ಸಕಲೇಶಪುರ: ಆಷಾಡದಲ್ಲಿ ಕೈಕೊಟ್ಟ ಮಳೆ ಶ್ರಾವಣ ದಲ್ಲಿ ಭರ್ಜರಿಯಾಗಿ ಸುರಿಯುತ್ತಿರುವುದರಿಂದ ಮಲೆನಾಡಿನ ಜನರಿಗೆ ಸಂತೋಷ ಉಂಟಾಗಿದೆ.
2018ರ ಸಾಲಿನಲ್ಲಿ ಅತಿವೃಷ್ಟಿಯಿಂದ ತಾಲೂಕು ನಲುಗಿ ಹೋಗಿದ್ದು, ಈ ಬಾರಿ ಜೂನ್ ಹಾಗೂ ಜುಲೈ ಮಾಹೆಯಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಬಿದ್ದಿದ್ದ ರಿಂದ ಜನರಲ್ಲಿ ಆತಂಕ ಹುಟ್ಟಿತ್ತು. ಆದರೆ ಇದೀಗ ಭರ್ಜರಿ ಮಳೆಯಾಗುತ್ತಿರುವುದರಿಂದ ಜನರ ಚಿಂತೆ ದೂರವಾಗಿದೆ.
ವಾಡಿಕೆಗಿಂತ ಕಡಿಮೆ ಮಳೆ: 2019ರ ಜ.1ರಿಂದ ಆ.3ರವರೆಗೆ ತಾಲೂಕಿನಲ್ಲಿ ವಾಡಿಕೆಯಂತೆ 1,475 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಒಟ್ಟು 1,272 ಮಿ.ಮೀ. ಮಳೆಯಾಗಿದ್ದು, ಇದರಿಂದ ಶೇ.14 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೆಳಗೋಡು ಹೋಬಳಿಯಲ್ಲಿ 1,359 ಮಿ.ಮೀ. ವಾಡಿಕೆ ಮಳೆ ಯಾಗಬೇಕಾಗಿದ್ದು ಆದರೆ ಕೇವಲ 747 ಮಿ.ಮೀ. ಮಳೆಯಾಗಿರುವುದರಿಂದ ಶೇ.45 ಮಳೆ ಕೊರತೆ ಬೆಳಗೋಡು ಹೋಬಳಿಯಲ್ಲಿ ಉಂಟಾಗಿದೆ.
ಸಕಲೇಶಪುರ ಹೋಬಳಿಯಲ್ಲಿ 1,382 ಮಿ.ಮೀ. ಮಳೆಯಾಗಬೇಕಾಗಿದ್ದು ಆದರೆ 1,128 ಮಿ.ಮೀ. ಮಳೆಯಾಗಿದ್ದು, ಶೇ.18 ಮಳೆ ಕೊರತೆ ಉಂಟಾಗಿದೆ. ಹಾನುಬಾಳ್ ಹೋಬಳಿಯಲ್ಲಿ 1,610 ಮಿ.ಮೀ. ಮಳೆ ಯಾಗಬೇಕಾಗಿತ್ತು. ಆದರೆ 1,531ಮಿ.ಮೀ. ಮಳೆ ಉಂಟಾಗಿದ್ದು ಶೇ.5 ಕಡಿಮೆ ಮಳೆಯಾಗಿದೆ. ಅತಿ ಹೆಚ್ಚು ಮಳೆ ಬೀಳುವ ಹೆತ್ತೂರು ಹೋಬಳಿಯಲ್ಲಿ ವಾಡಿಕೆಯಂತೆ 1,534ಮಿ.ಮೀ. ಮಳೆಯಾಗಬೇಕಾ ಗಿದ್ದು ಆದರೆ ಕೇವಲ 1,508 ಮಿ.ಮೀ. ಮಳೆ ಯುಂಟಾಗಿ ಶೇ.2 ಪ್ರಮಾಣ ಕಡಿಮೆಯಾಗಿದೆ. ಯಸಳೂರು ಹೋಬಳಿಯಲ್ಲಿ 1,318 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 971 ಮಿ.ಮೀ. ಮಳೆಯಾಗಿದ್ದು, ಶೇ.26 ಮಳೆ ಕಡಿಮೆಯಾಗಿದೆ. ಜೂನ್ ತಿಂಗಳಿನಲ್ಲಿ ಒಟ್ಟಾರೆಯಾಗಿ ಶೇ. 31ರಷ್ಟು ಮಳೆಯ ಕೊರತೆ ಉಂಟಾಗಿದ್ದು ಜುಲೈ ತಿಂಗಳಿನಲ್ಲಿ ಶೇ.2 ರಷ್ಟು ಅಧಿಕ ಮಳೆಯಾಗಿದೆ. ಜೂನ್ ಮಾಹೆ ಯಲ್ಲಿ ಕೇವಲ 290ಮಿ.ಮೀ. ಮಳೆಯಾಗಿದ್ದು ಇದೀಗ ಜುಲೈ ಮಾಹೆಯಲ್ಲಿ 799 ಮಿ.ಮೀ. ಮಳೆ ಯಾಗಿದೆ. ಜೂನ್ ತಿಂಗಳಿನಲ್ಲಿ ಕೈಕೊಟ್ಟ ಮಳೆ ಜುಲೈ ನಲ್ಲಿ ತುಸು ಉತ್ತಮವಾಗಿ ಬಂದಿದ್ದು ಇದೀಗ ಆಗಸ್ಟ್ ಮೊದಲ ವಾರದಲ್ಲಿ ಸುರಿಯುತ್ತಿರುವ ಮಳೆ ಮಳೆಯ ಕೊರತೆಯನ್ನು ನೀಗುವ ಎಲ್ಲಾ ಸಾಧ್ಯತೆಗಳಿದೆ.
5 ದಿನದಲ್ಲಿ 180ಮಿ.ಮೀ.ಗೂ ಹೆಚ್ಚು ಮಳೆ: ಕಳೆದ 5 ದಿನಗಳಲ್ಲಿ 180ಮಿ.ಮೀ.ಗೂ ಹೆಚ್ಚು ಮಳೆ ಬಿದ್ದಿದ್ದು ಇದರಿಂದ ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ಏರುತ್ತಿದೆ. ಜೂನ್‌ನನಲ್ಲಿ ಸ್ಥಗಿತಗೊಂಡಿದ್ದ ಭತ್ತದ ನಾಟಿ ಕಾರ್ಯ ಜುಲೈನಲ್ಲಿ ಭರ್ಜರಿಯಾಗಿ ನಡೆದಿದ್ದು ಮಳೆ ಇದೇ ರೀತಿ ಮುಂದುವರಿದಲ್ಲಿ ಕೃಷಿ ಚಟುವಟಿಕೆ ಗಳು ಸಂಪೂರ್ಣವಾಗಿ ಸ್ತಬ್ಧವಾಗುವ ಸಾಧ್ಯತೆಗಳಿದೆ. ಕಳೆದ 5 ದಿನಗಳಿಂದ ಸುರಿಯುತ್ತಿರುವ ಮಳೆ ಯಿಂದಾಗಿ ನದಿ, ಹಳ್ಳ, ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿದ್ದು, ಗದ್ದೆಗಳಲ್ಲಿ ಸಹ ಮಳೆ ನೀರು ನಿಂತಿರು ವುದು ಎಲ್ಲೆಡೆ ಕಂಡು ಬರುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸಹ ಉತ್ತಮ ಮಳೆಯಾಗುತ್ತಿದ್ದು ಇದೇ ರೀತಿ ಮಳೆ ಮುಂದುವರೆದಲ್ಲಿ ಹೊಳೆ ಮಲ್ಲೇಶ್ವರದ ದೇವಸ್ಥಾನಕ್ಕೆ ನೀರು ನುಗ್ಗುವುದರಲ್ಲಿ ಯಾವುದೇ ಅನುಮಾನವಿಲ್ಲ.
● ಸುಧೀರ್ ಎಸ್.ಎಲ್