Advertisement
ಉತ್ತರ ಕರ್ನಾಟಕದಲ್ಲಿ ಮಳೆ ತಗ್ಗಿದ್ದರೂ ಅನಾಹುತ ಮಾತ್ರ ನಿಂತಿಲ್ಲ. ಟಿಬಿ ಡ್ಯಾಂ ಒಂದೇ ವರ್ಷದಲ್ಲಿ 4ನೇ ಬಾರಿ ಭರ್ತಿಯಾಗಿದ್ದು ತೀರ ಪ್ರದೇಶದಲ್ಲಿ ನೆರೆ ಆವರಿಸಿದೆ. ಹಲವೆಡೆ ಸಂಪರ್ಕ ಕಡಿತಗೊಂಡಿದೆ.
ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ರಾಮನಗರ, ಚಿಕ್ಕಬಳ್ಳಾಪುರ ಸೇರಿ ಹಲವೆಡೆ ಸುರಿದ ಧಾರಾಕಾರ ಮಳೆಗೆ ನೂರಾರು ಕೆರೆಗಳು ಭರ್ತಿಯಾಗಿ ಕೋಡಿ ಹರಿದ ಪರಿಣಾಮ ಬಡಾವಣೆಗಳು ಜಲಾವೃತವಾಗಿದೆ. ಹಾಸನ ನಗರದ ಹೊರ ವಲಯದ ದೊಡ್ಡಕೊಂಡಗೊಳ ಕೆರೆ ಕೋಡಿ ಹರಿದು ತವರುದೇವರ ಕೊಪ್ಪಲು ಬಳಿ ಹಾಸನ – ಹಳೆಬೀಡು ರಾಜ್ಯ ಹೆದ್ದಾರಿ ಜಲಾವೃತವಾಯಿತು. ತೇಜೂರು ಕೆರೆ, ಸತ್ಯವಂಗಲ, ಬೂವನಹಳ್ಳಿ, ಗವೇನಹಳ್ಳಿ ಬುಸ್ತೇನಹಳ್ಳಿ ಮತ್ತು ಹುಣಸಿನ ಕೆರೆ ಭರ್ತಿಯಾಗಿ ಕೋಡಿ ಹರಿದಿವೆ.
Related Articles
ನಿರಂತರ ಮಳೆ ಕೃಷಿ ಚಟುವಟಿಕೆಗಳ ಮೇಲೂ ದುಷ್ಪರಿಣಾಮ ಬೀರಿದೆ. ಶೇಂಗಾ ಮತ್ತಿತರ ಬೆಳೆಗಳ ಕೊಯ್ಲಿಗೆ ಮಳೆ ಅಡ್ಡಿಯಾಗಿದೆ. ಹೂವಿನ ಬೆಳೆ ಕೊಳೆಯುವಂತಾಗಿದೆ. ಚಿಕ್ಕಬಳ್ಳಾಪುರದಲ್ಲಿ ದಾಳಿಂಬೆ, ದ್ರಾಕ್ಷಿ, ಡ್ರ್ಯಾಗನ್ ಫ್ರೂಟ್ಸ್, ತರಕಾರಿ, ಹೂ ಕೃಷಿಗೆ ನಿರಂತರ ಮಳೆ ಭಾರೀ ಹೊಡೆತ ನೀಡಿದೆ. ಹಾಸನ ತಾಲೂಕಿನ ದುದ್ದ ಹೋಬಳಿಯ ಹಿರಿಕಡಲೂರು ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಅಚ್ಚುಕಟ್ಟು ಪ್ರದೇಶದ ಮೇಲೆ ಹರಿದಿದೆ. ನೂರಾರು ಎಕರೆ ಪ್ರದೇಶದ ಮೆಕ್ಕೆಜೋಳ, ಅಡಿಕೆ, ಶುಂಠಿ, ಎಲೆ ಕೋಸು ಮೊದಲಾದ ಬೆಳೆ ಮಣ್ಣು ಪಾಲಾಗಿವೆ. ಗದಗ ಜಿಲ್ಲೆ ನರೇಗಲ್ಲನಲ್ಲಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಪ್ರದೇಶಲ್ಲಿ ಬೆಳೆದಿದ್ದ ಈರುಳ್ಳಿ ಕೊಚ್ಚಿ ಹೋಗಿದೆ. ಡಂಬಳದಲ್ಲಿ ಸೂರ್ಯಕಾಂತಿ, ಮೆಕ್ಕೆಜೋಳ, ಶೇಂಗಾ, ಹತ್ತಿ ಬೆಳೆ ಜಲಾವೃತವಾಗಿವೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಬಳ್ಳೂರ ಗ್ರಾಮದ ಸರಕಾರಿ ಶಾಲೆಗೆ ಜಲದಿಗ್ಬಂಧನವಾಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಕೃಷಿ ಚಟುವಟಿಕೆಗೆ ಮಳೆ ಅಡ್ಡಿಯಾಗಿದೆ.
Advertisement
ಪ್ರಕೃತಿ ವಿಕೋಪದಿಂದ ಬಿದ್ದಿರುವ ಮಳೆ ಕಾರಣದಿಂದ ಆಗಿರುವ ಅನಾಹುತಗಳಿಗೆ ಪರಿಹಾರ ನೀಡುತ್ತೇವೆ. ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಮಳೆ ಅನಾಹುತಗಳ ಕುರಿತು ನಿಗಾ ವಹಿಸಿದ್ದೇವೆ. ಸ್ಥಳ ಸಮೀಕ್ಷೆ ಕೂಡ ನಡೆಯುತ್ತಿದೆ. ಪರಿಹಾರ ನೀಡುತ್ತೇವೆ.-ಸಿದ್ದರಾಮಯ್ಯ, ಸಿಎಂ