Advertisement

Kalaburagi ಜಿಲ್ಲೆಯಲ್ಲಿ ಧಾರಾಕಾರ ಮಳೆ; ಸಂತಸಗೊಂಡ ರೈತರು

02:30 PM Sep 03, 2023 | Team Udayavani |

ಕಲಬುರಗಿ: ಮೇಲಿಂದ ಮೇಲೆ ಕಣ್ಣು ಮುಚ್ಚಾಲೆ ಆಡುತ್ತಿದ್ದ ಮಳೆ ಅಂತೂ ಇಂತೂ ಶನಿವಾರ ಸಂಜೆಯಿಂದ ಧಾರಾಕಾರವಾಗಿ ಸುರಿಯುತ್ತಿದೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇ ಸಣ್ಣದಾಗಿ ಸುರಿಯುತ್ತಿದ್ದ ಮಳೆ 9 ರಿಂದ 11 ಗಂಟೆಯವೆರೆಗೆ ಧಾರಾಕಾರವಾಗಿ ಸುರಿಯಿತು.

Advertisement

ಶನಿವಾರ ಸಂಜೆ 7 ಗಂಟೆಯಿಂದ 4 ಗಂಟೆಯವರೆಗೆ ಅಂದರೆ ಸುಮಾರು 9 ಗಂಟೆ ಕಾಲ ಸತತ ಧಾರಾದಾರ ಮಳೆ ಬಂದಿದೆ. ಶನಿವಾರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ನಿನ್ನೆಯಿಂದ ಇಂದಿನವರೆಗೂ ಒಟ್ಟು 35 ಮೀ.ಮೀ. ಮಳೆಯಾಗಿದೆ.

ಕಮಲಾಪುರ ತಾಲೂಕಿನ ಕಮಲಾಪುರದಲ್ಲಿ 14.8 ಮೀ.ಮೀ, ಮಹಾಗಾಂವ 18 ಮೀ. ಮೀ, ಶಹಾಬಾದ್ ತಾಲೂಕಿನಲ್ಲಿ 11 ಮೀ.ಮೀ, ಜೇವರ್ಗಿ ತಾಲೂಕಿನಲ್ಲಿ 28.4 ಮೀ.ಮೀ, ಯಡ್ರಾಮಿ ತಾಲೂಕಿನಲ್ಲಿ 31.2 ಮೀ.ಮೀ,  ಆಳಂದ ತಾಲೂಕಿನಲ್ಲಿ 42 ಮೀ.ಮೀ, ಸೇಡಂ ತಾಲೂಕಿನಲ್ಲಿ 97.4 ಮೀ.ಮೀ, ಚಿಂಚೋಳಿ ತಾಲೂಕಿನಲ್ಲಿ 42.4 ಮೀ.ಮೀ, ಚಿತ್ತಾಪುರ ತಾಲೂಕಿನಲ್ಲಿ 105.2 ಮೀ.ಮೀ, ಕಾಳಗಿ ತಾಲೂಕಿನಲ್ಲಿ 22.4 ಮೀ.ಮೀ ಮಳೆಯಾಗಿದೆ.

ಜೂನ್‌ ತಿಂಗಳಲ್ಲಿ ಬರಬೇಕಾಗಿದ್ದ ಮಳೆ ಒಂದು ತಿಂಗಳ ತಡವಾಗಿ ಜುಲೈ ತಿಂಗಳ‌‌ ಮೊದಲ ವಾರದಲ್ಲಿ ಮಳೆ ಬಂದಿತ್ತು. ಆಗ ಜಿಲ್ಲೆಯಲ್ಲಿ ರೈತರು ಜೋಳ, ತೊಗರಿ, ಗೋದಿ ಸೇರಿದಂತೆ ಇತರ ಬೆಳೆಗಳನ್ನು ಬಿತ್ತನೆ ಮಾಡಿದರು. ಮತ್ತೆ ಮಳೆರಾಯ ತಿರುಗಿ ನೋಡಲೇ ಇಲ್ಲ. ಇದರಿಂದ ರೈತರು ಕಂಗಾಲಾಗಿ ಮೋಡದತ್ತ ನೋಡುತ್ತ ಈಗ ಮಳೆ ಬಂದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯ ಇಲ್ಲದಿದ್ದರೆ ಬೆಳೆ ಹಾಳಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆ ಬಾರದೆ ಇರುವುದರಿಂದ ರಾಜ್ಯ ಸರಕಾರ ತಲೆ ಕೆಡಿಸಿಕೊಂಡು ಬರಗಾಲ ಘೋಷಿಸುವ ಕುರಿತು ಚಿಂತನೆ ನಡೆಸುತ್ತಿದೆ.

Advertisement

ಈ ಮಧ್ಯೆ ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಚಾಮರಾಜನಗರ, ಚಿಕ್ಕ ಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು,ಮಂಡ್ಯ, ಮೈಸೂರು, ರಾಮನಗರ, ತುಮಕೂರು,  ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶನಿವಾರದಿಂದ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದ ಧಾರಾಕಾರ ಮಳೆ ಬರುತ್ತಿದ್ದು, ಈ ಮಳೆ ಭಾನುವಾರವೂ ಮುಂದುವರಿದಿದೆ.

ಇದನ್ನೂ ಓದಿ:ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ..?: ಸರ್ಕಾರದ ನಿಲುವು ಪ್ರಕಟಿಸಿದ ಅನುರಾಗ್ ಠಾಕೂರ್

ಶನಿವಾರದಿಂದ ಮಳೆ ಆರಂಭವಾಗಿದ್ದು, ಈ ಮಳೆ ಬೆಳೆಗಳಿಗೆ ಜೀವ ತುಂಬಿದಂತಾಗಿದ್ದು, ರೈತರು ಸಂತಸಗೊಂಡಿದ್ದು,ಈ ಮಳೆ ಇನ್ನೂ ನಾಲ್ಕೈದು ದಿನವ ಬಂದರೆ ಬೆಳೆಗಳು ಉತ್ತಮ ಬೆಳೆದು ಉತ್ತಮ ಫಸಲು ನೀಡಬಹುದು ಎನ್ನುತ್ತಾರೆ ಅನ್ನದಾತರು.

ಮಳೆಯಿಂದಾಗಿ ಜಿಲ್ಲೆಯ ಎಲ್ಲ ನದಿ, ಹಳ್ಳ, ಕೊಳ್ಳಗಳಿಗೆ ನೀರು ಬಂದಿದೆ. ಬತ್ತುತ್ತಿರುವ ಕೊಳವೆ ಬಾವಿಗಳಿಗೆ ಮರುಪುರಣವಾಗಿವೆ. ಒಟ್ಟಾರೆ ಈ ಮಳೆ ಜನ, ಜಾನುವಾರು, ಬೆಳೆಗಳಿಗೆ ಅನುಕೂಲವಾಗುವಂತಾಗಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯಲ್ಲಿ ಜೋಳ ಶೇ. 62 ರಷ್ಟು ಬಿತ್ತನೆಯಾದರೆ, ಅಕ್ಕಿ ಶೇ.41, ತೊಗರಿ ಶೇ.98ರಷ್ಟು, ಕಡಲೆಕಾಯಿ ಶೇ.10ರಷ್ಟು, ಎಳ್ಳು ಶೇ. 19 ರಷ್ಟು, ಸೂರ್ಯಕಾಂತಿ ಶೇ. 39 ರಷ್ಟು, ಸೋಯಾಬಿನ್ ಶೇ.96 ರಷ್ಟು, ಹತ್ತಿ ಶೇ. 105 ರಷ್ಟು, ಕಬ್ಬು ಶೇ. 109 ರಷ್ಟು ಬಿತ್ತನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next