Advertisement

ಕರಾವಳಿ, ಕೊಡಗು ಜಿಲ್ಲೆಯ ವಿವಿಧೆಡೆ ಭಾರೀ ಮಳೆ, ಹಾನಿ

10:33 PM May 01, 2022 | Team Udayavani |

ಮಂಗಳೂರು: ಕರಾವಳಿ ಭಾಗದಲ್ಲಿ ಉರಿ ಸೆಕೆ ಮುಂದುವರಿದಿದೆ. ಈ ನಡುವೆ ಸುಳ್ಯ, ಕಡಬ ತಾಲೂಕುಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ರವಿವಾರ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಭಾರೀ ಗಾಳಿ ಬೀಸಿದ್ದು, ಹಾನಿ ಸಂಭವಿಸಿದೆ.

Advertisement

ಕಲ್ಮಡ್ಕ, ಮರ್ಕಂಜ, ಉಬರಡ್ಕ, ಬಳ್ಪ, ಪಂಜ ಮೊದಲಾದೆಡೆ ಸತತ ಮೂರನೇ ದಿನ ಮಳೆಯಾಗಿದೆ. ಪಂಬೆತ್ತಾಡಿ, ಪಂಜಿಕಲ್ಲಿನಲ್ಲಿ ಗಾಳಿ, ಸಿಡಿಲು ಸಹಿತ ಮಳೆಯಾಗಿದೆ. ಬಂಟ್ವಾಳ, ಮಂಗಳೂರು ತಾಲೂಕಿನ ಕೆಲವು ಪ್ರದೇಶಗಳಲ್ಲೂ ರವಿವಾರ ಬೆಳಗ್ಗಿನ ಜಾವ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರವಿವಾರ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ 32.8 ಡಿ.ಸೆ. ಗರಿಷ್ಠ ತಾಪಮಾನ ಮತ್ತು 26.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ಹಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಸುಳ್ಯ: ಸುಳ್ಯ ತಾಲೂಕಿನ ವಿವಿಧೆಡೆ ರವಿವಾರ ಮುಂಜಾನೆ ಗುಡುಗು, ಗಾಳಿ ಸಹಿತ ಸುರಿದ ಮಳೆಯಿಂದಾಗಿ ಹಲವು ಮನೆಗಳಿಗೆ, ಕೃಷಿ ತೋಟಗಳಿಗೆ ಹಾನಿಯಾಗಿದೆ.

ಪಂಜದ ಕಂರ್ಬಿ ಪರಿಸರದಲ್ಲಿ ಅಡಿಕೆ ಮರಗಳು ನೆಲಕ್ಕುರುಳಿವೆ. ವಿದ್ಯುತ್‌ ಕಂಬ, ತಂತಿಗಳಿಗೂ ಹಾನಿಯಾಗಿದೆ. ನಾಗತೀರ್ಥ ಶೇಷಪ್ಪ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ನಾಗತೀರ್ಥದ ವಿಮಲಾ, ಮೋನಪ್ಪ ಮೂಲ್ಯ, ಬಿಳಿಮಲೆಯ ವಸಂತ, ಯತಿರಾಜ ಅವರ ಮನೆಗೂ ಹಾನಿಯಾಗಿದೆ. ಬಿಳಿಮಲೆಯ ತೀರ್ಥೇಶ್‌ ಅವರ ಕೊಟ್ಟಿಗೆಗೆ ತೆಂಗಿನಮರ ಬಿದ್ದಿದೆ. ಈಶ್ವರ ಗೌಡ ಅವರ ತೋಟ ಸೇರಿದಂತೆ ಹಲವರ ತೋಟಗಳಲ್ಲಿ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ. ಹಲವೆಡೆ ಮನೆ, ಮೇಲ್ಛಾವಣಿ, ಕೊಟ್ಟಿಗೆಗಳು ಹಾನಿಗೊಳಗಾಗಿವೆ. ಘಟನ ಸ್ಥಳಗಳಿಗೆ ಕಂದಾಯ ಇಲಾಕಾಧಿಕಾರಿಗಳು, ಗ್ರಾ.ಪಂ.ನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಕಲ್ಮಡ್ಕ ಗ್ರಾಮದ ಉಡುವೆಕೋಡಿ ಕುಂಞಣ್ಣ ನಾಯ್ಕ ಅವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಜಖಂ ಗೊಂಡಿವೆ. ಆಗ ಮನೆಯೊಳಗೆ ಯಾರೂ ಇರದಿದ್ದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ.

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ರವಿವಾರ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಹಾನಿಯಾಗಿದೆ. ನಿರಂತರ ಗುಡುಗು, ಸಿಡಿಲು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.

ದಕ್ಷಿಣ ಕೊಡಗಿನ ಗೋಣಿಕೊಪ್ಪ, ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗೋಣಿಕೊಪ್ಪದಲ್ಲಿ ಮಳೆಯ ಆರ್ಭಟಕ್ಕೆ ಅಂಗಡಿ ಮುಂಗಟ್ಟುಗಳ ನಾಮಫ‌ಲಕಗಳು ನೆಲಕ್ಕುರುಳಿವೆ.

ಮಾರಾಟಕ್ಕಿಟ್ಟ ವಸ್ತುಗಳು ರಸ್ತೆ ಪಾಲಾಗಿವೆ. ಮನೆಗಳ ಹೆಂಚುಗಳು ಮತ್ತು ಮೇಲ್ಛಾವಣಿಗಳು ಹಾರಿ ಹೋಗಿವೆ. ಸಂತೆ ದಿನವಾದ ರವಿವಾರ ದಿಢೀರ್‌ ಆಗಿ ಗಾಳಿ ಮಳೆಯಾದ ಕಾರಣ ಸಂತೆ ವ್ಯಾಪಾರಿಗಳು ಅಪಾರ ನಷ್ಟ ಅನುಭವಿಸಿದರು. ಸಿಡಿಲಬ್ಬರಕ್ಕೆ ಜನ ಆತಂಕಗೊಂಡರು. ವಿದ್ಯುತ್‌ ಕಂಬಗಳು ಕೂಡ ಬಿದ್ದಿದ್ದು, ಪಟ್ಟಣ ಮತ್ತು ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಧರೆಗುರುಳಿದ ಮರಗಳು
ಕೊಡಗಿನ ಗಡಿಭಾಗ ಬೈಲುಕೊಪ್ಪದಲ್ಲಿ ಸುರಿದ ಗಾಳಿ ಮಳೆಗೆ ತೆಂಗಿನ ಮರ ಸೇರಿದಂತೆ ಇತರ ಮರಗಳು ಧರೆಗುರುಳಿವೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಯ ಮೇಲೆ ತೆಂಗಿನ ಮರ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದು ಹಾನಿ ಸಂಭಿವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next