ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ಸುತ್ತ ಮುತ್ತಲಿನ ಭಾಗದಲ್ಲಿ ಭಾರ ಮಳೆ ಸುರಿಯುತ್ತಿದ್ದು, ತೇರದಾಳ ಸೇರಿದಂತೆ ರಬಕವಿ ಬನಹಟ್ಟಿ ತಾಲೂಕಿನಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್ ಎಸ್.ಬಿ.ಇಂಗಳೆ ತಿಳಿಸಿದರು.
ಕುಲಹಳ್ಳಿಯಲ್ಲಿ 4, ರಬಕವಿಯಲ್ಲಿ 3, ಬನಹಟ್ಟಿಯಲ್ಲಿ 3, ತೇರದಾಳ, ಹನಗಂಡಿ, ಯರಗಟ್ಟಿ, ಚಿಮ್ಮಡ, ಹಳಿಂಗಳಿ ತಲಾ 2, ಮದಭಾವಿ, ಮಾರಾಪುರ, ಹೊಸೂರ, ಜಗದಾಳ, ಗೊಲಭಾವಿ, ಒಂದೊಂದು ಮನೆಗಳು ಹಾನಿಗೆ ಒಳಗಾಗಿವೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ತಹಶೀಲ್ದಾರ್ ಎಸ್.ಬಿ.ಇಂಗಳೆ ತಿಳಿಸಿದರು.
ತಾಲೂಕಿನ ಬನಹಟ್ಟಿಯ ಸೋಮವಾರ ಪೇಟೆಯಲ್ಲಿರುವ ಶೋಭಾ ಶ್ರೀಶೈಲಿ ಎಂಬ ಮಹಿಳೆಯು ಅಡುಗೆ ಮನೆಯಲ್ಲಿ ಕೆಲಸ ಮಾಡುವ ಸಂದರ್ಭ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಹಲವೆಡೆ ಮನೆಯಲ್ಲಿರುವಾಗಲೇ ಗೋಡೆ ಸೇರಿದಂತೆ ಸಂಪೂರ್ಣ ಮನೆ ಕುಸಿದು ಬಿದ್ದಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದ್ದ ಮನೆಯನ್ನೇ ಕಳೆದುಕೊಂಡು ಬೀದಿಗೆ ಬಂದ ಕುಟುಂಬಸ್ಥರು ದಿಕ್ಕು ತೋಚದೆ ಮಳೆಯಲ್ಲೇ ಜೀವನ ಸಾಗಿಸುವಂತಾಗಿದ್ದು, ಸರ್ಕಾರದ ಅನುದಾನಕ್ಕೆ ಕಾಯುವಂತಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳಾದ ಸದಾಶಿವ ಕುಂಬಾರ, ಪ್ರವೀಣ ಬಾರಾಟಕ್ಕೆ ಭೆಟ್ಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಲಲಿತ್ ಮೋದಿ – ಸುಶ್ಮಿತಾ ಸೇನ್ ಬ್ರೇಕಪ್? ವೈರಲ್ ಆಯಿತು ಇನ್ಸ್ಟಾ ಬಯೋ, ಪ್ರೊಫೈಲ್
ಎಡಬಿಡದೆ ಸುರಿಯುತ್ತಿರುವ ಮಳೆಗೆ ಕೆರೆ ಕುಂಟೆ ತುಂಬಿದ್ದು, ಮರೆಯಾಗಿದ್ದ ನದಿಯ ಕಾಲುವೆಗಳು ಉಕ್ಕಿ ಹರಿಯುತ್ತಿವೆ. ಮಲೆ ನೀರು ಗ್ರಾಮಗಳಿಗೆ ನುಗ್ಗುವ ಭೀತಿಯಲ್ಲಿ ಜನಸಾಮಾನ್ಯರು ಭಯ ಪಡುವಂತಾಗಿದೆ. ಇನ್ನೊಂದೆಡೆ, ಮನೆಯನ್ನು ಕಳೆದುಕೊಂಡ ಕುಟುಂಬಸ್ಥರು ಮಳೆಯಲ್ಲಿ ನಿಂತು ಕಣ್ಣೀರುವಂತಾಗಿದೆ.