ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದು ಇದರಿಂದ ಕೃಷ್ಣಾ ಘಟಪ್ರಭಾ ಮತ್ತು ದೂಧ್ ಗಂಗಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಮತ್ತೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕೃಷ್ಣಾ ನದಿಯ ಒಳಹರಿವಿನ ಪ್ರಮಾಣದಲ್ಲಿ ಒಂದು ಲಕ್ಷ ಕ್ಯೂಸೆಕ್ಸ್ ದಾಟಿದ್ದು ನದಿ ತೀರದ ಗ್ರಾಮಗಳಲ್ಲಿ ಇನ್ನೂ ಪ್ರವಾಹದ ಆತಂಕ ಮನೆ ಮಾಡಿದೆ.
ಈಗ ಲಭ್ಯವಾದ ಮಾಹಿತಿಯಂತೆ ಮಹಾರಾಷ್ಟ್ರದ ರಾಜಾಪುರ ಬಳಿ ಕೃಷ್ಣಾ ನದಿಗೆ ಒಂದು ಲಕ್ಷ ಮತ್ತು ದೂಧ್ ಗಂಗಾ ನದಿಯಿಂದ 26 ಸಾವಿರ ಕ್ಯೂಸೆಕ್ಸ್ ಸೇರಿದಂತೆ, ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 1.26 ಲಕ್ಷ ಕ್ಯೂಸೆಕ್ಸ್ ನೀರು ಬರುತ್ತಿದೆ.
ಅದೇ ರೀತಿ ಮಹಾರಾಷ್ಟ್ರದ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು ಇದರಿಂದ ಘಟಪ್ರಭಾ ನದಿಯ ಮೂಲಕ ಹಿಡಕಲ್ ಜಲಾಶಯಕ್ಕೆ 24 ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದೆ.
ಹಿಡಕಲ್ ಜಲಾಶಯ ಭರ್ತಿಯಾಗಲು ಇನ್ನು ಒಂದು ಅಡಿ ಮಾತ್ರ ಬಾಕಿ ಇದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ.
ಖಾನಾಪುರ ತಾಲೂಕಿನ ಕಣಕುಂಬಿ ಮತ್ತು ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ನಿರಂತರ ಮಳೆ ಬೀಳುತ್ತಿದ್ದು ಇದರಿಂದ ಮಲಪ್ರಭಾ ನದಿಯ ಮೂಲಕ ಜಲಾಶಯಕ್ಕೆ 18 ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದೆ.
ಜಲಾಶಯ ಪೂರ್ಣವಾಗಿ ತುಂಬಿರುವದರಿಂದ ಎಲ್ಲ ನಾಲ್ಕು ಗೇಟ್ ಗಳ ಮೂಲಕ 16 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.