಆಧಾರದ ಮೇಲೆ 208 ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚಿಸಲಾಗಿರುವ ಪ್ರವಾಹ ನಿರ್ವಹಣಾ ತಂಡಗಳ ಸದಸ್ಯರಿಗೆ ಈಗಾಗಲೇ ಅಗತ್ಯ ತರಬೇತಿ ನೀಡಲಾಗಿದೆ. ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
26 ಬೋಟ್ ಗಳು ಲಭ್ಯವಿದ್ದು, ನದಿತೀರದ ಗ್ರಾಮಗಳಲ್ಲಿ ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಲು 2 ಎಸ್.ಡಿ.ಆರ್. ಎಫ್. ಹಾಗೂ ಒಂದು ಎನ್.ಡಿ.ಆರ್.ಎಫ್. ತಂಡಗಳು ಜಿಲ್ಲೆಯಲ್ಲಿ ಬೀಡು ಬಿಟ್ಟಿವೆ.
ಕಾಳಜಿ ಕೇಂದ್ರದ ಸಮೀಪದಲ್ಲಿ 230 ಜಾನುವಾರು ಶಿಬಿರಗಳನ್ನು ಗುರುತಿಸಲಾಗಿದೆ. ಸಾಕಷ್ಟು ಮೇವು ದಾಸ್ತಾನು ಇದೆ ಎಂದರು.
ಜಿಲ್ಲಾಡಳಿತದ
ಪಿಡಿ ಖಾತೆ 92 ಕೋಟಿ ರೂಪಾಯಿ ಲಭ್ಯವಿದ್ದು, ಪ್ರವಾಹ ಮತ್ತಿತರ ತುರ್ತು ಪರಿಸ್ಥಿತಿ ನಿರ್ವಹಣೆಗೆ ಯಾವುದೇ ರೀತಿಯ ಹಣಕಾಸಿನ ತೊಂದರೆಗಳು ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕಂದಾಯ ಇಲಾಖೆಯ ಸಚಿವ ಆರ್.ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಉಪಸ್ಥಿತರಿದ್ದರು.
ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ನಗರ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ್ ಎಚ್.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.