ಹುಬ್ಬಳ್ಳಿ: ಮಳೆಗಾಲದ ಸಂಕಷ್ಟ ನಿವಾರಣೆಗೆ ರಚನೆಗೊಂಡಿದ್ದ ಪಾಲಿಕೆ ತುರ್ತು ಕಾರ್ಯಾಚರಣೆ ತಂಡ ಅರ್ಥ ಕಳೆದುಕೊಂಡಿದೆ. ಇದಕೆಂದೇ ಇದ್ದ ಯಂತ್ರೋಪಕರಣಗಳು, ಸಲಕರಣೆಗಳು ಪಾಲಿಕೆ ಆವರಣದಲ್ಲಿ ತುಕ್ಕು ಹಿಡಿಯುತ್ತಿದ್ದರೂ ನೋಡುವವರಿಲ್ಲ. ಮಳೆ ಅನಾಹುತ ಸೃಷ್ಟಿಸಿದಾಗೊಮ್ಮೆ ಭೇಟಿ, ಪರಿಶೀಲನೆ, ಸಭೆ, ಕ್ರಮದ ಎಚ್ಚರಿಕೆ ಮೊಳಗಿ ಮತ್ತೂಂದು ಅನಾಹುತದವರೆಗೂ ಕ್ರಮವಿಲ್ಲದೆ ಮೌನವಾಗಿ ಬಿಡುತ್ತದೆ.
ಮಳೆಗಾಲದ ಪೂರ್ವವಾಗಿಯೇ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಮಹಾನಗರ ಪಾಲಿಕೆ ಮಳೆ ಬಿದ್ದು ಒಂದಿಷ್ಟು ಅನಾಹುತ ಸೃಷ್ಟಿಸಿದ ನಂತರ ಪರಿಹಾರ ಕ್ರಮಗಳ ಬಗ್ಗೆ ಮಾತು ಶುರುವಿಟ್ಟುಕೊಳ್ಳುತ್ತದೆ. ಜನಪ್ರತಿನಿಧಿಗಳು ಸಹ ಪೂರ್ವಭಾವಿಯಾಗಿ ಸಭೆ ಕರೆದು ಚರ್ಚಿಸಿ ಕ್ರಮಕ್ಕೆ ಸೂಚಿಸದೆ, ಅನಾಹುತದ ನಂತರ ಸಭೆಗೆ ಮುಂದಾಗುತ್ತಿದ್ದಾರೆ.
ನಾಲಾ-ಚರಂಡಿಗಳ ಸ್ಥಿತಿ: ಏಪ್ರಿಲ್ನಲ್ಲಿಯೇ ನಾಲಾ-ಚರಂಡಿಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ ಈ ನಿಟ್ಟಿನಲ್ಲಿ ಸಮರ್ಪಕ ಕಾರ್ಯವಾಗಿಲ್ಲ ಎಂಬುದಕ್ಕೆ ಅನೇಕ ನಾಲಾ-ಚರಂಡಿಗಳು ಸಾಕ್ಷಿ ಹೇಳುತ್ತಿವೆ. ಒಂದು ನಾಲಾ ಸ್ವಚ್ಛತೆಗೆ ಸ್ವಲ್ಪ ಕ್ರಮ ಕೈಗೊಂಡಿದ್ದು ಬಿಟ್ಟರೆ, ಉಳಿದ ನಾಲಾಗಳ ಸ್ವಚ್ಛತೆಗೆ ಸಮರ್ಪಕ ಕ್ರಮದ ಕೊರತೆ ಕಾಣುತ್ತಿದೆ. ಅಲ್ಲದೆ ಚರಂಡಿಗಳ ಸ್ವಚ್ಛತೆ ಕಾರ್ಯವೂ ಸರಿಯಾಗಿ ನಡೆದಿಲ್ಲ. ಕೆಲವೆಡೆ ಚರಂಡಿಗಳ ಹೂಳು ತೆಗೆದರೂ ಅದನ್ನು ಅಲ್ಲಿಯೇ ಬಿಡಲಾಗಿದೆ. ಗಾಳಿ, ನೀರಿನಿಂದ ಮತ್ತೆ ಅದು ಚರಂಡಿಯನ್ನೇ ಸೇರುತ್ತಿದೆ. ಹೂಳು ತುಂಬಿದ್ದರಿಂದಾಗಿ ಚರಂಡಿಯಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ನೀರು ಬಂದರೂ ಅದು ರಸ್ತೆ ಮೇಲೆ ಹರಿಯಲು ಶುರುವಿಟ್ಟುಕೊಳ್ಳುತ್ತ್ತಿದೆ. ಈ ಹಿಂದೆ ಚರಂಡಿಯಲ್ಲಿ ಬಾಲಕನೊಬ್ಬ ಕೊಚ್ಚಿ ಹೋಗಿ ಮೃತಪಟ್ಟ ಘಟನೆಯನ್ನೂ ಮರೆಯುವಂತಿಲ್ಲ.
ಇತ್ತೀಚೆಗೆ ನಗರದ ವಿವಿಧೆಡೆ ಸಿಆರ್‌ಎಫ್ ನಿಧಿಯಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳ ಅವೈಜ್ಞಾನಿಕ ಸ್ಥಿತಿ ಸಹ ಮಳೆ ನೀರಿನಿಂದಾಗುವ ಅನಾಹುತಗಳಿಗೆ ತಮ್ಮದೇ ಕೊಡುಗೆ ನೀಡತೊಡಗಿವೆ. ಮೊದಲ ಮಳೆಯಿಂದ ಉಂಟಾದ ಅನಾಹುತಗಳಿಂದ ಪಾಲಿಕೆ ಎಚ್ಚೆತ್ತುಕೊಂಡು ಇನ್ನಾದರೂ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕಿದೆ. ಜನಪ್ರತಿನಿಧಿಗಳು ಸಭೆ ನಡೆಸಿ, ಕೈಗೊಳ್ಳಬೇಕಾದ ತುರ್ತು ಹಾಗೂ ಪರಿಹಾರ ಕ್ರಮಗಳ ಬಗ್ಗೆ ಸ್ಪಷ್ಟ ಸಂದೇಶ ನೀಡಬೇಕಾಗಿದೆ.
Advertisement
ಇದು ಹುಬ್ಬಳ್ಳಿ-ಧಾರವಾಡ ಮಹಾನಗರದ ಕಥೆ-ವ್ಯಥೆ. ಈ ವರ್ಷದ ಒಂದೇ ದೊಡ್ಡ ಮಳೆಗೆ ಅನೇಕ ಕಡೆ ನೀರು ನುಗ್ಗಿದೆ. 500ಕ್ಕೂ ಅಧಿಕ ಮನೆಗಳು ಸಂಕಷ್ಟ ಎದುರಿಸುವಂತಾಗಿದೆ. ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ನೀರಿನಲ್ಲಿ ತೇಲಾಡಿವೆ. ಕೆಲವೊಂದು ವಸ್ತುಗಳು ನೀರಿಗೆ ಹರಿದು ಹೋಗಿವೆ. ಇನ್ನಷ್ಟು ದೊಡ್ಡ ಮಳೆ ಬಂದರೆ ಗತಿ ಏನು? ಮಹಾನಗರ ಜನತೆಯನ್ನು ಕಾಡುತ್ತಿರುವ ಪ್ರಶ್ನೆ-ಆಂತಕವಿದು.
Related Articles
ತುಕ್ಕು ಹಿಡಿದ ತುರ್ತು ನೆರವಿನ ಕಾರ್ಯಾಚರಣೆ ಸಾಧನ-ಸಲಕರಣೆಗಳು
ಪಾಲಿಕೆ ಆಯುಕ್ತರಾಗಿದ್ದ ಮಣಿವಣ್ಣನ್ ಮಳೆಗಾಲದ ಸಂಕಷ್ಟಕ್ಕೆ ತಕ್ಷಣ ಸ್ಪಂದನೆ ನಿಟ್ಟಿನಲ್ಲಿ ತುರ್ತು ಕಾರ್ಯಾಚರಣೆ ತಂಡ ರಚಿಸಿದ್ದರು. ಫ್ಲಡ್‌ಲೈಟ್, ನೀರೆತ್ತುವ ಪಂಪ್‌ಗ್ಳು, ಮರ ಕತ್ತರಿಸುವ ಯಂತ್ರ, ಮತ್ತಿತರ ಸಾಧನ-ಸಲಕರಣೆಗಳನ್ನು ತಂಡಕ್ಕೆ ಒದಗಿಸಿದ್ದರು. ಮಾರ್ಚ್‌ನಿಂದ ಸೆಪ್ಟಂಬರ್‌ವರೆಗೂ ಈ ತಂಡ ಸನ್ನದ್ಧ ಸ್ಥಿತಿಯಲ್ಲಿರುತ್ತಿತ್ತು. ಯಾವುದೇ ಸಮಯದಲ್ಲಿ ಸಂಕಷ್ಟ ಎದುರಾದರೆ ಸ್ಪಂದಿಸುತ್ತಿತ್ತು. ಏಪ್ರಿಲ್ ಮೊದಲ ವಾರದಲ್ಲಿಯೇ ನಾಲಾ, ರಾಜಕಾಲುವೆಗಳ ಸ್ವಚ್ಛತೆ ಕೈಗೊಳ್ಳಲಾಗುತ್ತಿತ್ತು. ಮಳೆ ಹಾನಿ ಬಗ್ಗೆ ತಕ್ಷಣಕ್ಕೆ ಪಾಲಿಕೆಗೆ ಮಾಹಿತಿ ನೀಡಲು ಪ್ರತ್ಯೇಕ ದೂರವಾಣಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೆಲ್ಲವೂ ಈಗ ಇತಿಹಾಸ. ಮಣಿವಣ್ಣನ್ ವರ್ಗವಾದ ನಂತರ ಬಂದ ಪಾಲಿಕೆ ಆಯುಕ್ತರು ತುರ್ತು ಕಾರ್ಯಾಚರಣೆ ತಂಡ, ಅದಕ್ಕಾಗಿ ಇದ್ದ ಸಲಕರಣೆ, ಯಂತ್ರಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿಲ್ಲ. ಪರಿಣಾಮ ಅವು ಪಾಲಿಕೆ ಆಯುಕ್ತರ ನಿವಾಸದ ಬಳಿ ತುಕ್ಕು ಹಿಡಿಯುವ ಸ್ಥಿತಿಯಲ್ಲಿ ಬಿದ್ದಿವೆ.
ಮಳೆಗಾಲ ಪೂರ್ವದಲ್ಲಿಯೇ ನಾಲಾ-ರಾಜಕಾಲುವೆ, ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಯಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ಸೇರಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು. ಸಾರ್ವಜನಿಕರ ಸಭೆ ನಡೆಸಿ ಅನಿಸಿಕೆ ಆಲಿಸಿದರೆ ವಾಸ್ತವ ಸ್ಥಿತಿ ಮಾಹಿತಿ ದೊರೆಯುತ್ತದೆ. ಮಳೆಯಿಂದ ಎಲ್ಲೆಲ್ಲಿ ಸಮಸ್ಯೆ ಎನ್ನುವುದರ ನೀಲನಕ್ಷೆ ಇರಬೇಕು. ಇವುಗಳಲ್ಲಿ ಕೊರತೆ ಕಂಡುಬಂದಾಗ, ಮಳೆ ತನ್ನದೇ ಅನಾಹುತ ಸೃಷ್ಟಿಸದೆ ಬಿಡದು. • ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ
•ಅಮರೇಗೌಡ ಗೋನವಾರ
Advertisement