Advertisement

ಜಿಲ್ಲೆಯಲ್ಲಿ ಐದು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ

10:49 PM Jul 18, 2019 | Team Udayavani |

ಮಡಿಕೇರಿ : ಭಾರತೀಯ ಹವಾಮಾನ ಇಲಾಖೆಯು ಕೊಡಗು ಜಿಲ್ಲೆಯಾದ್ಯಾಂತ ಜು.18 ರಿಂದ 22 ರ ವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ನೀಡಿದೆ. ಇದಕ್ಕೆ ಪೂರಕವೆಂಬಂತೆ ಬುಧವಾರ ಸಂಜೆಯಿಂದ ಜಿಲ್ಲೆಯಲ್ಲಿ ಸಾಧಾರಣ ಮಳೆ ಆರಂಭಗೊಂಡಿದೆ.

Advertisement

ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಸ್ನೇಹಾ ಅವರ ಉಪಸ್ಥಿತಿಯಲ್ಲಿ ಹಾಗೂ ಎನ್‌ಡಿಆರ್‌ಎಫ್ ತಂಡ ಪ್ರಮುಖರ ಜತೆ ನಡೆದ ಸಭೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಜಿಲ್ಲೆಯಲ್ಲಿ ಜುಲೈ 18 ರಿಂದ 22 ರವರೆಗೆ ಆರೇಂಜ್‌ ಅಲರ್ಟ್‌ ಘೋಷಿಸಿಲಾಗಿದ್ದು, 115ರಿಂದ 204 ಮಿ.ಮೀ ವರೆಗೆ ಮಳೆ ಬೀಳುವ ಸಾಧ್ಯತೆ ಇದ್ದು, ತುರ್ತು ಕಾರ್ಯ ನಿರ್ವಹಣೆಗೆ ಸನ್ನದ್ಧವಾಗಿರುವಂತೆ ಅವರು ನಿರ್ದೇಶನ ನೀಡಿದರು.

ಎಲ್ಲ ಇಲಾಖೆಯ ಅಧಿಕಾರಿಗಳು ಎನ್‌ಡಿಆರ್‌ಎಫ್ ತಂಡದ ಸಹಕಾರದೊಂದಿಗೆ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ರಕ್ಷಣೆ, ತೊಂದರೆಗೊಳಗಾದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು, ಹಾಗೂ ಇತರೆ ರಕ್ಷಣ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎನ್‌ಡಿಆರ್‌ಎಫ್ನ ನಿರೀಕ್ಷಕರಾದ ಅಮಿತ್‌ ಚೌಧರಿ ಅವರು ಮಾತನಾಡಿ ಮೇ 25 ರಿಂದ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್ ತಂಡವು ವಿವಿಧ ಗ್ರಾಮಗಳಲ್ಲಿ ಹಾಗೂ ಕಳೆದ ಬಾರಿ ಅತೀವೃಷ್ಟಿ ಸಂಭವಿಸಿದ ಪ್ರದೇಶದ ವ್ಯಾಪ್ತಿಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕನ ಮಾಡಲಾಗಿದೆ. ಜೊತೆಗೆ ಈಗಾಗಲೇ ಅಣುಕು ಪ್ರದರ್ಶನ ಏರ್ಪಡಿಸಿ ಸಾರ್ವಜನಿಕರಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡಲಾಗಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.

Advertisement

ಜಿಲ್ಲೆಯ ಭೌಗೋಳಿಕ ಪ್ರದೇಶದ ಪರಿಚಯ ಮತ್ತು ಜನರ ಪರಿಚಯ ಮಾಡಿ ನಾಗರಿಕರಿಗೆ ಎನ್‌ಡಿಆರ್‌ಎಫ್ನ ವಿಪತ್ತು ನಿರ್ವಹಣೆಯ ಸ್ಪಂದನೆ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದ‌ು ಅಮಿತ್‌ ಚೌಧರಿ ಹೇಳಿದರು.

ಜಿಲ್ಲಾ ಅಗ್ನಿಶಾಮಕಾಧಿಕಾರಿ ಚಂದನ್‌, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ಥಾನಿಕ ವೈದ್ಯಾಧಿಕಾರಿ ಡಾ| ಮಂಜುನಾಥ್‌, ತಾಲೂಕು ವೈದ್ಯಾಧಿಕಾರಿ ಡಾ|ಎ.ಸಿ.ಶಿವಕುಮಾರ್‌, ಯುನಿಸೆಫ್ನ ಸಮಾಲೋ ಚಕರಾದ ಪ್ರಭಾತ್‌ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.

ತರಬೇತಿ
ಜುಲೈ, 22 ರ ನಂತರ ನೋಡಲ್ ಅಧಿಕಾರಿಗಳಿಗೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ, ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆ ಸಂಬಂಧ ತರಬೇತಿ ನೀಡಲಾಗುವುದು, ಜೊತೆಗೆ ಸಮುದಾಯ ವಿಪತ್ತು ನಿರ್ವಹಣಾ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್‌ಡಿಆರ್‌ಎಫ್ನ ನಿರೀಕ್ಷಕರಾದ ಅಮಿತ್‌ ಚೌಧರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next